ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಹೊಟ್ಟೆ ನೋವು ಹಾಗೂ ಪರಿಹಾರ

ಹುಟ್ಟಿನಿಂದ ಹಿಡಿದು ಜೀವನದ ಅಂತ್ಯದವರೆಗೂ ಹೊಟ್ಟೆನೋವು ತಪ್ಪಿದ್ದಲ್ಲ. ಗರ್ಭಕೋಶ, ಗರ್ಭನಾಳ ಹಾಗೂ ಅಂಡಕೋಶಗಳು ಹೊಟ್ಟೆಯ ಭಾಗದಲ್ಲಿಯೇ ಇರುವುದರಿಂದ ಋತುಚಕ್ರಕ್ಕೆ ಸಂಬಂಧಪಟ್ಟ ಹಾಗೂ ಇತರೆ ನೋವುಗಳು ಅವರಿಗೆ ಅಸಹನೀಯ ಎನ್ನುವಂತೆ ಮಾಡುತ್ತವೆ.
ಹುಡುಗಿಯರಲ್ಲಿ ಹೊಟ್ಟೆನೋವು
ಋತುಚಕ್ರದ ನೋವು
ಹದಿಹರಿಯದ ವಯಸ್ಸಿನ ಅಂದರೆ 13 ರಿಂದ 19ರ ನಡುವಿನ ಹುಡುಗಿಯರಲ್ಲಿ ಋತುಚಕ್ರಕ್ಕೆ ಸಂಬಂಧಪಟ್ಟ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿ.
ಋತುಚಕ್ರಗಳ ನಡುವಿನ ಹೊಟ್ಟೆನೋವು
ಕೆಲವು ಹುಡುಗಿಯರಿಗೆ ಎರಡು ಋತುಚಕ್ರಗಳ ನಡುವಿನ ನಿರ್ದಿಷ್ಟ ಅವಧಿಯಲ್ಲಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಅಂಡ ಬಿಡುಗಡೆ ಆಗುವ ಸಮಯದಲ್ಲಿ 12 ರಿಂದ 16ನೇ ದಿನಗಳ ನಡುವಿನ ಅವಧಿಯಲ್ಲಿ ನೋವು ಅನುಭವಿಸುತ್ತಾರೆ. ಒಂದು ಸಣ್ಣ ನೋವು ನಿವಾರಕ ಮಾತ್ರೆಯಿಂದ ಈ ತೆರನಾದ ನೋವು ಕಾಣೆಯಾಗುತ್ತದೆ.
ರೋಗಕ್ಕೆ ಸಂಬಂಧಪಟ್ಟ ನೋವು
ಗರ್ಭಕೋಶ ಅಂಡಕೋಶ ಹಾಗೂ ಅಂಡನಾಳದಲ್ಲಿ ಏನಾದರೂ ತೊಂದರೆ ಉಂಟಾದರೆ ಈ ತೆರನಾದ ನೋವು ಕಾಣಿಸಿಕೊಳ್ಳುತ್ತದೆ. ಇದು ಮಾಮೂಲು ಹೊಟ್ಟೆನೋವಿಗಿಂತ ಭಿನ್ನವಾಗಿರಬಹುದು. ಮೂತ್ರ ವಿಸರ್ಜನೆಗೆ ಹೋದಾಗ ವಿಪರೀತ ನೋವು ಅನಿಸಬಹುದು. ಮಲ ವಿಸರ್ಜನೆಗೆ ಹೋದಾಗ ಮಲ ಬಾರದೆ ತಿಣುಕಾಟ ನಡೆಸುವುದರಿಂದಲೂ ಹೊಟ್ಟೆನೋವು ಹೆಚ್ಚಿಗೆ ತೊಂದರೆ ಕಾಣಿಸಬಹುದು.
ಹು‌ಡುಗಿಯರಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವಿಗೆ ಕಾರಣಗಳು
ಫೈಬ್ರಾಯ್ಡ್ ಗೆಡ್ಡೆಗಳಿಂದ
ಹೊಟ್ಟೆಯಲ್ಲಿ ಗೆಡ್ಡೆಗಳ ಉತ್ಪತ್ತಿಯಿಂದಾಗಿ ಹೊಟ್ಟೆನೋವು ಕಾಣಿಸುತ್ತದೆ. ಅಂಡಾಶಯದ ಸಿಸ್ಟ್‌ಗಳು ಮತ್ತು ಸೋಂಕು (ಪಿಐಡಿ) ಹೊಟ್ಟೆನೋವಿಗೆ ಕಾರಣವಾಗಬಹುದು.
ಎಂಡೊಮೆಟ್ರಿಯೊಸಿಸ್
ಪ್ರತಿತಿಂಗಳು ಋತುಚಕ್ರ ಬಂದಾಗ ರಕ್ತ ಗರ್ಭಕೋಶ ಹೊರತುಪಡಿಸಿ ಬೇರೆ ಬೇರೆ ಕಡೆ ಅಂದರೆ ಅಂಡನಾಳ, ಅಂಡಾಶಯ, ಮೂತ್ರಕೋಶ, ಮಲವಿಸರ್ಜನೆ ಜಾಗದ ಬಳಿ ಸಂಗ್ರಹ ಗೊಳ್ಳುತ್ತದೆ. ಈ ರೀತಿಯ ನೋವು ಸ್ವಲ್ಪ ಅಸಹನೀಯ ಎನಿಸುತ್ತದೆ.
ಸಾಮಾನ್ಯ ಹೊಟ್ಟೆ ನೋವುಗಳು
ಅಪೆಂಡಿಸೈಟಿಸ್
ಹೊಟ್ಟೆಯ ಬಲ ಭಾಗದಲ್ಲಿಈ ತೆರನಾದ ನೋವು ಕಾಣಿಸಿಕೊಳ್ಳುತ್ತದೆ. ಅಪೆಂಡಿಸೈಟಿಸ್ ಎಕ್ಟೋಪಿಕ್, ಅಂಡನಾಳ ತಿರುಚಿಕೊಂಡ ಸ್ಥಿತಿಯ ನೋವು ಇವು ಸಾಮಾನ್ಯ ನೋವಿನಲ್ಲಿ ಬರುತ್ತದೆ.
ಮೂತ್ರಕೋಶದ ಕಲ್ಲು
ಮೂತ್ರಕೋಶದಲ್ಲಿ ಹರಳುಗಳು ಉತ್ಪತ್ತಿಯಾದಾಗ ಅಸಹನೀಯ ನೋವು ಉಂಟಾಗುತ್ತದೆ.
ಮಲಬದ್ಧತೆಯ ಹೊಟ್ಟೆನೋವು: ಮಲ ಗಟ್ಟಿಯಾಗಿ ಹೊರಬರಲಾರದೆ ಹೊಟ್ಟೆ ನೋವಿನಿಂದ ಅರಚುವಂತಾಗುತ್ತದೆ.
ಅಂಗಗಳು ಪರಸ್ಪರ ಅಂಟಿಕೊಂಡಿದ್ದರೆ: ಈ ಹಿಂದೆ ಯಾವುದಾದರೂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಆಸುಪಾಸಿನ ಕೆಲವು ಅಂಗಗಳು ಅಂಟಿಕೊಂಡು ನೋವು ಬಾಧಿಸುತ್ತದೆ.
ಐಬಿಎಸ್ ಸಂಬಂಧಪಟ್ಟ ನೋವು
ಕೆಲವು ಹುಡುಗಿಯರಿಗೆ ಏನಾದರೂ ತಿಂದರೆ ಸಾಕು 5-6 ಸಾರಿ ಬಾಥ್ ರೂಮಿಗೆ ಹೋಗುವ ಸ್ಥಿತಿ ಉಂಟಾಗುತ್ತದೆ. ಇದನ್ನು ಇಱ್ರಿಟೇಬಲ್ ಬೊವೆಲ್ ಸಿಂಡ್ರೋಮ್ ಎಂದು ಹೇಳಲಾಗುತ್ತದೆ.
ಆಹಾರದ ಕಾರಣದಿಂದ
ಕೆಲವು ಹುಡುಗಿಯರಿಗೆ ಫುಡ್ ಪಯಿಸನಿಂಗ್‌ನಿಂದಲೂ ಹೊಟ್ಟೆನೋವು ಬರಬಹುದು.
ಪೆಲ್ವಿಕ್ ಇನ್ ಪ್ಲೇಮೆಟರಿ ಡಿಸೀಸ್ ಎಂಬ ಈ ತೊಂದರೆ ಅವರ ಅಂಡನಾಳ, ಅಂಡಕೋಶಕ್ಕೆ ಸೋಂಕು ಉಂಟುಮಾಡುತ್ತದೆ. ಇಂತಹ ಸಮಸ್ಯೆಯಿಂದ ಹೊಟ್ಟೆ ನೋವು ಬರುತ್ತದೆ.
ಪರೀಕ್ಷೆ
ಹುಡುಗಿಯರ ಹೊಟ್ಟೆನೋವಿಗೆ ಮೂಲ ಕಾರಣ ಏನು ಎಂದು ತಿಳಿದುಕೊಳ್ಳಲು ಸ್ತ್ರೀ ರೋಗ ತಜ್ಞರು ಅನೇಕ ಬಗೆಯ ಪರೀಕ್ಷೆಗಳನ್ನು ಮಾಡಿಸುತ್ತಾರೆ. ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಯೂರಿನ್ ಕಲ್ಚರ್ ಹೀಗೆ ಅನೇಕ ಪರೀಕ್ಷೆಗಳ ಮೂಲಕ ನಿಖರ ಕಾರಣ ಕಂಡು ಹಿಡಿಯುತ್ತಾರೆ.
ಟಿವಿಎಸ್ ಸ್ಕ್ಯಾನಿಂಗ್
ಮದುವೆಯಾದ ಯುವತಿಯರಿಗಷ್ಟೇ ಈ ಪರೀಕ್ಷೆ ಮಾಡಿಸುತ್ತಾರೆ. ಅವಿವಾಹಿತರಿಗೆ ಅಬ್ಡಾಮಿನಲ್ ಸ್ಕ್ಯಾನಿಂಗ್ ಮಾಡಿಸುತ್ತಾರೆ. ಈ ಪರೀಕ್ಷೆಯಿಂದ ಶೇ. 95-98 ರಷ್ಟು ನಿಖರ ಕಾರಣ ಪತ್ತೆ ಹಚ್ಚಬಹುದು. ಇದರಿಂದ ಗರ್ಭಕೋಶದಲ್ಲಿ ಗೆಡ್ಡೆಗಳಿದ್ದರೆ, ನೀರ್ಗುಳ್ಳೆಗಳಿದ್ದರೆ ಪಿಐಡಿ ಏನೇ ಇದ್ದರೂಗೊತ್ತಾಗುತ್ತದೆ.
ಚಿಕಿತ್ಸೆ: ಕಾರಣದ ಮೇಲೆ ಅವಲಂಬಿತವಾಗಿದೆ.
ಮುಟ್ಟಿನ ಸಂದರ್ಭದ ಹೊಟ್ಟೆ ನೋವಿಗೆ ಪೇನ್ ಕಿಲ್ಲರ್ ತೆಗೆದುಕೊಂಡರೆ ಸಾಕಾಗುತ್ತದೆ. ಮುಟ್ಟಿನ ನಡುವಿನ ಅವಧಿಯಲ್ಲಿ ಬರುವ ನೋವಿಗೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಅವಳಿಗೆ ಸೂಕ್ಷ್ಮ ಭರವಸೆಕೊಟ್ಟರೆ ಸಾಕು. ನಿನ್ನಲ್ಲಿ ಸಂತಾನೋತ್ಪತ್ತಿ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅದರ ಬಗ್ಗೆ ಭಯ ಬೇಡ ಎಂದು ಅವಳಿಗೆ ಧೈರ್ಯ ಹೇಳಬೇಕು.
ಪೈಬ್ರಾಯಿಡ್ ತುಂಬಾ ಚಿಕ್ಕದಿದ್ದರೆ ಅದರಿಂದ ಏನೂ ಸಮಸ್ಯೆ ಆಗುವುದಿಲ್ಲ. ರಕ್ತಹೀನತೆ ಇದ್ರೆ, ರಕ್ತ ಹೆಚ್ಚಾಗುವಂತಹ ಆಹಾರ ಸೇವನೆ ಮಾಡಿದರೆ ಸರಿಹೋಗಬಹುದು. ಎಂಡೋಮೆಟ್ರಿಯೋಸಿಸ್ ಇರುವ ಸಂದರ್ಭದಲ್ಲಿ ಲ್ಯಾಪ್ರೋಸ್ಕೋಪಿಕ್‌ನಿಂದ ಸೂಕ್ತ ಚಿಕಿತ್ಸೆ ಕೊಡಬಹುದು.
ಎಚ್ಚರಿಕೆ
ಹೊಟ್ಟೆನೋವು ಬಂದಾಗ ನಿರ್ಲಕ್ಷ್ಯ ತೋರದೆ ವೈದ್ಯರ ಬಳಿ ಹೋಗಿ ತೋರಿಸಿಕೊಳ್ಳಿ. ಸಣ್ಣ ಪ್ರಮಾಣದ ಹೊಟ್ಟೆ ನೋವು ಕೆಲವು ಮಾತ್ರೆಗಳಿಂದ ಸರಿಹೋಗಬಹುದು. ನಿರ್ಲಕ್ಷ್ಯ ತೋರಿದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದಾದ ಸ್ಥಿತಿ ಬರಬಹುದು.
ಲೇಖಕರು: ಡಾ. ಬಿ. ರಮೇಶ್
ಅಲ್ಟಿಯಸ್ ಹಾಸ್ಟಿಟಲ್.
ರಾಜರಾಜೇಶ್ವರಿನಗರ, ಬೆಂಗಳೂರು-98.
ಫೋನ್ ನಂ. 9663311128, 080-28606789
ಶಾಖೆ: ರಾಜಾಜಿನಗರ: 9900031842, 080-23151873.

Leave a Comment