ಹದಿನೆಂಟರ ಹರೆಯ ಬಂದಾಗ . .

ಪ್ರೇಮ ಮತ್ತು ಮನೋರಂಜನೆಯ ಕಥಾವಸ್ತುವಿರುವ ಚಿತ್ರವಾಗಿದೆ ‘೧೮ರಿಂದ ೨೫’ ಯುವಜನರಿಗೆ  ಕಚಗುಳಿ ಇಡುವ ಹಾಗೆ ಚಿತ್ರದ ಕಥಾನಕವಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಆಗದ ಈ ವಯೋಮಾನದಲ್ಲಿ ಪ್ರೀತಿಯ ಬಲೆಗೆ ಬಿದ್ದಾಗ ಏನೇನೆಲ್ಲ ಆಗುತ್ತದೆ ಎಂದು ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ ಎಂದ ನಿದೇರ್ಶಕ ಸ್ಮೈಲ್ ಶ್ರೀನು ಅವರು  ಇದೀಗ ಸದ್ದಿಲ್ಲದೆ ‘೧೮ ರಿಂದ ೨೫’ ಚಿತ್ರವನ್ನು  ಆರಂಭಿಸಿದ್ದಾರೆ.

ಈ ಮೊದಲು ‘ತೂಫಾನ್ ಹಾಗೂ ‘ಬಳ್ಳಾರಿ ದರ್ಬಾರ್ ಚಿತ್ರಗಳನ್ನು ಕೊಟ್ಟಿರುವ ಅವರು ಎಂದಿನಂತೆ ಈ ಬಾರಿಯೂ ಒಂದಷ್ಟು ಹೊಸ ಪ್ರತಿಭೆಗಳನ್ನು ಬೆಳ್ಳೆತೆರೆಗೆ ಪರಿಚಯಿಸುವ ಸಾಹಸಕ್ಕೆ ಕೈಹಾಕಿದ್ದಾರೆ. ಅಭಿರಾಮ್ ಹಾಗೂ ರಿಷಿ ತೇಜ, ಫಾರೂಖ್ ಖಾನ್ ಅವರನ್ನು ಚಿತ್ರದ ಪ್ರಮುಖ ಪಾತ್ರಗಳಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ಇವರಿಗೆ ಜೋಡಿಯಾಗಿ ಅಖಿಲಾ ಪ್ರಕಾಶ್ ಹಾಗೂ ವಿದ್ಯಾಶ್ರೀ ನಟಿಸಲಿದ್ದಾರೆ.

ಇವರೊಂದಿಗೆ  ಬಹುಭಾಷಾ ನಟ, ಕನ್ನಡಿಗ ಸುಮನ್ ಕೂಡ ಒಂದು ಪಾತ್ರಕ್ಕೆ ಬಣ್ಣಹಚ್ಚುತ್ತಿದ್ದಾರೆ ಎಂದು ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ತಿಳಿಸಿದ ಶ್ರೀನು ಅವರು ಹಂಪಿ, ಬೆಂಗಳೂರು, ಹಾಗೂ ಕೇರಳದಲ್ಲಿ ಚಿತ್ರೀಕರಣ ನಡೆಸಲು ಯೋಜಿಸಿಕೊಂಡಿದ್ದಾರೆ.    ರಿಷಿತೇಜ್ ಹಾಗು ಅಭಿರಾಮ್‌ಗೆ ಇದು ಮೊದಲ ಚಿತ್ರ. ಮತ್ತೊಬ್ಬ ನಟ ಫಾರೂಖ್‌ಗೆ ಇದು ೫ನೇ ಚಿತ್ರ. ಅವರು ಈಗಾಗಲೇ ಗರ್ಭದಗುಡಿ, ೧೪೧, ಅಕ್ಕಭಾವ ಚಿತ್ರಗಳಲ್ಲಿ  ನಟಿಸಿ ಗುರುತಿಸಿಕೊಂಡಿದ್ದಾರೆ.

ನಾಯಕಿ ಅಖಿಲಾ ಪ್ರಕಾಶ್ ಮಾತನಾಡಿ ಸಮೀರಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಿನ ಜನರೇಷನ್‌ನಲ್ಲಿ ಹುಡುಗೀರು ಹೇಗೆ ಲವ್‌ನಲ್ಲಿ ಬೀಳ್ತಾರೆ, ಅದು ರಿಯಲ್ ಲವ್ವಾ ಅಥವಾ ಬರೀ ಆಕರ್ಷಣೆಯಾ ಎಂದು ನನ್ನ ಪಾತ್ರದ ಮೂಲಕ ನಿರೂಪಿಸಲಾಗಿದೆ ಎಂದರೆ, ದಾವಣಗೆರೆ ಮೂಲದ ನಟಿ ವಿದ್ಯಾಶ್ರೀ ತನ್ನ ಪಾತ್ರದ ಬಗ್ಗೆ ಮಾತನಾಡಿ ಎಲ್ಲರೂ ಒಂದುರೀತಿ ಯೋಚನೆ ಮಾಡಿದರೆ ನಾನು ಬೇರೊಂದು ರೀತಿ ಯೋಚಿಸುತ್ತಿರುತ್ತೇನೆ, ನನ್ನ ಥಾಟ್ ಬೇರೆಯೇ ಇರುತ್ತದೆ ಎಂದು ಹೇಳಿದರು.

ತೆಲುಗಿನ  ಹೆಸರಾಂತ ನಿರ್ಮಾಪಕ ಟಿ. ರಾಮ ಸತ್ಯನಾರಾಯಣರಾವ್ ನಿರ್ಮಾಣ ಮಾಡುತ್ತಿರುವ ‘೧೮ರಿಂದ ೨೫’ ಜೊತೆಗೆ ‘ರಾಮ್‌ಗಢ್ ಸಿನಿಮಾಗಳಿಗೆ ಈ ಮುಹೂರ್ತದಲ್ಲಿಯೇ ಚಾಲನೆ ನೀಡಲಾಯಿತು. ಎರಡೂ  ಚಿತ್ರಗಳನ್ನು ಸ್ಮೈಲ್ ಶ್ರೀನು ಅವರೇ ನಿರ್ದೇಶಿಸಲಿದ್ದು, ಸದ್ಯಕ್ಕೆ ‘೧೮ರಿಂದ ೨೫’ ಚಿತ್ರವನ್ನು ಕೈಗೆತ್ತಿಕೊಳ್ಳಲಾಗಿದೆ. ಟಿ. ಸತ್ಯನಾರಾಯಣರಾವ್ ಅವರು ತೆಲುಗಲ್ಲಿ ಸುಮಾರು  ೧೦೦ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಅವರು ಕನ್ನಡದಲ್ಲಿಯೂ ಇನ್ನೂ ಹಲವು  ಪ್ರಾಜೆಕ್ಟ್‌ಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದ್ದಾರೆ. ನನ್ನ ಎಲ್ಲಾ ಚಿತ್ರಗಳಲ್ಲಿ ಹೊಸ ಪ್ರತಿಭೆಗಳಿಗೆ ಮೊದಲ ಆದ್ಯತೆ ನೀಡುತ್ತಾ ಬಂದಿದ್ದೇನೆ. ಅದರಂತೆ ಈ ಚಿತ್ರದಲ್ಲೂ ಹೊಸ ಕಲಾವಿದರನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಟಿ. ರಾಮಸತ್ಯ ನಾರಾಯಣರಾವ್ ತಿಳಿಸಿದರು.

Leave a Comment