ಹನಿಟ್ರ್ಯಾಪ್ ದಂಧೆ ಇಬ್ಬರ ಸೆರೆ ಮಂಗಳೂರಿನ ಯುವತಿಯರು ಭಾಗಿ!

ಮಂಗಳೂರು, ಜ.೧೦- ಉಪ್ಪಿನಂಗಡಿ ಬಳಿಯ ರೆಸಾರ್ಟ್ ಒಂದರಲ್ಲಿ ನಡೆಯುತ್ತಿದ್ದ ಹನಿಟ್ಯ್ರಾಪ್ ದಂಧೆಯ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಮೂವರು ಪರಾರಿಯಾಗಿದ್ದು ಮಂಗಳೂರಿನ ಇಬ್ಬರು ಯುವತಿಯರು ದಂಧೆಯ ಸೂತ್ರಧಾರರು ಎನ್ನುವುದು ಬಯಲಾಗಿದೆ. ಬಂಧಿತರನ್ನು ಕುಶಾಲನಗರ ನಿವಾಸಿ ಲೋಹಿತ್ ಹಾಗೂ ವಿಟ್ಲ ನಿವಾಸಿ ಶರೀಫ್ ಎಂದು ಗುರುತಿಸಲಾಗಿದ್ದು ಪ್ರಕರಣದ ಪ್ರಮುಖ ಆರೋಪಿಗಳಾದ ವಿಟ್ಲದ ಜಮಾಲ್, ನೌಶಾದ್ ಹಾಗೂ ಜೀವನ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೆಸಾರ್ಟ್‌ನಲ್ಲಿ ಎರಡು ಜೋಡಿಗಳು ತಂಗಿದ್ದ ವೇಳೆ ಐವರ ತಂಡ ದಾಳಿ ನಡೆಸಿ ತಾವು ಕೇರಳದ ಪೊಲೀಸರು ಎಂದು ಹೇಳಿ ಬೆದರಿಕೆ ಹಾಕಿ ಸುಲಿಗೆ ಮಾಡಲು ಯತ್ನಿಸಿದ್ದರು. ಇದರ ಖಚಿತ ಮಾಹಿತಿಯನ್ನು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ್ದು ಈ ಹಿನ್ನಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಕಾರ್ ಸಮೇತ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಇಬ್ಬರು ಯುವತಿಯರು ಯುವಕರನ್ನು ಬಲೆಗೆ ಬೀಳಿಸಿ ಪುತ್ತೂರಿನ ಸಾಲ್ಮರ ಎಂಬಲ್ಲಿರುವ ಆರೋಪಿಗಳ ಮನೆಗೆ ಬರಲು ಹೇಳಿ ಬಳಿಕ ಜೋಡಿಯಾಗಿ ಉಪ್ಪಿನಂಗಡಿಯ ರೆಸಾರ್ಟ್‌ಗೆ ತೆರಳುತ್ತಿದ್ದರು. ಕೆಲಹೊತ್ತಿನಲ್ಲೇ ತಂಡದ ಇತರರು ಜೋಡಿ ತಂಗಿರುವ ಕೋಣೆಗೆ ಪೊಲೀಸರು ಎಂಬುದಾಗಿ ಹೇಳಿ ದಾಳಿ ನಡೆಸಿ ಸುಲಿಗೆ ಮಾಡುತ್ತಿದ್ದರು ಎನ್ನಲಾಗಿದೆ.
ವಂಚನೆಗೆ ಒಳಗಾದ ಯುವಕ ಕೇರಳದಲ್ಲಿರುವ ತನ್ನ ಸಂಬಂಧಿಯಾದ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಹೇಳಿದಂತೆ ಲೊಕೇಶನ್ ಬಗ್ಗೆ ಮಾಹಿತಿ ನೀಡಿದ್ದ. ಈ ಮಾಹಿತಿಯನ್ನು ಕೇರಳದ ಪೊಲೀಸ್ ಅಧಿಕಾರಿ ಉಪ್ಪಿನಂಗಡಿ ಪೊಲೀಸರಿಗೆ ತಿಳಿಸಿದ್ದು ಉಪ್ಪಿನಂಗಡಿ ಸಿಐ ನಾಗೇಶ್ ಕದ್ರಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದೆ.

Leave a Comment