ಹಲ್ಲಿನ ಸ್ವಚ್ಛತೆ ಇಲ್ಲದೇ ಇದ್ದರೆ ಬಾಯಿಯ ಕ್ಯಾನ್ಸರ್ ಎದುರಾಗಬಹುದು

  • ಡಾ. ಸಂದೀಪ್ ನಾಯಕ್

ಭಾರತದಾದ್ಯಂತ ಇಂದು ಬಾಯಿಯ ಕ್ಯಾನ್ಸರ್ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಬಾಯಿಯ ಕ್ಯಾನ್ಸರ್ ಸಂಬಂಧಿತ ರೋಗಿಗಳು ತಮ್ಮ ಜೀವನಪೂರ್ತಿ ಹಲ್ಲುಗಳ ಮತ್ತು ಬಾಯಿಯ ಸ್ವಚ್ಛತೆ ಕುರಿತಾಗಿ ಹೆಚ್ಚು ಕಾಳಜಿ ವಹಿಸಿದವರಲ್ಲ. ಕೆಲ ಪ್ರಕರಣಗಳಲ್ಲಿ ರೋಗಿಗಳು ಹಲ್ಲು ನೋವು, ಸಂಕಟ ಹಾಗೂ ಬಾಯಿಯಲ್ಲಿ ಕೆಂಪು/ ಬಿಳಿಯ ಗಾಯಗಳು (ಇದು ಬಾಯಿಯ ಕ್ಯಾನ್ಸರ್‌ನ ಗುಣಲಕ್ಷಣಗಳು ಅಥವಾ ಆರಂಭಿಕ ಹಂತದ ಸೂಚನೆಗಳು ಆಗಿರಬಹುದು) ಕಾಣಿಸಿಕೊಂಡರೂ ಅದರ ಕಡೆಗೆ ಗಮನ ನೀಡದೇ ಇದ್ದ ಕಾರಣಕ್ಕೆ ಕ್ಯಾನ್ಸರ್ ಹೆಚ್ಚು ಬೆಳೆದು ಮುಂದಿನ ಹಂತ ತಲುಪಿದೆ.

health-teeth

ಇತ್ತೀಚಿನ ಅಧ್ಯನಗಳಲ್ಲಿ ಬೆಳಕಿಗೆ ಬಂದಿರುವ ವಿಚಾರವೆಂದರೆ ಶೇ.೮೦ ರಷ್ಟು ಬಾಯಿಯ ಕ್ಯಾನ್ಸರ್ ರೋಗಿಗಳು ತಮ್ಮ ಹಲ್ಲುಗಳ ಮತ್ತು ಬಾಯಿಯ ಶುಚಿತ್ವದ ಕಡೆಗೆ ಗಮನ ನೀಡಿಲ್ಲ. ೨೦೦೫ರಲ್ಲಿ ಭಾರತೀಯ ಡೆಂಟಲ್ ಅಸೋಸಿಯೇಷನ್ ನಡೆಸಿರುವ ರಾಷ್ಟ್ರೀಯ ಓರಲ್ ಹೆಲ್ತ್ ಸಮೀಕ್ಷೆಯಲ್ಲಿ ಭಾರತದಲ್ಲಿ ಶೇ ೯೫% ರಷ್ಟು ಜನ ಗಮ್ ಡಿಸೀಸ್‌ನಿಂದ ಬಳಲಿದ್ದಾರೆ. ಶೇ.೫೦ ರಷ್ಟು ಮಂದಿ ಮಾತ್ರವೇ ಟೂತ್ ಬ್ರಶ್ ಬಳಕೆ ಮಾಡುತ್ತಾರೆ. ಶೇ.೨ ರಷ್ಟು ಜನಸಂಖ್ಯೆಯಷ್ಟೇ ಡೆಂಟಿಸ್ಟ್‌ಗಳನ್ನು ಭೇಟಿ ಮಾಡುತ್ತಾರೆ.

೨೦೧೨ರ ಮ್ಯಾಕ್ಸಿಲ್‌ಅಫಿಸಿಯಲ್ ಮತ್ತು ಓರಲ್ ಸರ್ಜರಿ ಪತ್ರಿಕೆಯಲ್ಲಿ  ಪ್ರಕಟವಾಗಿರುವ ಅಧ್ಯಯನದ ಪ್ರಕಾರ ಬಾಯಿಯ ಶಚಿತ್ವ ಕಾಪಾಡದೇ ಇರುವುದು, ಟೂತ್‌ಬ್ರಷ್ ಬಳಸಿ ಹಲ್ಲುಗಳನ್ನು ಸ್ವಚ್ಛಗೊಳಿಸದೇ ಇರುವುದು ಶೇ. ೬೦ ರಷ್ಟು ಬಾಯಿಯ ಕ್ಯಾನ್ಸರ್ ರೋಗಿಗಳಲ್ಲಿ ಕ್ಯಾನ್ಸರ್ ಎದುರಾಗಲು ಮುಖ್ಯ ಕಾರಣವಾಗಿದೆ ಎಂಬುದು ತಿಳಿದುಬಂದಿದೆ.

ತಂಬಾಕು ಜಗಿಯುವುದು, ಧೂಮಪಾನ ಮತ್ತು ಮದ್ಯ ಸೇವನೆಯೂ ಅತ್ಯಂತ ಪ್ರಮುಖ ಕಾರಣಗಳಾಗಿವೆ. ದತ್ತಾಂಶಗಳ ಪ್ರಕಾರ ಶೇ.೨೫ ಬಾಯಿಯ ಕ್ಯಾನ್ಸರ್ ಪ್ರಕರಣಗಳಲ್ಲಿ ರೋಗಿಗಳು ಧೂಮಪಾನ ಮಾಡದೇ ಇರುವವರಾಗಿದ್ದಾರೆ. ಸೂಕ್ತ ಕಾರಣ ಏನೆಂದು ತಿಳಿಯದೇ ಇದ್ದರೂ ಕೂಡ ಧೂಮಪಾನ ಮಾಡದೇ ಇರುವವರು ಕೂಡ ಬಾಯಿಯ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ಈ ರೀತಿಯ ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಲೇ ಇದೆ. ದೇಶದಲ್ಲಿ ಬೆಳೆಯುತ್ತಿರುವ ಬಾಯಿಯ ಕ್ಯಾನ್ಸರ್ ಪ್ರಕರಣಗಳಲ್ಲಿ ಧೂಮಪಾನ, ಮದ್ಯ ಸೇವನೆ ಹಾಗೂ ತಂಬಾಕು ಜಗಿಯದೇ ಇದ್ದರೂ ಕೂಡ ಬಾಯಿಯ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಗಳಿವೆ.

health-flossing

ಇನ್ನು ಇದಕ್ಕೆ ಪೂರಕ ಎಂಬಂತೆ ಚೂಪಾದ ಹಲ್ಲುಗಳು ಕೂಡ ಬಾಯಿಯ ಕ್ಯಾನ್ಸರ್ ಎದುರಾಗುವಂತೆ ಮಾಡುತ್ತವೆ. ಚೂಪಾದ ಹಲ್ಲಿನಿಂದ ಆಗುವಂತಹ ಇರುಸುಮುರುಸಿನಿಂದ ಬಾಯಿಯಲ್ಲಿ ಗುಣವಾಗದೇ ಉಳಿಯುವ ಉಲ್ಸರ್ ಗಾಯಗಳಾಗಿರುತ್ತವೆ. ಇದಕ್ಕೆ ಚಿಕಿತ್ಸೆ ಪಡೆಯದೇ ಇದ್ದಲ್ಲಿ ೧೮ ತಿಂಗಳ ಒಳಗಾಗಿ ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುತ್ತದೆ. ಮುರಿದ ಹಲ್ಲು, ಕೊಳೆತಿರುವ ಹಲ್ಲು, ಫಿಲ್ಡ್ ಟೀತ್ ಮತ್ತು ಅನ್ ಫಿಲ್ಡ್ ಟೀತ್ ಮೂಲಕವೂ ದವಡೆ, ನಾಲಿಗೆ ಹಾಗೂ ಬಾಯಿಯ ಒಳಪದರಗಳಲ್ಲಿ ದೀರ್ಘಕಾಲದ ಗಾಯಗಳಾಗಿ ಕ್ಯಾನ್ಸರ್ ಎದುರಾಗುವ ಸಾಧ್ಯತೆಗಳನ್ನು ಹೆಚ್ಚಾಗಿಸುತ್ತದೆ.

ಬಾಯಿಯ ಕ್ಯಾನ್ಸರ್ ಪ್ರಕರಣವನ್ನು ಆರಂಭಿಕ ಹಂತದಲ್ಲೇ ಗುರುತಿಸಿದರೆ ಚಿಕಿತ್ಸೆ ನೀಡಬಹುದಾಗಿದೆ. ಬಾಯಿಯ ಶುಚಿತ್ವದ ಕಡೆಗೆ ಗಮನ ನೀಡಿ ಆರಂಭಿಕ ಹಂತದಲ್ಲೇಕ್ಯಾನ್ಸರ್ ಸರ್ಜನ್ ಬಳಿ ಭೇಟಿ ನೀಡಿದಲ್ಲಿ ಚಿಕಿತ್ಸೆ ಸುಲಭವಾಗುತ್ತದೆ. ಪ್ರತಿಯೊಬ್ಬರೂ ಕನ್ನಡಿಯ ಎದುರು ನಿಂತು ತಮ್ಮ ಬಾಯಿಯನ್ನು ಪರೀಕ್ಷಿಸಿಕೊಳ್ಳಬೇಕು, ಯಾವುದಾದರು ರಂದ್ರಗಳಿದ್ದರೆ, ಗಾಯಗಳು ಅಥವಾ ಊತಗಳಿದ್ದರೆ ಗಮನಿಸಬೇಕು. ಏನಾದರೂ ಅಸಹಜರೀತಿಯ ಬೆಳವಣಿಗೆ ಕಾಣಿಸಿಕೊಂಡರೂ ಕ್ಯಾನ್ಸರ್ ಸರ್ಜನ್ ಬಳಿ ಭೇಟಿ ನೀಡುವುದು ಸೂಕ್ತ. ಆರಂಭದಲ್ಲೇ ಎಚ್ಚೆತ್ತುಕೊಳ್ಳುವುದು ಸೂಕ್ತ.

ಭಾರತದಲ್ಲಿ ಇಂದು ಪ್ರತಿ ದಿನ ಬಾಯಿಯ ಕ್ಯಾನ್ಸರ್‌ನಿಂದ ಕನಿಷ್ಠ ೫ ಮಂದಿ ಕೊನೆಯುಸಿರೆಳೆಯುತ್ತಿದ್ದಾರೆ. ಬಾಯಿಯ ಶುಚಿತ್ವದ ಕಡೆಗೆ ಗಮನ ನೀಡದೇ ಇರುವುದು ಮತ್ತು ಸುಲಭದ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದರಿಂದ ಬಾಯಿಯ ಕ್ಯಾನ್ಸರ್ ಸಂಭವಿಸುತ್ತಿದೆ.

ಇವೆಲ್ಲವೂ ಸುಲಭವಾಗಿ ಮಾಡುವಂತಹ ಕೆಲಸಗಳಾಗಿದ್ದರೂ ನಿಲಕ್ಷ್ಯದಿಂದಾಗಿ ಬಾಯಿಯ ಕ್ಯಾನ್ಸರ್ ತಲೆದೂರುತ್ತಿದೆ. ಇನ್ನು ಬಾಯಿಯ ಕ್ಯಾನ್ಸರ್‌ನಿಂದ ದೂರ ಉಳಿಯಲು ಅನುಸರಿಸಬೇಕಾದ ಕ್ರಮಗಳ ಕುರಿತಾದ ಶಿಕ್ಷಣದ ಕೊರತೆಯಿದ್ದು, ಜನಸಾಮಾನ್ಯರಲ್ಲಿ ಈ ಕುರಿತಾಗಿ ಅರಿವು ಮೂಡಿಸುವ ಅಗತ್ಯವಿದೆ. ಬಾಯಿಯ ಕ್ಯಾನ್ಸರ್ ಬರದೇ ಇರುವಂತೆ ಎಚ್ಚರ ವಹಿಸಲು ತಂಬಾಕು, ಧೂಮಪಾನದಿಂದ ದೂರ ಉಳಿಯುವಂತೆ ಬಾಯಿಯ ಶುಚಿತ್ವದ ಕಡೆಗೂ ಗಮನ ನೀಡುವುದು ಅಷ್ಟೇ ಗಮನ ನೀಡಬೇಕಿದೆ.

ಬಾಯಿಯ ಶುಚಿತ್ವ ನಿಮ್ಮ ನಗುಮುಖವನ್ನಷ್ಟೇ ಅಲ್ಲ ನಿಮ್ಮ ಆರೋಗ್ಯದ ಕುರಿತಾಗಿಯೂ ಹಲವು ವಿಚಾರಗಳನ್ನು ಹೇಳಬಲ್ಲದು.

Leave a Comment