ಹಣದ ಕೊರತೆ ನಿವಾರಣೆ-ಜೇಟ್ಲಿ ವಿಶ್ವಾಸ

ನವದೆಹಲಿ, ಫೆ. ೧೭- ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ. 86ರಷ್ಟು ನೋಟುಗಳನ್ನು ಅಮಾನ್ಯ ಮಾಡಿದ ಕೆಲವೇ ವಾರಗಳ ನಂತರ ಮಾರುಕಟ್ಟೆಯಲ್ಲಿ ನೋಟಿನ ಕೊರತೆ ಇಲ್ಲವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಆರ್‌ಬಿಐ ಮುದ್ರಣಾಲಯಗಳು ಮತ್ತು ಭಾರತದ ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್‌ಗಳು ಬಿಡುವಿಲ್ಲದಂತೆ ಕೆಲಸ ಮಾಡಿ ಹೊಸ ನೋಟುಗಳನ್ನು ಮುದ್ರಿಸಿ ಒದಗಿಸಿವೆ ಎಂದರು.
ಭಾರತದ ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ (ಎಸ್‌ಪಿಎಂಸಿಐಎಲ್)ನ 11ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು `ಹಣ ರದ್ದಾದ ದಿನಗಳಲ್ಲಿ ಮಾಡಿದ ಅತ್ಯಂತ ಸುಲಭದ ಕೆಲಸವೆಂದರೆ ಬಾಯಿಗೆ ಬಂದಂತೆ ಮಾತಾಡಿ ಟೀಕಿಸಿದ್ದಷ್ಟೆ’ ಎಂದರು.
ಅತ್ಯಂತ ಕಠಿಣವಾದ ಕೆಲಸ ಅದನ್ನು ಜಾರಿಗೆ ತರುವುದಾಗಿತ್ತು. ಭ್ರಷ್ಟಾಚಾರ, ಕಪ್ಪುಹಣ ಮತ್ತು ನಕಲಿ ನೋಟುಗಳ ಬುಡಕ್ಕೆ ಕೊಡಲಿ ಏಟು ಕೊಡುವ ಕಾರ್ಯಾಚರಣೆಗಳಲ್ಲಿ ಇದು ಬಹುಶಃ ಜಗತ್ತಿನಲ್ಲೇ ಅತಿ ದೊಡ್ಡದು ಎಂದರು.
ಪರಿಸ್ಥಿತಿ ಮಾಮೂಲಿಗೆ ಬರಲು ಕನಿಷ್ಠಪಕ್ಷ 7 ತಿಂಗಳು ಅಥವಾ ಒಂದು ವರ್ಷ ಬೇಕಾಗಬಹುದು ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಆದರೆ ಕೆಲವೇ ವಾರಗಳಲ್ಲಿ ಪರಿಸ್ಥಿತಿ ಎಂದಿನಂತಾಗಿದೆ ಎಂದರು.
ಒಂದೇ ಒಂದು ಅಹಿತಕರ ಘಟನೆಯೂ ನಡೆಯದೆ ಇದನ್ನು ಸಾಧಿಸಿದ್ದೇವೆ. ಇದಕ್ಕೆ ಮೂಲ ಕಾರಣ ಆರ್‌ಬಿಐ ಮತ್ತು ಎಸ್‌ಪಿಎಂಸಿಐಎಲ್. ಅವರ ಪೂರೈಕೆಯ ಸರಪಳಿ ನಿಲ್ಲದಂತೆ ನೋಡಿಕೊಂಡರು ಎಂದೂ ಜೇಟ್ಲಿ ಹೇಳಿದರು.

Leave a Comment