ಹದಿಹರೆಯದಲ್ಲಿ ಅತಿಯಾದ ರಕ್ತಸ್ರಾವ

ಮುಟ್ಟಿನ ಸಂದರ್ಭದಲ್ಲಿ ರಕ್ತಸ್ರಾವ ಹಾಗೂ ಹೊಟ್ಟೆನೋವು ಮಹಿಳೆಯರ ಸಾಮಾನ್ಯ ಸಮಸ್ಯೆ. ಋತುಮತಿ ಆದಾಗಿನಿಂದ ಹಿಡಿದು ಮುಟ್ಟು ನಿಲ್ಲುವ ತನಕ ಈ ರಕ್ತಸ್ರಾವ ಹಾಗೂ ನೋವಿನ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ರಕ್ತಸ್ರಾವ (ಪ್ಯೂಬರ್ಟಿ ಮೆನೊರೆಜಿಯಾ) ಹಾಗೂ ನೋವು ಒಂದು ಇತಿಮಿತಿಯಲ್ಲಿದ್ದರೆ ಯಾರೂ ಅದರ ಬಗ್ಗೆ ಅಷ್ಟೊಂದು ಭಯಭೀತರಾಗುವುದಿಲ್ಲ.
೪ ದಿನ ತಾನೆ, ಆಮೇಲೆ ನಿರಾಳ ಎಂದು ಬಹುತೇಕ ಯುವತಿಯರು ಹಾಗೂ ಮಹಿಳೆಯರು ಆ ರಕ್ತಸ್ರಾವದ ನೋವಿಗೆ ಹೊಂದಿಕೊಂಡು ಹೋಗುತ್ತಿರುತ್ತಾರೆ.
ಕೆಲವೊಮ್ಮೆ ಹೆಣ್ಣು ಮಕ್ಕಳಲ್ಲಿ ಆರಂಭದಲ್ಲಿಯೇ ಅಂದರೆ, ೧೩ ರಿಂದ ೧೯ನೇ ವಯಸ್ಸಿನ ತನಕ ಅತಿಯಾದ ರಕ್ತಸ್ರಾವ ಸಮಸ್ಯೆ ಅಸಹನೀಯ ವೇದನೆಯನ್ನುಂಟು ಮಾಡುತ್ತದೆ. ಇದನ್ನು ವೈದ್ಯ ಭಾಷೆಯಲ್ಲಿ ಪ್ಯೂಬರ್ಟಿ ಮೆಲೊರೆಜಿಯಾ ಎಂದು ಹೇಳುತ್ತಾರೆ. ಹದಿಹರೆಯದ ಅತಿ ರಕ್ತಸ್ರಾವ ಎಂದು ನಾವು ಇದನ್ನು ಸರಳವಾಗಿ ವ್ಯಾಖ್ಯಾನಿಸಬಹುದು. ಈ ಸಮಸ್ಯೆ ಹುಡುಗಿಯರ ಶೈಕ್ಷಣಿಕ ಚಟುವಟಿಕೆಗೆ ಬಾಧೆಯಾಗಿ ಪರಿಣಮಿಸಬಹುದು.
ಲಕ್ಷಣಗಳು
ಬೇರೆ ಯಾವ ಲಕ್ಷಣಗಳು ಗೋಚರಿಸದೆ ೭ – ೮ ದಿನಗಳ ಕಾಲ ಅತಿಯಾಗಿ ರಕ್ತಸ್ರಾವ ಆಗುತ್ತಿರುತ್ತದೆ.
ರಕ್ತಸ್ರಾವದ ಜತೆಗೆ ಕೆನೆ ಕನೆಯಂತಹ ಗೆಡ್ಡೆಗಳು ಕಾಣಿಸಿಕೊಳ್ಳಬಹುದು.
ಪದೇ ಪದೇ ಪ್ಯಾಡ್ ಬದಲಿಸುವ ಸ್ಥಿತಿ ಉತ್ಪನ್ನವಾಗಬಹುದು.
ರಕ್ತಹೀನತೆ ಅಥವಾ ಅನಿಮಿಯಾದ ಸ್ಥಿತಿ ಕಾಣಿಸಿಕೊಳ್ಳಬಹುದು.
ಅತಿಯಾದ ಸುಸ್ತು ಕಾಡಬಹುದು.
ಊಟ ಮಾಡಲು ನಿರಾಸಕ್ತಿ ಉಂಟಾಗಬಹುದು.
ಆಟ – ಪಾಠಗಳಲ್ಲಿ ಗಮನ ಕೇಂದ್ರೀಕರಿಸಲು ಸಾಧ್ಯವಾಗದೆ ಹೋಗಬಹುದು.
ಯಾವಾಗ ರಕ್ತಸ್ರಾವ ಆಗುತ್ತೋ ಎಂಬ ಭಯ ಶಾಲಾ – ಕಾಲೇಜಿಗೆ ಹೋಗದ ಸ್ಥಿತಿ ಉಂಟು ಮಾಡಬಹುದು.
ಈ ಸಮಸ್ಯೆಗೆ ಏನು ಕಾರಣ?
ಹಾರ್ಮೋನು ಏರುಪೇರಿನಿಂದ ಈ ಸಮಸ್ಯೆ ಉಲ್ಬಣಗೊಳ್ಳುತ್ತದೆ.
ಥೈರಾಯಿಡ್ ಸಮಸ್ಯೆಯಿಂದಲೂ ಅತಿ ರಕ್ತಸ್ರಾವದ ಸಮಸ್ಯೆ ಕಾಣಿಸಿಕೊಳ್ಳಬಹುದು.
ಸಾಮಾನ್ಯವಾಗಿ ಹರಿಹರೆಯದ ಹುಡುಗಿಯರಲ್ಲಿ ಥೈರಾಯಿಡ್ ಸಮಸ್ಯೆಗಿಂತ ಹೆಚ್ಚಾಗಿ ಹಾರ್ಮೋನು ಏರುಪೇರಿನಿಂದಾಗಿಯೇ ಅತಿ ರಕ್ತಸ್ರಾವ ಸಮಸ್ಯೆ ಅವರ ಜೀವ ಹಿಂಡುವಂತೆ ಮಾಡುತ್ತದೆ.
ಬಹಳಷ್ಟು ಹುಡುಗಿಯರಲ್ಲಿ ಅಂಡಾಣುರಹಿತ ಋತುಚಕ್ರವೇ ಈ ಅತಿ ರಕ್ತಸ್ರಾವದ ಸಮಸ್ಯೆಗೆ ಕಾರಣವಾಗಿರುತ್ತದೆ. ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದಂತೆ ಮೆದುಳಿನ ಹೈಪೊಥೆಲಾಮಸ್‌ನಿಂದ ಪಿಟ್ಯೂಟರಿ ಗ್ರಂಥಿಗೆ ಈSಊ ಹಾಗೂ ಐಈ ಹಾರ್ಮೋನುಗಳು ನಿಗದಿತ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಅಂಡಾಶಯದಿಂದ ಪ್ರತಿ ತಿಂಗಳು ಒಂದು ಅಂಡಾಣು ಪಕ್ವಗೊಳ್ಳುವಂತೆ ಮಾಡುತ್ತದೆ. ಈ ಪ್ರಕ್ರಿಯೆಯೇ ಓವ್ಯುಲೇಶನ್ ಅಥವಾ ಅಂಡೋತ್ಪತ್ತಿ.
ಅಂಡಾಣು ಉತ್ಪತ್ತಿಯ ಜತೆಜತೆಗೆ ಪ್ರೊಜೆಸ್ಟ್ರಾನ್ ಹಾರ್ಮೋನ್ ಕೂಡ ಉತ್ಪತ್ತಿಯಾಗುತ್ತದೆ. ಆ ಸಮಯದಲ್ಲಿ ಗರ್ಭಕೋಶ ಪದರ ದಪ್ಪಗಾಗುತ್ತ ಹೋಗುತ್ತದೆ. ಈ ಅವಧಿಯಲ್ಲಿ ಅಂಡಾಣು – ವೀರ್ಯಾಣು ಮಿಲನಗೊಂಡಲ್ಲಿ ಭ್ರೂಣ ರಚನೆಯ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಒಂದು ವೇಳೆ ಈ ಪ್ರಕ್ರಿಯೆ ನಡೆಯದೇ ಹೋದಲ್ಲಿ ಅಂಡಾಣು ಸತ್ತು, ಹಾರ್ಮೋನುಗಳ ಮಟ್ಟ ಇಳಿಮುಖಗೊಂಡು ಗರ್ಭಕೋಶ ಪದರು ಕಳಚಿ ಹೊರಬರುತ್ತದೆ.
ಹದಿವಯಸ್ಸಿನಲ್ಲಿ ಅಂಡರಹಿತ ಋತುಚಕ್ರದ ಸಂದರ್ಭದಲ್ಲಿ ಈಸ್ಟ್ರೋಜನ್ ಹಾರ್ಮೋನಿನ ಪ್ರಮಾಣವೇ ಹೆಚ್ಚಿಗೆ ಇರುತ್ತದೆ. ಅದರ ಜತೆಜತೆಗೆ ಇರಬೇಕಾದ ಪ್ರೊಜೆಸ್ಟ್ರಾನ್ ಹಾರ್ಮೋನು ಉತ್ಪತ್ತಿ ಇರುವುದೇ ಇಲ್ಲ. ಕೇವಲ ಈಸ್ಟ್ರೋಜನ್‌ನಿಂದಾಗಿ ಗರ್ಭಕೋಶ ಪದರು ಅತಿಯಾಗಿ ಬೆಳೆಯುತ್ತದೆ. ಆ ಸಂದರ್ಭದಲ್ಲಿ ರಕ್ತ ಪೊರೈಕೆ ಸ್ಥಗಿತಗೊಂಡು ಒಳಪದರು ಚೂರುಚಾರಾಗಿ ಕೆಲವೊಮ್ಮೆ ಗೆಡ್ಡೆ ಗೆಡ್ಡೆಯ ರೂಪದಲ್ಲಿ ಬರುತ್ತದೆ. ಅದೇ ಅತಿಯಾದ ರಕ್ತಸ್ರಾವ.
ಅಂತಹ ಸಂದರ್ಭದಲ್ಲಿ ಏನು ಮಾಡಬೇಕು?
ಎಲ್ಲಕ್ಕೂ ಮೊದಲು ಅಂತಹ ಸಮಸ್ಯೆಗೆ ತುತ್ತಾದ ಯುವತಿಗೆ ರಕ್ತಸ್ರಾವ ತಡೆಗಟ್ಟುವ ಔಷಧಿ ಕೊಡಲಾಗುತ್ತದೆ. ಇದರ ಜತೆಜತೆಗೆ ಪ್ರೊಜೆಸ್ಟ್ರಾನ್ ಹಾಗೂ ಈಸ್ಟ್ರೋಜೆನ್ ಹಾರ್ಮೋನು ಮಾತ್ರೆಗಳನ್ನು ೬ ತಿಂಗಳ ಅವಧಿಗೆ ಕೊಡಲಾಗುತ್ತದೆ.
ಪರೀಕ್ಷೆ
ರಕ್ತ ಪರೀಕ್ಷೆಗಳ ಜತೆಜತೆಗೆ ಪೆಲ್ವಿಕ್ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಲು ಸೂಚಿಸಲಾಗುತ್ತದೆ. ಪಿಸಿಓಡಿ ಸಮಸ್ಯೆ ಇದ್ದರೆ ಅವರಿಗೂ ಹಾರ್ಮೋನು ಚಿಕಿತ್ಸೆ ಕೊಡಬೇಕಾಗುತ್ತದೆ. ಒಂದು ವೇಳೆ ಥೈರಾಯಿಡ್ ಸಮಸ್ಯೆಯಿದ್ದರೆ ಥೈರಾಯಿಡ್ ಹಾರ್ಮೋನು ಚಿಕಿತ್ಸೆ ಬೇಕಾಗಬಹುದು.
ಎಚ್ಚರಿಕೆ ಅಗತ್ಯ
ಹೆಣ್ಣು ಮಕ್ಕಳಿಗೆ ಅತಿಯಾಗಿ ರಕ್ತಸ್ರಾವ ಆಗುತ್ತಿದ್ದರೆ, ಅದನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ. ಹಾಗೊಮ್ಮೆ ನಿರ್ಲಕ್ಷ್ಯಿಸಿದರೆ, ರಕ್ತಹೀನತೆಯ ಸಮಸ್ಯೆ ಅಂದರೆ ಅನಿಮಿಯಾದಿಂದ ಬೇರೆ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಹೆಚ್ಚಿನ ಹೆಣ್ಣುಮಕ್ಕಳಿಗೆ ಕ್ರಮೇಣವಾಗಿ ಋತುಚಕ್ರ ಸಹಜವಾಗಿ ಅಧಿಕ ರಕ್ತಸ್ರಾವವೂ ಕಡಿಮೆಯಾಗುತ್ತದೆ.

Leave a Comment