ಹರಪನಹಳ್ಳಿ ಶಿಕ್ಷಕರ ದಾವಣಗೆರೆ ಜಿಲ್ಲೆಗೆ ನಿಯುಕ್ತಿಗೊಳಿಸಲು ಆಗ್ರಹ

ದಾವಣಗೆರೆ.ಜು.1; ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಪ್ರತ್ಯೇಕಿಸಲ್ಪಟ್ಟ ಹರಪನಹಳ್ಳಿ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ 374 ಪ್ರಾಥಮಿಕ ಶಾಲಾ ಶಿಕ್ಷಕರು, 103 ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ 14 ಲಿಪಿಕ ನೌಕರರನ್ನು ದಾವಣಗೆರೆ ಜಿಲ್ಲೆಯಲ್ಲಿನ ಖಾಲಿಹುದ್ದೆಗಳಿಗೆ ಮರುನಿಯುಕ್ತಿಗೊಳಿಸಲು ಹಾಗೂ ಸಿಆರ್‍ಪಿ/ಬಿಆರ್‍ಪಿಗಳ ಸ್ಥಳನಿಯುಕ್ತಿಗೆ ಅಗತ್ಯ ಖಾಲಿಹುದ್ದೆಗಳನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಆಗ್ರಹಿಸಲಾಯಿತು. ಇಂದು ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಇಲಾಖೆಯಿಂದ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳಾದ ಬಿ. ಶ್ರೀನಿವಾಸ ನಾಯಕ, ರಂಗಸ್ವಾಮಿ, ಸ್ವಾಮಿ, ಕಲ್ಪನಾ, ಲೋಕಣ್ಣ, ಗಣೇಶ ಹಾಗೂ ಸಿದ್ದಪ್ಪ ಇವರುಗಳು ಸಂಘದ ಪ್ರಭಾರಿ ಅಧ್ಯಕ್ಷರಾದ ಪರಶುರಾಮಪ್ಪ ರವರನ್ನು ಆಗ್ರಹಿಸಿದರು. ನಂತರ ಮಾತನಾಡಿದ ಬಿ. ಶ್ರೀನಿವಾಸ ನಾಯಕ ದಾವಣಗೆರೆ ಜಿಲ್ಲೆಯಲ್ಲಿ ಆಯ್ಕೆಯಾಗಿ ಒತ್ತಾಯ ಪೂರ್ವಕವಾಗಿ ಹರಪನಹಳ್ಳಿ ತಾಲ್ಲೂಕಿಗೆ ಹೆಚ್ಚುವರಿಯೆಂದು ಸ್ಥಳನಿಯುಕ್ತಿಗೊಳಿಸಿ ಈಗ ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾದ ನಂತರ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 491 ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ದಾವಣಗೆರೆ ಜಿಲ್ಲೆಗೆ ಮರು ನಿಯುಕ್ತಿಗೊಳಿಸಲು ಈಗಾಗಲೇ ಅಭಿಮತ ನೀಡಿದಾಗಲೂ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿರುವುದು ಸರಿಯಲ್ಲ. ಅಲ್ಲದೇ, ಮಕ್ಕಳ ಸಂಖ್ಯೆಗಳಿಗನುಗುಣವಾಗಿ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಸೃಜಿಸಿದ್ದು ಈಗ ಅವುಗಳನ್ನು ರದ್ದುಗೊಳಿಸಿರುವುದರಿಂದ ಖಾಲಿಹುದ್ದೆಗಳು ಸೃಷ್ಟಿಯಾಗುವುದು ಕಷ್ಟಸಾಧ್ಯವಾಗಿದೆ. ಪ್ರಯುಕ್ತ ಆ ಹುದ್ದೆಗಳನ್ನು ಮುಂದುವರಿಸಬೇಕು ಈ ಕುರಿತು ಕೂಡಲೇ ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಸರ್ಕಾರದೊಂದಿಗೆ ಹಾಗೂ ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಂಘದ ಜಿಲ್ಲಾಧ್ಯಕ್ಷರು ಕೂಡಲೇ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ನಿಯೋಗದೊಂದಿಗೆ ತೆರಳುವ ಭರವಸೆಯನ್ನು ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಅಧ್ಯಕ್ಷ ಹೆಚ್.ಎಂ.ರೇವಣಸಿದ್ದಪ್ಪ, ಉಜ್ಜನಪ್ಪ, ಶಿವಶಂಕರ್, ಬಸವರಾಜಪ್ಪ ಇವರುಗಳು ಇದಕ್ಕೆ ಸಹಮತ ನೀಡಿದರು.

Leave a Comment