ಹಣಬಲ, ತೋಳ್ಬಲದ ರಾಜಕಾರಣ ಬಿಜೆಪಿ ಸಂಸ್ಕೃತಿಯಲ್ಲ

ದಾವಣಗೆರೆ.ಏ.15; ಹಣಬಲ, ತೋಳ್ಬಲದ ರಾಜಕಾರಣ ಯಾವಾಗಲೂ ಕಾಂಗ್ರೆಸ್ ನವರು ಮಾಡುವ ರಾಜಕಾರಣ. ಬಿಜೆಪಿಯವರು ಜನರ ಪ್ರೀತಿ ಮತ್ತು ವಿಶ್ವಾಸದಿಂದ ರಾಜಕಾರಣದಲ್ಲಿದ್ದೇವೆ ಆದ್ದರಿಂದಲೇ ಮತದಾರರು ಸತತವಾಗಿ ನಮ್ಮನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ ಎಂದು ಬಿಜೆಪಿ ಮುಖಂಡ ರಾಜನಹಳ್ಳಿ ಶಿವಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಜನತೆ ಯಾವಾಗಲೂ ನಮ್ಮ ಜೊತೆಗಿದ್ದಾರೆಂದು ಹೇಳುತ್ತಿಲ್ಲ ಬದಲಿಗೆ ನಾವು ಜನರೊಂದಿಗೆ ಇದ್ದೇವೆ ಎನ್ನುವವರು. ಕಾಂಗ್ರೆಸ್ ನವರು ಅಷ್ಟೊಂದು ಅಭಿವೃದ್ದಿ ಕೆಲಸ ಮಾಡಿದ್ದರೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾಕೆ ಸೋಲುಕಂಡರು.ಜಿ.ಎಂ ಸಿದ್ದೇಶ್ವರ್ ಅವರು ನಗರದಲ್ಲಿ ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ಜನರಿಗೆ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ಇಂತಹ ಸುಳ್ಳು ಹೇಳಿಕೆಗಳನ್ನು ನಿಲ್ಲಿಸಬೇಕು.ಕೇಂದ್ರ ಸರ್ಕಾರದಿಂದ ಸಂಸದರು ಸಾಕಷ್ಟು ಅನುದಾನ ತಂದು ಸ್ಮಾರ್ಟ್ ಸಿಟಿ ಸೇರಿದಂತೆ ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಮತದಾರರ ಮನಸ್ಸು ಗೆಲ್ಲಲು ಅಭಿವೃದ್ದಿಯೊಂದೆ ಮಾನದಂಡವಲ್ಲ ಜನರ ಒಡನಾಟ, ಸಂಸ್ಕೃತಿ, ಆಚಾರ-ವಿಚಾರ ನಡವಳಿಕೆಯೂ ಕೂಡ ಕಾರಣವಾಗುತ್ತದೆ. ಯಾರು ಅಭಿವೃದ್ದಿ ಮಾಡಿದ್ದಾರೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ. ಅದರ ಬಗ್ಗೆ ಜನರೇ ತೀರ್ಪು ನೀಡಲಿದ್ದಾರೆ. ಆಶ್ರಯ ಮನೆಗಳನ್ನು ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ ಆದರೆ ಆ ಮನೆಗಳು ಕಾಂಗ್ರೆಸ್ ಮುಖಂಡರ ಪಾಲಾಗಿವೆ. ಹತ್ತರಿಂದ ಇಪ್ಪತ್ತು ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಆದರೆ ಬಡವರಿಗೆ ಮನೆಗಳು ದೊರೆತಿಲ್ಲ. ಅಲ್ಲದೇ ಸರಿಯಾದ ರಸ್ತೆ, ಒಳಚರಂಡಿ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆಯ ಆಗರವಾಗಿದೆ. ನಗರದಲ್ಲಿ ನಡೆಯುತ್ತಿರುವ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ತಮ್ಮದೆಂದು ಹೇಳುವ ಕಾಂಗ್ರೆಸ್ ನವರು ಆ ಕಾಮಗಾರಿ ಯಾರ ಅನುದಾನದಲ್ಲಿ ನಡೆಯುತ್ತಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ಜಲಸಿರಿ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಅಮೃತ್ ಸಿಟಿ ಯೋಜನೆಯಡಿ 175 ಕೋಟಿ ಅನುದಾನ ಬಂದಿದೆ. ಇದೆಲ್ಲವೂ ಸಂಸದರ ಕೊಡುಗೆ ಎಂಬುದನ್ನು ಮರೆಯಬಾರದು ಎಂದರು.
ಸುದ್ದಿಗೋಷ್ಠಿಯಲಿ ್ಲಬಿ.ಎಂ ಸತೀಶ್,ಡಿ.ಕುಮಾರ್,ರಾಜಶೇಖರ್, ಅಂಬರೀಷ್, ಆನಂದ್,ಧನರಾಜ್, ಧನುಷ್ ರೆಡ್ಡಿ, ಗುರುರಾಜ್ ಇದ್ದರು.
ಕಾಂಗ್ರೆಸ್ ಅಭ್ಯರ್ಥಿ ಹರಕೆಯ ಕುರಿ
ಬಿಜೆಪಿ ಗೆದ್ದರೂ ಪರವಾಗಿಲ್ಲ ಆದರೆ ಕಾಂಗ್ರೆಸ್ ನಲ್ಲಿರುವವರಿಗೆ ಮಾತ್ರ ಟಿಕೇಟ್ ಸಿಗಬಾರದು ಎಂಬ ಭಾವನೆ ಜಿಲ್ಲೆಯ ವರಿಷ್ಠರಿಗಿದೆ. ಮೈತ್ರಿ ಅಭ್ಯರ್ಥಿ ಮಂಜಪ್ಪಗೆ ಟಿಕೇಟ್ ನೀಡುವುದಾಗಿದ್ದರೆ 2ತಿಂಗಳ ಹಿಂದೆಯೇ ಘೋಷಿಸ ಬಹುದಾಗಿತ್ತು. ತಂದೆ-ಮಗ ನಿಲ್ಲುತ್ತೇವೆ ಎಂದು ಗೊಂದಲ ಸೃಷ್ಠಿಸಿ ಕೊನೆ ಗಳಿಗೆಯಲ್ಲಿ ಮಂಜಪ್ಪ ಅವರನ್ನು ನಿಲ್ಲಿಸಿ ಹರಕೆಯ ಕುರಿ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಮಲ್ಲಿಕಾರ್ಜುನಪ್ಪ ಅವರನ್ನು 2 ಬಾರಿ ಹಾಗೂ ಜಿ.ಎಂ ಸಿದ್ದೇಶ್ವರ್ ಅವರನ್ನು 3 ಬಾರಿ ಜಿಲ್ಲೆಯ ಜನರು ಆಯ್ಕೆ ಮಾಡಿದ್ದಾರೆ.ಮತದಾರರು ಈ ಬಾರಿಯೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ.
– ರಾಜನಹಳ್ಳಿ ಶಿವಕುಮಾರ್

Leave a Comment