ಹನೂರಿನಲ್ಲಿ ವಿಜೃಭಂಣೆಯ ದಸರಾ ಮೆರವಣಿಗೆ

ಹನೂರು: ಅ.9- ಗ್ರಾಮೀಣ ದಸರಾ ಅಂಗವಾಗಿ ಹನೂರು ತಾಲ್ಲೂಕು ಆಡಳಿತ ಹಾಗೂ ಮೈಸೂರು ದಸರಾ ಆಚರಣಾ ಸಮಿತಿ ವತಿಯಿಂದ ದಸರಾ ಮೆರವಣಿಗೆ ವಿಜೃಭಂಣೆಯಿಂದ ಜರುಗಿತು.
ಪಟ್ಟಣದ ಆರ್‍ಎಂಸಿ ಆವರಣದಿಂದ ಹೊರಟ ದಸರಾ ಮೆರವಣಿಗೆ ಕ್ರಿಸ್ತರಾಜ ಶಾಲೆ ತಲುಪಿತು.ಶಾಸಕ ಆರ್.ನರೇಂದ್ರ ಗ್ರಾಮೀಣ ದಸರಾ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರವರನ ಪ್ರತಿಮೆಗೆ ಗಣ್ಯರು ಹೂವಿನ ಹಾರ ಹಾಕಿ ಗೌರವ ಸಮರ್ಪಣೆ ಸಲ್ಲಿಸಿದರು. ಮಹಿಳೆಯರು ಪೂರ್ಣಕುಂಭಾದ ಮೂಲಕ ಮೆರವಣಿಗೆಯಲ್ಲಿ ಸಾಗಿದರು.
ವಿವಿಧ ಇಲಾಖೆಯ ವತಿಯಿಂದ ತಮ್ಮ ಇಲಾಖೆಯನ್ನು ಪ್ರತಿನಿಧಿಸುವ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವಸ್ತಬ್ಧ ಚಿತ್ರಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಲಾಯಿತು.
ಮೆರವಣಿ ಉದ್ದಕ್ಕೂ ಸ್ಥಳಿಯ ಕಲಾವಿದರು ಸೇರಿದಂತೆ ಜಿಲ್ಲೆಯ ಹತ್ತು ಹಲವು ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದವು. ವಾದ್ಯ ಮೇಳ,ಡೋಲು, ತಮಟೆ ಸದ್ದಿಗೆ ಕಲಾವಿದರು ಕುಣಿದು ಕುಪ್ಪಳಿಸಿದರು. ತಾಲ್ಲೂಕಿನ ಪ್ರತಿ ಗ್ರಾ.ಪಂ.ವತಿಯಿಂದ ಸ್ತಬ್ದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಅರಣ್ಯ ಇಲಾಖೆ ವತಿಯಿಂದ ಪರ್ಯಾವರಣ ತುರ್ತು ಎಂಬ ಆಕರ್ಷಕ ಸ್ತಬ್ದ ಚಿತ್ರವನ್ನು ನಿರ್ಮಿಸಲಾಗಿತ್ತು.
ಗೊರವನ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ರಂಗದ ಕುಣಿತ, ಕಂಸಾಳೆ ಕುಣಿತ ಮುಂತಾದ ಕಲಾ ಪ್ರಕಾರಗಳ ಕಲಾವಿದರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿದರು.
ಕುಣಿದು ಕುಪ್ಪಳಿಸಿದ ಅಧಿಕಾರಿಗಳು: ಅಧೀಕೃತವಾಗಿ ಹನೂರು ತಾಲ್ಲೂಕು ರಚನೆಯಾದ ನಂತರ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ದಸರಾ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ನಡೆಯಿತು. ಇಲಾಖೆಯ ಅಧಿಕಾರಿಗಳು ತಮ್ಮ ಗ್ರಾಮದ ಹಬ್ಬ ಎಂಬಂತೆ ಸಂಭ್ರಮದಿಂದ ಪಾಲ್ಗೊಂಡಿದ್ದರು. ಮೆರವಣಿಗೆ ವೇಳೆ ವಾದ್ಯ ಮೇಳಗಳು ಹಾಗೂ ತಮಟೆ ತಾಳಕ್ಕೆ ಪುಳಕಿತರಾದ ತಹಶೀಲ್ದಾರ್ ಎ.ಹೆಚ್.ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಪ.ಪಂ.ಕಾರ್ಯನಿರ್ವಹಣಾಧಿಕಾರಿ ಮೂರ್ತಿ, ಹಿರಿಯ ಪಿಡಿಒ ಮಹಾದೇವಸ್ವಾಮಿ ಸೇರಿದಂತೆ ವಿವಿಧ ಗ್ರಾ.ಪಂ. ಪಿಡಿಒಗಳು, ಕಾರ್ಯದರ್ಶಿಗಳು, ಪ.ಪಂ.ಸದಸ್ಯರು ಕುಣಿದು ಕುಪ್ಪಳಿಸಿದರು. ಗ್ರಾಮೀಣ ದಸರಾ ಮೆರವಣಿಗೆಯಲ್ಲಿ ಗಮನ ಸೆಳೆದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಪ.ಪಂ.ಕಾರ್ಯನಿರ್ವಹಣಾಧಿಕಾರಿ ಮೂರ್ತಿ ತಮಟೆ ಬಾರಿಸುವವರನ್ನೆ ಹುರಿದುಂಬಿಸುವಂತೆ ಕುಣಿದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಮೆರವಣಿಗೆ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಶಿವಮ್ಮ, ಸದಸ್ಯರುಗಳು, ತಾ.ಪಂ.ಅಧ್ಯಕ್ಷ ರಾಜೇಂದ್ರ, ಸದಸ್ಯರುಗಳು, ಪ.ಪಂ.ಸದಸ್ಯರುಗಳು, ವಿವಿಧ ಇಲಾಖೆ ಅಧಿಕಾರಿಗಳು ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.
ಮೆರವಣಿಗೆ ನಂತರ ಗ್ರಾಮೀಣ ಕ್ರೀಡಾಕೂಟವನ್ನು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು.

Leave a Comment