ಹರಭಜನ್ ಸಿಂಗ್ ಬೌಲಿಂಗ್‍ಗೆ ಆಡುವುದು ಕಷ್ಟವಾಗಿತ್ತು: ಗಿಲ್‍ಕ್ರಿಸ್ಟ್

ಮೆಲ್ಬೋರ್ನ್, ನ 13 -ಕ್ರಿಕೆಟ್ ವೃತ್ತಿ ಜೀವನದಲ್ಲಿ ಭಾರತದ ಆಫ್-ಸ್ಪಿನ್ನರ್ ಹರಭಜನ್ ಸಿಂಗ್ ಅವರ ಬೌಲಿಂಗ್ ಅತ್ಯಂತ ಕಠಿಣವಾಗಿತ್ತು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಆರಂಭಿಕ ಬ್ಯಾಟ್ಸ್‍ಮನ್ ಆಡಂ ಗಿಲ್‍ಕ್ರಿಸ್ಟ್ ಬಹಿರಂಗ ಪಡಿಸಿದ್ದಾರೆ.

ತಮ್ಮ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ವೆಬ್‍ಸೈಟ್‍ನೊಂದಿಗೆ ಅವರು ಹಂಚಿಕೊಂಡಿದ್ದಾರೆ. 2001ರಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ಮೆಲುಕು ಹಾಕಿದ್ದಾರೆ. ಈ ಸರಣಿಯನ್ನು ಸ್ಟೀವ್ ವಾ ಅವರ ನಾಯಕತ್ವದ ಆಸ್ಟ್ರೇಲಿಯಾ ಜಯ ಸಾಧಿಸಿತ್ತು. ಅಂದು ಮುಂಬೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಗಿಲ್‍ಕ್ರಿಸ್ಟ್ ಶತಕ ಸಿಡಿಸಿದ್ದರು. ಈ ವೇಳೆ ಸತತ 16 ಟೆಸ್ಟ್ ಪಂದ್ಯದ ಗೆಲುವಿನ ಸಾಧನೆ ಅಂದಿನ ಆಸೀಸ್ ತಂಡ ಮಾಡಿತ್ತು.

ಈ ಪಂದ್ಯದ ಬಗ್ಗೆ ಹೇಳಿದ ಅವರು, ” ಅಂದು ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 99 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದೆವು. ಈ ವೇಳೆ ಕಣಕ್ಕೆ ಇಳಿದ ನಾನು ಶತಕ ಸಿಡಿಸಿದೆ. ಮೂರೇ ದಿನಗಳಲ್ಲಿ ನಾವು ಗೆಲುವು ಸಾಧಿಸಿದೆವು. ಇಷ್ಟು ಸುಲಭವಾಗಿ ಪಂದ್ಯ ಗೆಲ್ಲಲು ಕಾರಣವೇನು ಎಂಬಂತೆ ನನ್ನಲ್ಲಿ ಗೊಂದಲ ಉಂಟಾಯಿತು. ನಂತರ, ಮುಂದಿನ ಪಂದ್ಯದ ಕಡೆ ಚಿತ್ತ ಹರಿಸಿದೆವು ಎಂದರು.

ನಂತರದ ಪಂದ್ಯಗಳು ಸಾಕಷ್ಟು ಕುತೂಹಲ ಕೆರಳಿಸಿದ್ದವು. ಎರಡೂ ತಂಡಗಳಿಂದ ದಾಳಿ-ಪ್ರತಿದಾಳಿ ನಡೆದಿತ್ತು. ವಿಶೇಷವಾಗಿ ಹರಭಜನ್ ಸ್ಪಿನ್ ಮೋಡಿ ನಮಗೆ ಸಾಕಷ್ಟು ತಲೆನೋವು ತಂದಿತ್ತು. ಅವರ ಬೌಲಿಂಗ್‍ನಲ್ಲಿ ಆಡುವುದು ತುಂಬಾ ಕಷ್ಟವಾಯಿತು. ವೃತ್ತಿ ಜೀವನದಲ್ಲಿ ಕಠಿಣ ಎನಿಸಿದ ಬೌಲರ್ ಅವರು. ಅವರನ್ನು ಬಿಟ್ಟರೆ, ಶ್ರೀಲಂಕಾ ತಂಡದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್ ಅವರು ಕೂಡ ಇವರ ಸಾಲಿಗೆ ಸೇರುತ್ತಾರೆ ಎಂದು ಗಿಲ್‍ಕ್ರಿಸ್ಟ್ ಹೇಳಿದರು.

ಮೂರು ಪಂದ್ಯಗಳ ಸರಣಿಯಲ್ಲಿ ಹರಭಜನ್ ಸಿಂಗ್ 32 ವಿಕೆಟ್ ಕಿತ್ತಿದ್ದರು. ಇದರಲ್ಲಿ ಚೊಚ್ಚಲ ಹ್ಯಾಟ್ರಿಕ್ ವಿಕೆಟ್ ಕೂಡ ಸೇರಿತ್ತು. ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಜ್ಜೆ ಅಂದು ಭಾಜನರಾಗಿದ್ದರು.

Leave a Comment