ಹಣ ಸುಲಿಯುವ ಪಂಚತಾರಾ ಆಸ್ಪತ್ರೆಗಳು : ಸಚಿವ ಬೇಗ್ ಕಿಡಿ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಏ. ೨೧- ಖಾಸಗಿ ಆಸ್ಪತ್ರೆಗಳು ಬಡವರ ಹಣ ಸುಲಿಗೆ ಮಾಡುವ ಫೈಸ್ಟಾರ್ ಆಸ್ಪತ್ರೆಗಳಾಗಿ ಬದಲಾಗಿವೆ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಬೇಸರ ವ್ಯಕ್ತಪಡಿಸಿದರು.

ನಗರದ ಪಂಚತಾರಾ ಹೊಟೇಲ್‌ನಲ್ಲಿಂದು ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಆಯೋಜಿಸಿದ್ದ ಸ್ಥಳೀಯ ಹಾಗೂ ನಗರ ಸಂಸ್ಥೆಗಳ ಪ್ರತಿನಿಧಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈಟೆಕ್ ಆಸ್ಪತ್ರೆಗಳು ಬಡವರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಾಗಬೇಕು. ಆದರೆ ಈ ಆಸ್ಪತ್ರೆಗಳ ವೈದ್ಯರು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದೇಶದಲ್ಲಿ ಡ್ರಗ್ ಮಾಫಿಯಾ ದೊಡ್ಡದಾಗಿದೆ. ಡ್ರಗ್ ಮಾಫಿಯಾ ಬಡವರನ್ನು ಕಿತ್ತು ತಿನ್ನುತ್ತಿದೆ ಎಂದು ಅವರು ದೂರಿದರು. ಬಡವರ ಮೇಲೆ ಕ್ಲೀನಿಕಲ್ ಟ್ರಯಲ್ ಮಾಡಲಾಗುತ್ತಿದೆ. ಅದು ನಿಲ್ಲಬೇಕು. ಬೇಕಾದರೆ ಐಎ‌ಎಸ್, ಐಪಿಎಸ್ ಸಚಿವರು, ಶಾಸಕರ ಮೇಲೆ ಕ್ಲೀನಿಕಲ್ ಟ್ರಯಲ್ ಆಗಲಿ ಎಂದು ಅವರು ಹೇಳಿದರು.

ಬಡವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಹಬೇಕಾದ ಆಸ್ಪತ್ರೆಗಳು ಹಣ ಮಾ‌ಡುವುದನ್ನೇ ದಂಧೆ ಮಾಡಿಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ರಾಜೇಶ್ವರ ರಾವ್ ಅವರು, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಶೇ. 50 ರಷ್ಟು ಹಣವನ್ನು ಬೆಂಗಳೂರಿಗೆ ಮೀಸಲಿಡಲಾಗಿದೆ. ಜನರ ಆರೋಗ್ಯ ಕಾಪಾಡಲು ಹೆಚ್ಚಿನ ಹಣ ಒದಗಿಸಿರುವುದಾಗಿ ಹೇಳಿದರು.

ಈ ಅಭಿಯಾನದಡಿ ಶೇ. 50 ರಷ್ಟು ಉಳಿದ ಹಣವನ್ನು ಇತರ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗುವುದು ಎಂದವರು ಹೇಳಿದರು. ಈ ಯೋಜನೆಯ ವ್ಯಾಪ್ತಿಗೆ ಇದುವರೆಗೂ 77 ನಗರ ಪಟ್ಟಣಗಳನ್ನು ತರಲಾಗಿದೆ. ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ರಾಷ್ಟ್ರೀಯ ಆರೋಗ್ಯ ಮಿಷನ್‌ನ ಆಯುಕ್ತ ಸುಬೋದ್ ಯಾದವ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂ‌ಡಿದ್ದರು.

Leave a Comment