ಹದಗೆಟ್ಟ ರಸ್ತೆ ದುರಸ್ತಿ, ಸಂಚಾರ ನಿಯಂತ್ರಣಕ್ಕೆ

 ದಿ.22 ನಗರ ಬಂದ್ ಕರೆ – ಪಾಪಾರೆಡ್ಡಿ
ರಾಯಚೂರು.ಜ.13- ನಗರಾದ್ಯಂತ ಹದಗೆಟ್ಟಿರುವ ರಸ್ತೆ ದುರಸ್ತಿ ಹಾಗೂ ಸಂಚಾರಿ ನಿಯಂತ್ರಿಸುವಲ್ಲಿ ನಿಷ್ಕಾಳಜಿ ವಹಿಸಿರುವ ಪೊಲೀಸರ ಕ್ರಮ ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ದಿ.22 ರಂದು ರಾಯಚೂರು ನಗರ ಬಂದ್‌ಗೆ ಕರೆ ನೀಡಲಾಗಿದೆಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ನಿಯಂತ್ರಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿಷ್ಕಾಳಜಿ ವಹಿಸಿದ್ದಾರೆ. ಸಂಚಾರ ಅಸ್ತವ್ಯಸ್ತದಿಂದ ಪ್ರತಿನಿತ್ಯ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಲ್ಬಣಗೊಂಡರೂ, ಸಂಚಾರ ನಿಯಂತ್ರಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆಂದು ದೂರಿದರು. ಇತ್ತೀಚಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು ಅವರನ್ನು ಬಿಜೆಪಿ ನಿಯೋಗ ಭೇಟಿಯಾಗಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಲಾಗಿತ್ತು.
ಆದರೆ, ಮನವಿ ಸಲ್ಲಿಸಿ, 15 ದಿನ ಗತಿಸಿದರೂ, ಇದುವರೆಗೂ ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಜನ ಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಶಾಸಕರು, ಸಂಸದರು ವಿಫಲರಾಗಿದ್ದಾರೆ. ನಗರಾದ್ಯಂತ ಹದಗೆಟ್ಟಿರುವ ರಸ್ತೆ ದುರಸ್ತಿಗೊಳಿಸುವಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಗರಸಭೆಗೆ ಇತ್ತೀಚಿಗೆ ಬಿಜೆಪಿ ನಿಯೋಗ ಭೇಟಿ ನೀಡಿ, ನಿರಂತರ ಕುಡಿವ ನೀರು, ರಸ್ತೆ ದುರಸ್ತಿ ಹಾಗೂ 10 ಸಾವಿರ ಜನರಿಗೆ ಹಕ್ಕುಪತ್ರ ನೀಡುವಂತೆ ಪ್ರಭಾರಿ ಅಧ್ಯಕ್ಷರಾದ ಜಯಣ್ಣ ರವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ನಿನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿ ಯಾವುದೇ ಅಜೆಂಡ ಸಿದ್ಧಪಡಿಸದಿರುವುದು ಖಂಡನೀಯ.
ನಗರಸಭೆ ಶುದ್ಧ ಕುಡಿವ ನೀರು, ರಸ್ತೆ, ವಿದ್ಯುತ್ ದೀಪ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಸಂಪೂರ್ಣ ನಿಷ್ಕಾಳಜಿ ವಹಿಸಿದೆ. ನಗರದಲ್ಲಿ ಧೂಳು ಆವರಿಸಿರುವುದರಿಂದ ವಾಹನ ಸವಾರರು ತಮ್ಮ ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ಧೂಳುನಿಂದ ವಿವಿಧ ರೋಗ ರುಜುನುಗಳಿಗೆ ಬಲಿಯಾಗುತ್ತಿದ್ದರೂ, ಧೂಳು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ.
ತೀನ್ ಖಂದೀಲ್ ವೃತ್ತದಿಂದ ತರಕಾರಿ ಮಾರುಕಟ್ಟೆಗೆ ತೆರಳುವ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದರೂ, ದುರಸ್ತಿಗೆ ನಗರಸಭೆ ಕಾಳಜಿ ವಹಿಸುತ್ತಿಲ್ಲ. ನಗರದ ಅಭಿವೃದ್ಧಿಗೆ ಸಂಬಂಧಿಸಿ 1 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿದರೂ, ಕಾಮಗಾರಿಗೆ ಚಾಲನೆ ನೀಡುತ್ತಿಲ್ಲ. ನಿನ್ನೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕಾಗಿತ್ತು.
ಆದರೆ, ಅನವಶ್ಯಕ ವಿಷಯಗಳ ಬಗ್ಗೆ ಚರ್ಚಿಸಿ ಸಭೆಗೆ ಅಗೌರವ ಸೂಚಿಸಿರುವುದು ತರಹವಲ್ಲ. ದಿ.8 ರಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಬಿಜೆಪಿ ನಿಯೋಗ ಭೇಟಿ ಮಾಡಿ, ಹದಗೆಟ್ಟ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದರಿಂದ ತಕ್ಷಣವೇ ಸ್ಪಂದಿಸಿ ಚಂದ್ರಕಾಂತ್ ರಸ್ತೆ, ಗದ್ವಾಲ್ ರಸ್ತೆಯ ತಗ್ಗು ಗುಂಡಿಗಳ ದುರಸ್ತಿಗೆ ಮುಂದಾಗಿದ್ದಾರೆ. ನಗರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು ಚುನಾಯಿತ ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ. ಆದರೆ, ಚುನಾವಣಾ ಸಂದರ್ಭದಲ್ಲಿ ಜನತೆಗೆ ನೀಡಿದ ವಾಗ್ದಾನ ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಆರೋಪಿಸಿದರು.
ಅಶೋಕ ಗಸ್ತಿ ಮಾತನಾಡಿ, ದಿ.22 ರಂದು ಬಿಜೆಪಿ ಪಕ್ಷದಿಂದ ಕರೆ ನೀಡಿರುವ ರಾಯಚೂರು ಬಂದ್‌ಗೆ ವಿವಿಧ ಸಂಘಟನೆಗಳ ಮುಖಂ‌ಡರ ಬೆಂಬಲ ಕೋರಲಾಗುವುದು. ಅಲ್ಲದೇ ಸಾರ್ವಜನಿಕರು, ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ನಗರಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ಯು.ದೊಡ್ಡ ಮಲ್ಲೇಶಪ್ಪ, ರಾಜಕುಮಾರ, ಕಡಗೋಳ ಆಂಜನೇಯ್ಯ, ರವೀಂದ್ರ ಜಲ್ದಾರ್, ಆರ್.ಕೆ. ಅಮರೇಶ, ರಮಾನಂದ ಯಾದವ್, ಬಸವರಾಜ ಕಳಸ, ಗುಡ್ಸಿ ನರಸರೆಡ್ಡಿ, ಟಿ.ಮಲ್ಲೇಶ, ಆರ್.ಮಲ್ಲೇಶ ನಾಯಕ, ಚಂದ್ರಶೇಖರ, ಹನುಮಂತು ಉಪಸ್ಥಿತರಿದ್ದರು.

Leave a Comment