ಹಲ್ಲೆಗೊಳಗಾದ ಪತ್ರಕರ್ತರ ಆರೋಗ್ಯ ವಿಚಾರಿಸಿದ ಡಿಸಿಎಂ

ತುಮಕೂರು, ಜೂ. ೧೨- ನಗರದ ಹೊರವಲಯದ ಸತ್ಯಮಂಗಲದ ಬೇಳೂರು ಬಾಯಱ್ಸ್ ಬಯೋಟೆಕ್ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ಬಾಯ್ಲರ್ ಸ್ಫೋಟದ ಬಗ್ಗೆ ಸಂಕ್ಷಿಪ್ತ ಸುದ್ದಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಕಾರ್ಖಾನೆಯ ಸಿಬ್ಬಂದಿಗಳಿಂದ ಹಲ್ಲೆಗೊಳಗಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ವಾಹಿನಿಯ ಇಬ್ಬರು ವರದಿಗಾರರು ಹಾಗೂ ಇಬ್ಬರು ಕ್ಯಾಮರಾಮನ್‍ಗಳ ಆರೋಗ್ಯವನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ವಿಚಾರಿಸಿದರು.

ಸದರಿ ಕಾರ್ಖಾನೆಯಲ್ಲಿ ಇತ್ತೀಚೆಗಷ್ಟೇ ವಿಷಾನಿಲ ಸೋರಿಕೆಯಿಂದ ಬಾಯ್ಲರ್ ಸ್ಫೋಟಗೊಂಡಿತ್ತು. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಕಲೆ ಹಾಕಲು ನಿನ್ನೆ ಮಧ್ಯಾಹ್ನ ವರದಿಗಾರರು ಹಾಗೂ ಕ್ಯಾಮೆರಾಮನ್‍ಗಳು ಬೇಳೂರು ಬಾಯ್ಲರ್ ಬಯೋಟೆಕ್ ಕಾರ್ಖಾನೆ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದಾರೆ.

ಅಲ್ಲದೆ ಮಾಧ್ಯಮದವರು ತೆಗೆದುಕೊಂಡು ಹೋಗಿದ್ದ ಕ್ಯಾಮೆರಾಗಳು, ಟ್ರೈಪಾಡ್ ಹಾಗೂ ಮೊಬೈಲ್‍ಗಳನ್ನು ಕಸಿದು ಜಖಂ ಮಾಡಿದ್ದಾರೆ. ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ತಿಳಿದ ಕೂಡಲೇ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಜಿಲ್ಲಾಸ್ಪತ್ರೆಗೆ ರಾತ್ರಿ ಭೇಟಿ ನೀಡಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತರ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಅವರಿಗೆ ಸೂಚಿಸಿದರು.

ನಂತರ ಹಲ್ಲೆ ನಡೆಸಿರುವ ಕಾರ್ಖಾನೆಯ ಮಾಲೀಕರು, ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಇದ್ದ ಎಸ್ಪಿ ಡಾ. ಕೆ. ವಂಶಿಕೃಷ್ಣ ಅವರಿಗೂ ಸೂಚನೆ ನೀಡಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಎಸ್ಪಿ ಡಾ. ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

Leave a Comment