ಹಮದರ್ದ್ ಶಾಲೆ: ಶತಮಾನೋತ್ಸವ ಸಂಭ್ರಮಾಚರಣೆ

ಪ್ರತಿಯೊಬ್ಬರು ಪಂ.ತಾರಾನಾಥರ ಆದರ್ಶ ಪಾಲಿಸಿ
ರಾಯಚೂರು.ಜೂ.12- ಎಲ್ಲಾ ಧರ್ಮಗಳನ್ನು ಒಂದುಗೂಡಿಸಿ ಒಂದೇ ಸೂರಿನಡಿ ಶಿಕ್ಷಣದ ಬೀಜ ಬಿತ್ತಿ ಸಂಸ್ಥೆಯು ಹೆಮ್ಮರವಾಗಿ ಕಟ್ಟಿದ ವ್ಯಕ್ತಿ ಪಂಡಿತ ತಾರಾನಾಥರವರಾಗಿದ್ದು ಅವರ ಆದರ್ಶವನ್ನು ಪ್ರತಿಯೊಬ್ಬರು ಮುನ್ನಡೆಯಬೇಕೆಂದು ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅವರು ಕರೆ ನೀಡಿದರು.
ಅವರಿಂದು ಹಮದರ್ದ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ತಾರಾನಾಥ ಶಿಕ್ಷಣ ಸಂಸ್ಥೆಯಾದ ಹಮದರ್ದ್ ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಚಿಂತನೆಗಳು ತಾತ್ವಿಕವಾಗಿದ್ದರು. ಯೋಗ ಪ್ರಭಾವ ಪ್ರಖರತೆಗಳಿಗೆ ಕೊನೆಯಿಲ್ಲದಂತಾಗಿದೆ. ಆದರೆ ಪಂಡಿತ ತಾರಾನಾಥರು ಹಾಕಿಕೊಟ್ಟ ಮಾರ್ಗದರ್ಶನದ ಪ್ರಖರತೆ ಇಂದಿನ ದಿನಮಾನಗಳಲ್ಲಿ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಭವಿಷ್ಯಕ್ಕೆ ಕೆಲ ಕಾರ್ಯಕ್ರಮಗಳು ದಿಕ್ಸೂಚಿಯಾಗಿದ್ದು ಅದರಲ್ಲಿ ಪಂ.ತಾರಾನಾಥ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮವು ಒಂದಾಗಿದೆ. ದಾಸತ್ವ ಒಪ್ಪಿಗೆಯಿಂದ ಮಾಡಿದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಪಂ.ತಾರಾನಾಥ ಶಿಕ್ಷಣ ಸಂಸ್ಥೆಯು ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ. ಒಬ್ಬನಿಂದ ಬದಲಾವಣೆ ತರಲು ಸಾಧ್ಯವಿಲ್ಲವೆಂದು ಪ್ರಯತ್ನ ಮಾಡುವುದು ಬಿಟ್ಟರೆ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ.
ಒಬ್ಬ ವ್ಯಕಿಯಾದರೂ ಏನಾದರೂ ಸಾಧಿಸಬೇಕೆಂಬ ಛಲದಲ್ಲಿ ಮುನ್ನಡೆದರೆ ಸಾಧ್ಯವಿದೆ ಎಂಬುದಕ್ಕೆ ಮುಂದಿನ ತಾರಾನಾಥ ಶಿಕ್ಷಣ ಸಂಸ್ಥೆಯು ನಿದರ್ಶನವಾಗಿದೆ. ಪಂ.ತಾರಾನಾಥರವರು ಹಾಕಿಕೊಟ್ಟ ಮಾರ್ಗ ಎಲ್ಲರಿಗೂ ಮಾದರಿ. ತಾರಾನಾಥರವರ ಗುಣಗಳನ್ನು ಪ್ರತಿಯೊಬ್ಬರು ಅವರ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರಾದ ಸ್ವಾಮಿ ಶ್ರೀ.ನಿರ್ಭಯಾನಂದ ಸರಸ್ವತಿ ವಹಿಸಿದ್ದರು. ಅಧ್ಯಕ್ಷತೆಯನ್ನು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ವಹಿಸಿದ್ದರು. ಕಾರ್ಯದರ್ಶಿ ಅಂಬಾಪತಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ ವಕೀಲರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ನಿವೃತ್ತಿ ಹೊಂದಿದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರನ್ನು ಸಹ ಸನ್ಮಾನಿಸಲಾಯಿತು.

Leave a Comment