ಹಳಿ ದಾಟುತ್ತಿದ್ದ ಇಬ್ಬರಿಗೆ ರೈಲು ಡಿಕ್ಕಿ: ಓರ್ವ ಮೃತ್ಯು

ಮಂಗಳೂರು, ಅ.೧೮- ಸಿಡಿಲಿನ ಭಯದಿಂದ ಓಡಿ ರೈಲ್ವೆ ಹಳಿ ದಾಟುತ್ತಿದ್ದ ಇಬ್ಬರು ಯುವಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸುಭಾಷ್ (೨೪) ಮೃತ ದುರ್ದೈವಿ. ಕೂಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಸುಭಾಸ್ ಜೊತೆಗಿದ್ದ ಕೂಲಿ ಕಾರ್ಮಿಕ ಮಂಜುನಾಥ್ (೨೬) ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾವೇರಿ ಜಿಲ್ಲೆಯ ಸುಭಾಷ್ ಹಾಗೂ ಮಂಜುನಾಥ್ ಕೆಲಸಕ್ಕಾಗಿ ಮಂಗಳೂರಿಗೆ ಬಂದಿದ್ದರು. ನಗರ ವಿವಿಧೆಡೆ ಕೂಲಿ ಕೆಲಸ ಮಾಡುತ್ತಿದ್ದ ಯುವಕರು ಎಂದಿನಂತೆ ಗುರುವಾರವೂ ಕೆಲಸಕ್ಕೆ ಹೋಗಿದ್ದರು. ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಗುಡುಗು ಸಿಡಿಲು ಸಹಿತ ಮಳೆ ಸುರಿಯುತ್ತಿತ್ತು. ಇದರಿಂದಾಗಿ ಸಿಡಿಲಿಗೆ ಭಯಬಿದ್ದ ಸುಭಾಷ್ ಹಾಗೂ ಮಂಜುನಾಥ್ ಓಡಲು ಆರಂಭಿಸಿದ್ದರು. ಗೇಟ್ ಇಲ್ಲದ ರೈಲ್ವೆ ಹಳಿ ದಾಟುತ್ತಿದ್ದಾಗ ಏಕಾಏಕಿ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಸುಭಾಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Comment