ಹಸಿಮಳೆಯಿಂದ ಹಸನಾಗಿ ಕಾಣುವ ಬೆಳೆ

ಹಿರೇಕೋಗಲೂರು.ಜು.11; ಈ ಭಾಗದಲ್ಲಿ ಕಳೆದ ಹದಿನೈದು- ಇಪ್ಪತ್ತು ದಿನಗಳಿಂದ ಬಯಲಾಗಿದ್ದ ಮಳೆ ಮೋಡಮುಸಿಕಿದ ವಾತಾವರಣವಿದ್ದು ಸೋನೆಯಾಗಿ ಸಣ್ಣನೆ ರಾತ್ರಿಎಲ್ಲಾ ಸಿಂಚನಗೈದ ಮಳೆಯ ಪರಿಣಾಮವಾಗಿ ಈಗ ಹಾಲಿ ಬೆಳೆದು ನಿಂತಿರುವ ಹತ್ತಿ ಮತ್ತು ಮೆಕ್ಕೇಜೋಳದ ಬೆಳೆಗಳು ಒಮ್ಮೆಲೇ ಗರಿಗೆದರಿ ಅಚ್ಚ ಹಸುರಿನಿಂದ ಮೈದುಂಬಿ ಬೀಗುತ್ತಿರುವ ದೃಶ್ಯವನ್ನು ಕಂಡ ಹಳ್ಳಿಯ ಹೈದನೊಬ್ಬ ಮಾತನಾಡಿದ್ದು ಹೀಗೆ ಮಳೆ ಬಂದ ಮರುದಿನ ಬೆಳೆ ನೋಡಲು ಚಂದ ರಾತ್ರಿ ಅಳಿಯ ಮನೆಗೆ ಬಂದರೆ ಬೆಳಿಗ್ಗೆ ಮಗಳ ಮುಖ ನೋಡಲು ಚಂದ” ಎನ್ನುವಂತೆ ಇಂದು ಬೆಳೆಯ ಕಳೆ ಕಂಡುಬರುತ್ತಿದೆ ಎಂದಾಗ ಜೊತೆಯಲ್ಲಿದ್ದವರು ಸಂತಸದ ನಗೆ ಬೀರಿದರು. ಕೃಷಿಕರು ಹಿಂದಿನಿಂದಲೂ ಸೋಮವಾರ ಎತ್ತುಗಳ ಬೇಸಾಯಕ್ಕೆ ಬಿಡುವು (ರಜಾ) ಅನುಸರಿಸಿಕೊಂಡು ಬಂದಿದ್ದರು ಆದರೆ ಈಗ ಕಾಲ ಬದಲಾಗಿದೆ ಎತ್ತುಗಳನ್ನು ಬಳಸದೆ ಟ್ರ್ಯಾಕ್ಟರ್ ಗಳ ಸಹಾಯದ ಬೇಸಾಯದಲ್ಲಿ ಹದಸಿಕ್ಕಿದ್ದೇ ಒಂದು ಸುದೈವವೆಂದು ಕಳೆದ ಸೋಮವಾರ ಬಿತ್ತನೆಗಾಗಿ ಕಾದಿದ್ದ ರೈತರು ತಡಬಡ ರಾಗಿ ಬಿತ್ತನೆಯನ್ನು ಅದೆಷ್ಟೋ ರೈತರು ಮುಗಿಸಿಬಿಟ್ಟಿದ್ದಾರೆ. ಇತ್ತೀಚೆಗೆ ಚಾಲ್ತಿಗೆ ಬಂದಿದ್ದ ಪಾಪ್ ಕಾರ್ನ ಮೆಕ್ಕೇಜೋಳದ ಬೆಳೆ ಬೀಜ ಮೊಳಕೆ ಒಡೆದು ಮೇಲೆ ಬಂದು ಗರಿಗೆದರುತ್ತಿದ್ದಂತೆ ಮಳೆ ಬಯಲಾದ ಹಿನ್ನೆಲೆಯಲ್ಲಿ ಬೆಳೆ ವಿಫಲವಾಗಿದ್ದು ಅಳಿಸಿದ ರೈತರು ಪರ್ಯಾಯ ಬೆಳೆಮಾಡಲು ತಯಾರಿನಡೆಸಿದ್ದಾರೆ. ಮಳೆ ನಡೆಸಿದರೆ ಮಾತ್ರ ಆಷ್ಟಿಷ್ಟು ಫಸಲು ಲಭಿಸುತ್ತದೆ. ಮಳೆಯ ಕಣ್ಣಾಮುಚ್ಚಾಲೆ ಆಟ ಮುಂದುವರಿದರೆ ಬರದ ಬಿಸಿತಪ್ಪಿದ್ದಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಪ್ರಾರಂಭದಲ್ಲಿ ಬಂದ ಮಳೆಗೆ ಹಿಂದೆ ಮುಂದೆ ನೋಡದೆ ದೇವರಮೇಲೆ ಭಾರಹಾಕಿ ಮಕ್ಕೇಜೋಳದ ಬಿತ್ತನೆಮಾಡಿದ್ದು ಮಳೆಬಂದು ಹಸಿಯಾದ ಹಿನ್ನೆಲೆಯಲ್ಲಿ ಒಮ್ಮೆಲೇ ಅಚ್ಚ ಹಸುರಿನಿಂದ ಗರಿಬಿಚ್ಚಿ ಬೀಗುತ್ತಿರುವ ಮೆಕ್ಕೇಜೋಳದ ಬೆಳೆ ಹುಲುಸಾಗಿ ಕಾಣುತ್ತಿದೆ. ಇನ್ನು ಎರಡು ಮೂರು ಹದಮಳೆ ಬಂದರೆ ಬೆಳೆ ಕೈಸೇರುವುದು ಖಚಿತ ಎಂದು ಹೇಳಲಾಗುತ್ತಿದೆ.

Leave a Comment