ಹಸಿವು ನೀಗಿಸಲು ಹೊಸ ಉಪಾಯ

ಬೆಂಗಳೂರು, ಆ. ೧: ಬಡವರು ಮತ್ತು ಹೊಟ್ಟೆಗಿಲ್ಲದವರು ಇದೀಗ ನಗರದಲ್ಲಿ ಆಹಾರಕ್ಕಾಗಿ ಭಿಕ್ಷೆ ಬೇಡಬೇಕಿಲ್ಲ; ಅದಕ್ಕಾಗಿಯೇ ನಗರದ ಅಲ್ಲಲ್ಲಿ ಶೀಥಲಪೆಟ್ಟಿಗೆ (ಫ್ರಿಡ್ಜ್) ಅಳವಡಿಸಲಾಗಿದ್ದು, ಆ ಫ್ರಿಡ್ಜ್‌ಗಳಲ್ಲಿ ನಾಗರಿಕರು ತಂದಿರಿಸುವ ಆಹಾರವನ್ನು ಅಗತ್ಯವಿರುವವರು ಸೇವಿಸುವ ಅವಕಾಶ ಪಡೆದಿದ್ದಾರೆ.
ಈಗಾಗಲೇ ಸಮುದಾಯ ಸೇವಾ ಸಂಸ್ಥೆಗಳು ಇಂತಹ ಸಾರ್ವಜನಿಕ ಫ್ರಿಡ್ಜ್‌ಗಳನ್ನು ನಗರದ ಬಿ.ಟಿ.ಎಂ. ಲೇಔಟ್, ಬ್ರೂಕ್‌ಫೀಲ್ಡ್ಸ್, ಇಂದಿರಾನಗರ, ಕೋರಮಂಗಲ, ಬೆನ್ಸನ್ ಟೌನ್ ಮತ್ತಿತರ ಕಡೆ ಸ್ಥಾಪಿಸಿದ್ದು, ಇಲ್ಲಿ ಹಸಿದವರಿಗಾಗಿ ಉಳಿದ ಅಥವಾ ಹೆಚ್ಚಾದ ಆಹಾರವನ್ನು ತಂದಿರಿಸಲಾಗುತ್ತಿದೆ. ಈ ಸೇವಾ ಚಟುವಟಿಕೆಯಲ್ಲಿ ಕೈಜೋಡಿಸಿರುವ ಸರ್ಕಾರೇತರ ಸಂಸ್ಥೆಗಳು ಹೇಳುವ ಪ್ರಕಾರ ದಿನಂಪ್ರತಿ ಕನಿಷ್ಟ ೪೦೦ ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಬಿಟಿಎಂ ಲೇಔಟ್‌ನಲ್ಲಿ ಇಂತಹ ಸಾರ್ವಜನಿಕ ಫ್ರಿಡ್ಜ್ ಸ್ಥಾಪಿಸಿರುವ ಸಾರ್ವಜನಿಕ ಪ್ರತಿಷ್ಠಾನವೊಂದರ ವ್ಯವಸ್ಥಾಪಕ ಧರ್ಮದರ್ಶಿ ಇಸ್ಸಾ ಫಾತಿಮಾ ಜಾಸ್ಮಿನ್ ಹೇಳುವ ಪ್ರಕಾರ, ಬಿಟಿಎಂ ಲೇಔಟ್ ಫ್ರಿಡ್ಜ್ ಒಂದರಲ್ಲೇ ದಿನವೂ ಬೆಳಗ್ಗೆ ೭ ರಿಂದ ೯ ಗಂಟೆಯೊಳಗೆ ೭೦ ರಿಂದ ೧೦೦ ಮಂದಿ ಆಹಾರ ತೆಗೆದುಕೊಳ್ಳುತ್ತಾರೆ. ಮನೆಯಲ್ಲಿ ತಯಾರಿಸಿದ ಆಹಾರವನ್ನು ಯಾರಾದರೂ ನೀಡಲು ಬಯಸಿದರೆ ಅದನ್ನು ಚೊಕ್ಕವಾಗಿ ಪ್ಯಾಕ್ ಮಾಡಿ ತಂದು ಈ ಫ್ರಿಡ್ಜ್‌ನಲ್ಲಿ ಇಡಬಹುದು. ಅಗತ್ಯವಿರುವವರು ಅದನ್ನು ತೆಗೆದುಕೊಂಡು ಸೇವಿಸುತ್ತಾರೆ ಎಂದು ಅವರು ಮನವಿ ಮಾಡಿದ್ದಾರೆ.
ಸಾರ್ವಜನಿಕ ಫ್ರಿಡ್ಜ್ ಸೇವೆ ಇಸ್ಸಾ ಅವರ ಕಲ್ಪನೆಯ ಕೂಸಾಗಿದೆ. ಮೊದಲೆಲ್ಲಾ ಅವರು ಮನೆಯಲ್ಲಿ ಉಳಿದ ಆಹಾರವನ್ನು ಅಕ್ಕಪಕ್ಕದವರಿಗೆ ನೀಡುತ್ತಿದ್ದರು. ಆದರೆ ಅದನ್ನು ಪಡೆದುಕೊಂಡು ಹೋದವರು ನಂತರ ಅದನ್ನು ಏನು ಮಾಡುತ್ತಿದ್ದರು ಎಂಬುದು ಈಕೆಗೆ ಗೊತ್ತಾಗುತ್ತಿರಲಿಲ್ಲ. ಆಗಾಗ ಉಳಿದ ಆಹಾರ ಹಿಡಿದು ಆಕೆ ಯಾರಾದರೂ ಹಸಿದವರಿದ್ದರೆ ಕೊಡೋಣ ಎಂದು ಊರಲ್ಲಿ ಅಲೆದಾಡಿದ್ದೂ ಉಂಟು! ಹಸಿದವರು ಅದನ್ನು ಪಡೆದುಕೊಂಡದ್ದುಂಟು; ಯಾರೂ ಪಡೆದುಕೊಳ್ಳದಿದ್ದಾಗ ಅದನ್ನು ಎಸೆದದ್ದೂ ಆಗಿದೆ. ಹೀಗಾಗಿ ಅಂತಿಮವಾಗಿ ಸಾರ್ವಜನಿಕ ಫ್ರಿಡ್ಜ್ ಸ್ಥಾಪಿಸುವುದೇ ಇದಕ್ಕೆ ಪರಿಹಾರ ಎಂದು ತೀರ್ಮಾನಿಸಿದ್ದಾಗಿ ಅವರು ಸ್ಪಷ್ಟಪಡಿಸಿದರು.
‘ಅಶಕ್ತರು ಹಾಗೂ ಹಸಿದವರಿಗೆ ನಿಮ್ಮ ಉಳಿದ ಅಥವಾ ಹೆಚ್ಚಾದ ಆಹಾರ ಅಥವಾ ತಿನಿಸು ದಾನ ಕೊಡಿ; ಆದರೆ ಆಹಾರದ ಅಗತ್ಯವಿರುವವರನ್ನು ನೋಯಿಸದಂತೆ ಅಥವಾ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಈ ಪುಣ್ಯದ ಕೆಲಸ ಮಾಡಿ’ ಎಂದು ಇಸ್ಸಾ ಅವರು ಸಾರ್ವಜನಿಕರಿಗೆ ಕಿವಿಮಾತು ಹೇಳುತ್ತಾರೆ.
ಈ ಚಿಂತನೆ ಅನೇಕ ನಿವಾಸಿಗಳು ಹಾಗೂ ಹೊಟೇಲ್ ಮಾಲೀಕರನ್ನೂ ಆಕರ್ಶಿಸಿದೆ. ಇಂದಿರಾ ನಗರದ ಬೈಬ್ಲಾಸ್ ಎಂಬ ಲೆಬನೀಸ್ ಹೋಟೆಲ್‌ನವರು ತಮ್ಮ ಹೋಟೆಲ್ ಹೊರಗೆ ಇಂತಹ ಸಾರ್ವಜನಿಕ ಫ್ರಿಡ್ಜ್ ಸ್ಥಾಪಿಸಿದ್ದಾರೆ. ಇಲ್ಲಿ ದಿನಕ್ಕೆ ೨೦ಕ್ಕೂ ಹೆಚ್ಚು ಮಂದಿ ಆಹಾರ ಪಡೆದುಕೊಳ್ಳುತ್ತಾರೆ. ‘ನಾವು ತಂಗಳು ಇಡುವುದಿಲ್ಲ; ನಮ್ಮ ಸಿಬ್ಬಂದಿಗೆ ಮಾಡಿದ ಅಡುಗೆಯ ಒಂದು ಭಾಗವನ್ನೇ ಫ್ರಿಡ್ಜ್‌ನಲ್ಲಿಡುತ್ತೇವೆ’ ಎಂದು ಬೈಬ್ಲೋಸ್ ವ್ಯವಸ್ಥಾಪಕ ನಿಲೇಶ್ ಬನ್ಸೋಡೆ ಹೇಳುತ್ತಾರೆ.
ಅದೇ ರೀತಿ ಕೋರಮಂಗಲದ ಕ್ಯಾರೋಟ್ಸ್ ಹೋಟೆಲ್ ಹೊರಗೂ ಸಹ ಒಂದು ಫ್ರಿಡ್ಜ್‌ನ್ನು ಹೋಟೆಲ್‌ನವರು ಸ್ಥಾಪಿಸಿದ್ದಾರೆ. ಅದು ಮುಂಜಾನೆಯಿಂದ ಸಂಜೆವರೆಗೆ ೩೦ ರಿಂದ ೪೦ ಮಂದಿಗೆ ಆಹಾರ ಪೂರೈಸುತ್ತಿದೆ. ‘ನಾವು ಇಟ್ಟ ಆಹಾರ ಒಂದು ಗಂಟೆಯೊಳಗೆ ಖಾಲಿಯಾಗುತ್ತದೆ; ಅನೇಕ ಬಾರಿ ನಮ್ಮ ಹೋಟೆಲ್ ಗ್ರಾಹಕರೇ ತಮ್ಮ ಉಳಿಕೆ ಆಹಾರವನ್ನು ಫ್ರಿಡ್ಜ್‌ನಲ್ಲಿಡುತ್ತಾರೆ. ಎಂದು ಕ್ಯಾರೋಟ್ಸ್ ಮುಖ್ಯಸ್ಥ ಅಮಿರ್ ಥಾಪ ಹೆಮ್ಮೆಪಡುತ್ತಾರೆ.
ಇದೇ ಕೋರಮಂಗಲದ ನಿವಾಸಿ ಕೆ. ಪ್ರಶಾಂತಿ ಅವರೂ ಆಗಾಗ ಈ ಸಾರ್ವಜನಿಕ ಫ್ರಿಡ್ಜ್‌ನಲ್ಲ ತಮ್ಮ ಆಹಾರ ತಂದು ಇಡುತ್ತಾರೆ; ಈಕೆಯೂ ಈ ಮುನ್ನ ತಾನು ಬಳಸಿ ಉಳಿದ ಆಹಾರವನ್ನು ವಿಲೇವಾರಿ ಮಾಡಲು ಹಸಿದವರಿಗಾಗಿ ಹುಡುಕಾಡುತ್ತಿದ್ದರಂತೆ!

Leave a Comment