ಹದಿವಯಸ್ಸಿನಲ್ಲೇ ಬಿಳಿಕೂದಲು

ಸಾಮಾನ್ಯವಾಗಿ ವಯಸ್ಸಾದ ಬಳಿಕ ತಲೆಯ ಕೂದಲು ಬಿಳಿಯಾಗುತ್ತದೆ. ಇದಕ್ಕೆ ಕೂದಲು ನೆರೆ ಎಂದು ಕರೆಯುತ್ತೇವೆ. ಆದರೆ ಈಗ ಕಾಲ ಬದಲಾಗಿದೆ. ಆಧುನಿಕ ಜೀವನಶೈಲಿಯಿಂದ ಹದಿವಯಸ್ಸಿನಲ್ಲೇ ತಲೆ ಕೂದಲು ಬಿಳಿಯಾಗುತ್ತದೆ. ಇದಕ್ಕೆ ಕಾರಣ ಹಲವು. ಅನುವಂಶಿಕ ಕಾರಣಗಳ ಜೊತೆಗೆ ಕೆಲವರಲ್ಲಿ ವಯಸ್ಸಾದಂತೆ ಕೂದಲಿನ ಬಣ್ಣಕ್ಕೆ ಕಾರಣವಾಗುವ ಮೆಲನಿನ್ ಕಡಿಮೆಯಾಗುವುದು ಕೂದಲು ಬಿಳಿಯಾಗುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಕೂದಲು ಬೇಗ ಬಿಳಿಯಾಗುವುದಕ್ಕೆ ಕಾರಣ ವಂಶವಾಹಿ ತಮ್ಮ ಪೂರ್ವಜರಿಂದ ಬಂದು ವಂಶವಾಹಿಗಳು ಅಕಾಲದಲ್ಲಿ ಕೂದಲು ನೆರೆಯುವುದಕ್ಕೆ ಕಾರಣವೆಂದು ಹೇಳಲಾಗುತ್ತದೆ. ಇದಕ್ಕೆ ಏನು ಮಾಡಲಾಗುವುದು. ಆದರೆ ಅನುವಂಶಿಕ ಕಾರಣಗಳಲ್ಲದೆ ಕೆಲವೊಂದು ಪೋಷಾಕಾಂಶಗಳ ಕಾರಣಗಳಿಂದ ಕೂದಲು ಬಿಳಿಯಾಗುತ್ತದೆ. ಹಾಗಾಗಿ ಆಹಾರದಲ್ಲಿ ಸಂಪೂರ್ಣ ಪ್ರೊಟೀನ್ ಇರುವಂತೆ ನೋಡಿಕೊಳ್ಳಬೇಕು. ಕೂದಲ ಬಣ್ಣಕ್ಕೆ ಮೂಲದ್ರವ್ಯವೇ ಪ್ರೊಟೀನ್ ಆಗಿದೆ.

ಕೂದಲು ಸಣ್ಣ ವಯಸ್ಸಲ್ಲೇ ನೆರೆಯುವಂತೆ ಮಾಡುವಲ್ಲಿ ಒತ್ತಡದ ಪಾತ್ರ ದೊಡ್ಡದಿದೆ. ನೀವು ಒತ್ತಡಕ್ಕೊಳಗಾದಾಗ ಅದು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಕೂದಲಿನ ಮೇಲೂ ತನ್ನ ಪ್ರಭಾವ ತೋರುತ್ತದೆ. ಧ್ಯಾನ ಮಾಡುವುದು, ಸಣ್ಣ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು, ಪ್ರಾಣಾಯಾಮ, ತಲೆಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳುವುದು ಮುಂತಾದ ಕ್ರಮಗಳಿಂದ ಒತ್ತಡ ದೂರವಿಡಲು ಪ್ರಯತ್ನಿಸಿ.
ಸಿಗರೇಟು ಸೇವನೆಯು ಕೂದಲ ನೆರೆತಕ್ಕೆ ಪ್ರಮುಖ ಕಾರಣ. ಇನ್ನೂ ನೀವು ಈ ಚಟ ಬಿಟ್ಟಿಲ್ಲವಾದರೆ, ಇದೀಗ ಆ ನಿಮ್ಮ ಒಳ್ಳೆಯ ನಿರ್ಧಾರಕ್ಕೆ ಸರಿಯಾದ ಸಮಯ.

ತಲೆಯ ಕೂದಲು ಬೇಗ ಬಿಳಿಯಾಗುವುದನ್ನು ತಪ್ಪಿಸಲು ನೀರು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ದೇಹಕ್ಕೆ ನೀರಿನ ಕೊರೆತೆಯಾದರೆ ಅದು ಕೂದಲಿನ ಮೇಲು ಪರಿಣಾಮ ಬೀರುತ್ತದೆ. ಹಾಗಾಗಿ ಹೆಚ್ಚು ನೀರು ಸೇವನೆ ಒಳ್ಳೆಯದು.

ನೀರು: ನೀರು ಹಾಗೂ ಇತರೆ ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ನಿಮ್ಮ ಆರೋಗ್ಯವೂ ಸುಧಾರಿಸಲಿದೆ ಹಾಗೂ ಕೂದಲು ಕೂಡ ಸೂಪರ್ ಹೆಲ್ದಿಯಾಗಲಿದೆ. ದೇಹಕ್ಕೆ ನೀರಿನ ಕೊರತೆಯಾದರೆ ಕೂದಲಿಗೆ ಉತ್ತಮ ಪೋಷಣೆ ಒದಗಿಸುವುದು ಸಾಧ್ಯವಿಲ್ಲ. ಸರಿಯಾದ ಪೋಷಕ ಸತ್ವಗಳನ್ನು ಅದು ಕೂದಲಿಗೆ ರವಾನಿಸಲಾರದು. ಆಗ ಕೂದಲು ಉದುರುವುದು ಹಾಗೂ ಬಿಳಿ ಕೂದಲ ಸಮಸ್ಯೆ ತಲೆದೋರಬಹುದು.

ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ, ರಕ್ತ ಸಂಚಲನ ಚೆನ್ನಾಗಿ ಆಗುತ್ತದೆ. ಇದು ನಿಮ್ಮ ಕೂದಲನ್ನು ನೈಸರ್ಗಿಕವಾಗಿಯೇ ಆರೋಗ್ಯಯುತವಾಗಿಡುತ್ತದೆ.

ಆಯಿಲ್ ಮಸಾಜ್: ಭೃಂಗ, ಅಥವಾ ಬಾದಾಮಿ ಎಣ್ಣೆ ಅಥವಾ ಆಲಿವ್ ಆಯಿಲ್ ನಿಂದ ವಾರದಲ್ಲಿ ಕನಿಷ್ಠ ಒಮ್ಮೆಯಾದರೂ ನೆತ್ತಿ ಮಸಾಜ್ ಮಾಡಿಕೊಳ್ಳಿ.

ಶಾಂಪೂ ಬದಲಿಸಿ: ಮಂದವಾದ ಹಾಗೂ ಪೋಷಕ ಸತ್ವಗಳನ್ನು ಹೊಂದಿರುವ ಶಾಂಪೂ ಬಳಸಿ. ಆರ್ಗಾನಿಕ್ ಹಾಗೂ ಹರ್ಬಲ್ ಶಾಂಪೂಗಳ ಬಳಕೆ ಒಳ್ಳೆಯದು.

ವಿಟಮಿನ್ ಸಿ ಸೇವಿಸಿ: ಬಿಳಿ ಕೂದಲು ತಡೆಗಟ್ಟುವಲ್ಲಿ ವಿಟಮಿನ್ ಸಿ ಪಾತ್ರ ಮಹತ್ತರವಾದುದು. ಹೀಗಾಗಿ ಕಿತ್ತಳೆ, ಕಲ್ಲಂಗಡಿಯಂತ ಹಣ್ಣುಗಳ ಸೇವನೆ ಹೆಚ್ಚಿಸಿ.

ಮೀನು ಸೇವನೆ ಒಳ್ಳೆಯದು: ಮೀನಿನಲ್ಲಿ ಕೂದಲಿಗೆ ಒಳ್ಳೆಯದಾದ ಸೆಲೆನಿಯಮ್ ಹಾಗೂ ಪ್ರೊಟೀನ್ ಹೆಚ್ಚಿರುತ್ತದೆ.

ಬಿಳಿ ಕೂದಲಿನ ಕುರಿತು ಚಿಂತೆ ಮಾಡದೆ ಇರುವುದು, ಈಗಾಗಲೇ ಹೊಂದಿರುವ ಕೂದಲನ್ನು ಒಪ್ಪಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾದುದು.

Leave a Comment