ಹಣ ಪಾವತಿಯಲ್ಲಿ ವಂಚನೆ : ಏಕಾಂಗಿ ಪ್ರತಿಭಟನೆ

ತಿ.ನರಸೀಪುರ. ಜು.16- ಕಳೆದ 2018 ರ ವಿಧಾನಸಭಾ ಚುನಾವಣೆಯ ಚಿತ್ರೀಕರಣ ವೆಚ್ಚದ ಹಣ ಪಾವತಿಯಲ್ಲಿನ ವಂಚನೆ ಖಂಡಿಸಿ, ಬಾಕಿ ಹಣವನ್ನು ಪಾವತಿ ಮಾಡುವಂತೆ ಆಗ್ರಹಿಸಿ ಮೈಸೂರಿನ ವಿಡಿಯೋ ಗ್ರಾಫರ್ ಒಬ್ಬರು ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಏಕಾಂಗಿಯಾಗಿ ಪ್ರತಿಭಟನಾ ಧರಣಿ ಕುಳಿತಿದ್ದಾರೆ.
ಪಟ್ಟಣದ ತಾಲ್ಲೂಕು ಕಛೇರಿ ಮಿನಿ ವಿಧಾನಸೌದದ ಮುಂಭಾಗ ಗಾಂಧಿ ಭಾವಚಿತ್ರ ಹಾಗೂ ಕ್ಯಾಮರಾದೊಂದಿಗೆ ನಿನ್ನೇಯಿಂದಲೇ ಪ್ರತಿಭಟನಾ ಧರಣಿಯನ್ನು ಆರಂಭಿಸಿರುವ ಮೈಸೂರು ಕುವೆಂಪು ನಗರದ ನಿವಾಸಿಯಾದ ವಿಡಿಯೋ ಗ್ರಾಫರ್ ಎಸ್.ಪಿ.ಕಲ್ಯಾಣಸುಂದರ್ ಅವರು ಚುನಾವಣಾ ಕರ್ತವ್ಯವನ್ನು ನ್ಯಾಯಯುತವಾಗಿ ನಿರ್ವಹಣೆ ಮಾಡಿದ್ದರೂ ವೆಚ್ಚದ ಬಿಲ್ ಹಣ ಪಾವತಿಯಲ್ಲಿ ತಾಲ್ಲೂಕು ಕಛೇರಿ ಅಧಿಕಾರಿಗಳು ಮಾಡಿರುವ ವಂಚನೆಯನ್ನು ಸರಿಪಡಿಸಿ, ಬಾಕಿ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿ ಓಬ್ಬೊಂಟಿಯಾಗಿ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.
ವಿಡಿಯೋ ಗ್ರಾಫರ್ ಎಸ್.ಪಿ.ಕಲ್ಯಾಣಸುಂದರ್ ಮಾತನಾಡಿ, ಕಳೆದ ೨೦೧೮ರ ಮೇ.೧೨ ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ೨೫ ದಿನಗಳ ಕಾಲ ವಿಡಿಯೋ ಚಿತ್ರೀಕರಣವನ್ನು ೧೬ ಮಂದಿಯಿಂದ ಮಾಡಿಸಿ ತಾಲ್ಲೂಕು ಆಡಳಿತಕ್ಕೆ ಕೊಟ್ಟಿದ್ದೇನೆ. ೧೩ ದಿನಗಳಿಗೆ ಮಾತ್ರ ಬಿಲ್ ಹಣ ಪಾವತಿ ಮಾಡಿಕೊಟ್ಟ ತಾಲ್ಲೂಕು ಕಛೇರಿ ಅಧಿಕಾರಿಗಳು ಇನ್ನುಳಿದ ೧೨ ದಿನಗಳಿಗೆ ಬೆರೆಯವರ ಹೆಸರಿಗೆ ಬಿಲ್ ಮಾಡಿ ಮೋಸ ಮಾಡಿದ್ದಾರೆ. ಈ ಸಂಬಂಧ ತಹಶಿಲ್ದಾರರಿಗೂ ದೂರು ನೀಡಿದ್ದೇನೆ. ಕೆಲಸ ಮಾಡಿದ ಹುಡುಗರ ನನಗೆ ದುಡಿಮೆಯ ಹಣ ನೀಡುವಂತೆ ಹಿಂಸೆಯನ್ನು ನೀಡುತ್ತಿದ್ದಾರೆ. ಆದ್ದರಿಂದ ತಾಲ್ಲೂಕು ಆಡಳಿತ ಆಗಿರುವ ಮೋಸ ಸರಿಪಡಿಸಿ ಬಾಕಿ ಹಣ ನೀಡುವವರೆವಿಗೂ ಪ್ರತಿಭಟನಾ ಧರಣಿ ನಡೆಸುತ್ತೇನೆ ಎಂದು ತಿಳಿಸಿದರು.
ಕ್ಯಾರೆ ಅನ್ನದ ಅಧಿಕಾರಿಗಳು: ಚುನಾವಣೆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಟ್ಟು ವೆಚ್ಚದ ಹಣವನ್ನು ನೀಡದೆ ವಂಚನೆ ಮಾಡಿರುವುದನ್ನು ಖಂಡಿಸಿ ಬಾಕಿ ಹಣಕ್ಕಾಗಿ ಸೋಮವಾರದಿಂದ ಧರಣಿ ಕುಳಿತಿದ್ದರೂ ತಹಶಿಲ್ದಾರರು ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಕ್ಯಾರೆ ಅನ್ನುತ್ತಿಲ್ಲ. ನನ್ನ ಅಹವಾಲನ್ನು ಸ್ವೀಕರಿಸಿಲ್ಲ. ದುಡಿಮೆಯ ಹಣ ಕೈ ಸೇರುವವರೆವಿಗೂ ಧರಣಿಯಿಂದ ಕದಲುವುದಿಲ್ಲವೆಂದು ಎಸ್.ಪಿ.ಕಲ್ಯಾಣಸುಂದರ ಎಚ್ಚರಿಸಿದ್ದಾರೆ.

Leave a Comment