ಹರಿವಂಶ ರಾಜ್ಯಸಭೆ ಉಪಸಭಾಪತಿ

ನವದೆಹಲಿ, ಆ. ೯- ಆಡಳಿತಾರೂಢ ಎನ್‌ಡಿಎ ಹಾಗೂ ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದ ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಜೆಡಿಯು ಅಭ್ಯರ್ಥಿ ಹರಿವಂಶ ನಾರಾಯಣಸಿಂಗ್ ಪ್ರತಿಪಕ್ಷ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ.

  •  ರಾಜ್ಯಸಭೆಯ ಉಪಸಭಾಪತಿ ಚುನಾವಣೆ.
  •  ಎನ್‌ಡಿಎ ಅಭ್ಯರ್ಥಿ ಹರಿವಂಶ್ ಸಿಂಗ್‌ಗೆ 125 ಮತ.
  •  ಪ್ರತಿಪಕ್ಷಗಳ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್‌ಗೆ 105 ಮತ.
  •  ಇಬ್ಬರು ಸದಸ್ಯರ ಗೈರುಹಾಜರಿ.

ರಾಜ್ಯಸಭೆಯ 232 ಸದಸ್ಯರ ಪೈಕಿ ಸದನದಲ್ಲಿ ಹಾಜರಿದ್ದ 230 ಸದಸ್ಯರು ಮತ ಚಲಾಯಿಸಿದರು. ಅದರಲ್ಲಿ ಹರಿವಂಶ್ ಸಿಂಗ್ 125 ಹಾಗೂ ಬಿ.ಕೆ ಹರಿಪ್ರಸಾದ್ 105 ಮತಗಳನ್ನು ಪಡೆದರು. ಇಬ್ಬರು ಗೈರುಹಾಜರಾಗಿದ್ದರು.

ಮುಂಬರುವ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳನ್ನು ಒಗ್ಗೂಡಿಸಿ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರಿಗೆ ತುಸು ಹಿನ್ನೆಡೆಯಾಗಿದೆ.

ಕಳೆದ ಜೂನ್‌ನಲ್ಲಿ ಉಪಸಭಾಪತಿಯಾಗಿದ್ದ ಪಿ.ಜೆ ಕುರಿಯನ್ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಆರಂಭದಲ್ಲಿ ಸಭಾಪತಿ ವೆಂಕಯ್ಯನಾಯ್ಡು ಚುನಾವಣೆ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಸದನಗಲ್ಲಿ ಹಾಜರಿದ್ದ 230 ಸದಸ್ಯರ ಪೈಕಿ 125 ಮಂದಿ ಎನ್‌ಡಿಎ ಅಭ್ಯರ್ಥಿಗೆ ಹಾಗೂ 105 ಮಂದಿ ವಿರೋಧ ಪಕ್ಷಗಳ ಅಭ್ಯರ್ಥಿಗೆ ಮತ ಚಲಾಯಿಸಿದರು.

ಅತ್ಯಧಿಕ ಮತಗಳನ್ನು ಪಡೆದ ಜೆಡಿಯುನ ಹರಿವಂಶ ಸಿಂಗ್ ರಾಜ್ಯಸಭೆಯ ಉಪಸಭಾಪತಿಯಾಗಿ ಆಯ್ಕೆಯಾಗಿರುವುದನ್ನು ಸಭಾಪತಿ ಎಂ. ವೆಂಕಯ್ಯನಾಯ್ಡು ಸದನದಲ್ಲಿ ಪ್ರಕಟಿಸಿದರು.

ಬಳಿಕ ಹರಿವಂಶ್ ಸಿಂಗ್ ಅವರನ್ನು ಉಪಸಭಾಪತಿ ಸ್ಥಾನದವರೆಗೂ ಪ್ರಧಾನಿ ನರೇಂದ್ರಮೋದಿ, ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಸೇರಿದಂತೆ ಆಡಳಿತ ಪಕ್ಷದ ಹಲವು ಸದಸ್ಯರು ಕರೆದೊಯ್ದು ಅಭಿನಂದನೆ ಸಲ್ಲಿಸಿದರು.

ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಂನಬಿ ಆಜಾದ್ ಸೇರಿದಂತೆ ಹಲವು ಸದಸ್ಯರು ನೂತನ ಉಪಸಭಾಪತಿಗೆ ಅಭಿನಂದನೆ ಸಲ್ಲಿಸಿದರು.

Leave a Comment