ಹನೂರು, ಕೊಳ್ಳೇಗಾಲದಲ್ಲಿ ಕಫ್ರ್ಯೂಗೆ ಉತ್ತಮ ಪ್ರತಿಕ್ರಿಯೆ

ಹನೂರು: ಮೇ.24- ಲಾಕ್‍ಡೌನ್ ಹಿನ್ನಲೆಯಲ್ಲಿ ಭಾನುವಾರ ಕಫ್ರ್ಯೂ ಜಾರಿಯಲ್ಲಿರುವುದರಿಂದ ಹನೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಕಫ್ರ್ಯೂಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವ ದಿಸೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ವಾಣಿಜ್ಯ ವಹಿವಾಟಿನ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು.
ಲಾಕ್‍ಡೌನ್ ಸಡಿಲಿಕೆಯಿಂದ ಜನ ಜಂಗುಳಿಯಿಂದ ಕೂಡಿದ್ದ ಹನೂರು ಮತ್ತು ಕೊಳ್ಳೇಗಾಲ ನಗರ ಮತ್ತು ಪಟ್ಟಣಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಫ್ರ್ಯೂ ಯಶಸ್ವಿಯಾಗಿದೆ. 144 ಸಕ್ಸನ್ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಪೊಲೀಸರು ಬಿಗಿ ಬಂದುಬಸ್ತ್ ಕ್ರಮಗಳನ್ನು ಕೈಗೊಂಡಿದ್ದರು. ಕಫ್ರ್ಯೂನ್ನು ಲೆಕ್ಕಿಸದೆ ಬಾಗಿಲು ತೆಗೆದಿದ್ದ ಅಂಗಡಿ ಮುಂಗಟ್ಟಿನವರಿಗೆ ಎಚ್ಚರಿಕೆಯನ್ನು ನೀಡಿ ಅಂಗಡಿ ಬಂದ್ ಮಾಡಿಸಲಾಯಿತು.
ಅಗತ್ಯ ಸೇವೆಗಳ ವಾಹನಗಳು ಓಡಾಡುವುದನ್ನು ಕಂಡು ಬಂದಿರುವುದನ್ನು ಬಿಟ್ಟು ಉಳಿದಂತೆ ಕೊಳ್ಳೇಗಾಲ ಹನೂರು ಮುಖ್ಯ ರಸ್ತೆ ಬೀಕೋ ಎಂಬಂತೆ ಗೋಚರಿಸುತ್ತಿದ್ದು, ಇದೇ ರೀತಿ ಈ ಎರಡು ತಾಲ್ಲೂಕಿನ ಮುಖ್ಯ ರಸ್ತೆಗಳು ಹಾಗೂ ಆಯಾ ಗ್ರಾಮಗಳಲ್ಲಿ ಸಂಚಾರ ಸಂಪೂರ್ಣ ಇಲ್ಲದೆ ಇರುವುದು ಕಂಡು ಬಂದಿತು.
ಮೊದಲ ಬಾರಿಯ ಲಾಕ್‍ಡೌನ್ ನೆನಪಿಸಿದ ರವಿವಾರ: ಕರೋನಾ ವೈರಾಣು ಸೋಂಕಿನ ಭೀತಿಯಿಂದ ಪ್ರಾರಂಭದಲ್ಲಿ ಇಡಿ ದೇಶವನ್ನೇ ಲಾಕ್‍ಡೌನ್ ಮಾಡಿದ ಸಂದರ್ಭದಲ್ಲಿ ಕಂಡು ಬಂದ ವಾತಾವರಣ ಭಾನುವಾರದ ಕಫ್ರ್ಯೂ ಜಾರಿಯಲ್ಲಿ ಕಂಡು ಬರುವ ಮೂಲಕ ಲಾಕ್‍ಡೌನ್ ನೆನಪಿಸುವಂತೆ ಮಾಡಿತ್ತು.ಬಸ್, ಆಟೋ, ಇನ್ನಿತರೆ ವಾಹನಗಳ ಸಂಚಾರ ಇಲ್ಲದೆ ಇರುವುದು ಸೇರಿದಂತೆ ಮದ್ಯದಂಗಡಿಗಳು ಇನ್ನಿತರೆ ಅಂಗಡಿಗಳು ಮುಚ್ಚಲ್ಪಟ್ಟಿದ್ದವು.
ಪೊಲೀಸ್ ಗಸ್ತು: 144 ಸಕ್ಸನ್ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಹನೂರು ಮತ್ತು ಕೊಳ್ಳೇಗಾಲ ಪೊಲೀಸರು ಆಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಸ್ತನ್ನು ತಿರುಗುವ ಮೂಲಕ ಕಫ್ರ್ಯೂ ಉಲ್ಲಂಘಿಸಿ ಓಡಾಡುತ್ತಿರುವವರನ್ನು ಎಚ್ಚರಿಸುವ ಕೆಲಸವನ್ನು ಮಾಡಿದರು.

Share

Leave a Comment