ಹಲ್ಲೆ ಖಂಡಿಸಿ ವೈದ್ಯರ ಪ್ರತಿಭಟನೆ ಕರವೇ ಕಾರ್ಯಕರ್ತರ ಬಂಧನಕ್ಕೆ ಒತ್ತಾಯ

ದಾವಣಗೆರೆ.ನ.8; ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಐಎಂಎ ಕರೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೈದ್ಯರು ನಡೆಸುತ್ತಿರುವ ಪ್ರತಿಭಟನೆಗೆ ದಾವಣಗೆರೆಯಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ಇಂದು ಬೆಳಗ್ಗೆ ನಗರದ ಬಾಪೂಜಿ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದ್ದ ವೈದ್ಯರು ಹಲ್ಲೆ ನಡೆಸಿದವರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಮಾಡಿ ಹಲ್ಲೆ ನಡೆಸಿದ ಕರವೇ ಕಾರ್ಯಕರ್ತರನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಇತ್ತೀಚಿನ ದಿನಗಳಲ್ಲಿ ವೈದ್ಯರು ಭಯದಿಂದ ಕರ್ತವ್ಯ ನಿರ್ವಹಿಸುವ ಸ್ಥಿತಿ ಉಂಟಾಗಿದೆ. ಇದರಿಂದಾಗಿ ನಾವೆಲ್ಲರೂ ಆತಂಕದಲ್ಲಿ ಕೆಲಸಮಾಡುತ್ತಿದ್ದೇವೆ.ಉತ್ತಮ ವಾತಾವರಣ ಇಲ್ಲದ ಕಾರಣ ವೈದ್ಯರುಗಳಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾನಿರತ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ವೈದ್ಯರ ರಕ್ಷಣೆ ಮಾಡಬೇಕು. ರೋಗಿಯ ಸಂಬಂಧಿಕರುಗಳಿಗೆ ಹೆಚ್ಚಿನ ಅವಕಾಶ ನೀಡಬಾರದು.ಇದರಿಂದಾಗಿ ಉತ್ತಮ ಚಿಕಿತ್ಸೆ ನೀಡಲು ಅಡಚಣೆಯಾಗುತ್ತದೆ.ರೋಗಿಯ ಕಡೆಯ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಬೇಕು.ಸರ್ಕಾರ ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ ಕಠಿಣ ಕಾನೂನು ರೂಪಿಸಬೇಕು ಆಗ ಮಾತ್ರ ನಮ್ಮ ಮೇಲಿನ ಹಲ್ಲೆ ತಡೆಯಲು ಸಾಧ್ಯವಾಗುತ್ತದೆ. ಈ ಕೂಡಲೇ ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕು ವೈದ್ಯರಿಗೆ ಭಯಮುಕ್ತ ವಾತಾವರಣ ಕಲಿಸಬೇಕೆಂದು ಒತ್ತಾಯಿಸಿದರು. ಇಂದು ಬೆಳಗ್ಗೆ 6 ರಿಂದ ನಾಳೆ ಬೆಳಗ್ಗೆ 6 ಗಂಟೆಯ ವರೆಗೂ ಒಪಿಡಿಯನ್ನು ಬಂದ್ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಐಎಂಎ ಅಧ್ಯಕ್ಷ ಡಾ.ಗಣೇಶ್ ಇಡಗುಂಜಿ,ಡಾ.ಪ್ರವೀಣ್ ಅಣ್ವೇಕರ್,ಡಾ.ಸುಭೋದ್,ಡಾ.ರವಿ,ಡಾ.ನಾಗಪ್ರಕಾಶ್,ಡಾ.ಪ್ರತ್ಯಕ್ಷ ಹಾಗೂ ಕಿರಿಯ ವೈದ್ಯರುಗಳು ಭಾಗವಹಿಸಿದ್ದರು.

Leave a Comment