ಹಬ್ಬದಲ್ಲೂ ಮುಂದುವರೆದ ಆಟೋ ಮೊಬೈಲ್ ಕ್ಷೇತ್ರದ ಕುಸಿತ

 

ಮುಂಬೈ,ಅ.9.ಆಟೋ ಮೊಬೈಲ್ ಕ್ಷೇತ್ರದ ಕುಸಿತವನ್ನು ತಡೆಯಲು ದಸರಾ ಹಬ್ಬ ಸಹ ವಿಫಲವಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿಯೂ ಕಾರುಗಳ ಬೇಡಿಕೆ ಕುಸಿಯುತ್ತಿದ್ದು, ಪ್ರಮುಖ ಕಂಪನಿಗಳು ಕುಸಿತದಿಂದಾಗಿ ಕಂಗಾಲಾಗಿವೆ.

ಮಾರುತಿ ಸುಝುಕಿ, ಟಾಟಾ ಮೋಟಾರ್ಸ್, ಹುಂಡೈ, ಮಹೀಂದ್ರಾ ಎಂಡ್ ಮಹೀಂದ್ರಾ, ಟೊಯೋಟಾ ಕಾರುಗಳ ಮಾರಾಟದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿಯೂ ಯಾವುದೇ ಏರಿಕೆ ಕಂಡುಬಂದಿಲ್ಲ. ಹಬ್ಬಗಳ ಸಂದರ್ಭದಲ್ಲಿಯೂ ಜನರು ಕಾರುಗಳನ್ನು ಕೊಳ್ಳಲು ಮುಂದಾಗಿಲ್ಲ.
ದೇಶದ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಇಂಡಿಯಾ ಸೆಪ್ಟೆಂಬರ್ ತಿಂಗಳಿನಲ್ಲಿ 1, 12, 500 ಯೂನಿಟ್‌ಗಳೊಂದಿಗೆ ಶೇ 26.7ರಷ್ಟು ಮಾರಾಟ ಕುಸಿತವನ್ನು ಅನುಭವಿಸಿದೆ. ಟಾಟಾ ಮೋಟಾರ್ಸ್ ಶೇ 63 ರಷ್ಟು ಕುಸಿತ ದಾಖಲು ಮಾಡಿದೆ.
ಆಲ್ಟೋ, ವ್ಯಾಗನಾರ್ ಮಾರಾಟದ ಪ್ರಮಾಣ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ 42.6ರಷ್ಟು ಕಡಿಮೆಯಾಗಿದೆ. ಸಿಫ್ಟ್, ಸೆಲಾರಿಯೋ, ಬೊಲೇನೋ, ಡಿಸೈರ್ ಕಾರುಗಳ ಮಾರಾಟ ಶೇ 22ಕ್ಕೆ ಕುಸಿತ ಕಂಡಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಹುಂಡೈ ಮೋಟಾರ್ ಇಂಡಿಯಾ ಮಾರಾಟ ಶೇ 14.8ರಷ್ಟು ಕುಸಿತವಾಗಿದೆ. ಮಹೀಂದ್ರಾ ಎಂಡ್ ಮಹೀಂದ್ರಾದ ಪ್ರಯಾಣಿಕ ವಾಹನಗಳ ಮಾರಾಟ ಶೇ 33ರಷ್ಟು ಕುಸಿತ ದಾಖಲಿಸಿದೆ.
ದಸರಾ ಹಬ್ಬದ ಅಂಗವಾಗಿ ಮುಂಬೈ, ಗುಜರಾತ್ ಸೇರಿದಂತೆ ದೇಶವ ವಿವಿಧ ನಗರಗಳಲ್ಲಿ 200 ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಮರ್ಸಿಡೆಸ್ ಬೆಂಜ್ ಘೋಷಣೆ ಮಾಡಿದೆ. ಮುಂಬೈ ನಗರದಲ್ಲಿಯೇ 74 ಕಾರುಗಳ ಖರೀದಿ ನಡೆದಿದೆ ಎಂದು ಮಂಗಳವಾರ ಕಂಪನಿ ಹೇಳಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್ ತಿಂಗಳಿನಲ್ಲಿ ಆಟೋಮೊಬೈಲ್ ಕ್ಷೇತ್ರವನ್ನು ಉತ್ತೇಜಿಸಲು ಹಲವು ಘೋಷಣೆಗಳನ್ನು ಮಾಡಿದ್ದರು. ಆದರೆ, ಚೇತರಿಕೆಯನ್ನು ಮಾತ್ರ ಕಂಡಿಲ್ಲ.

Leave a Comment