ಹಣದಾಸೆಗೆ ವೃದ್ಧನ ಹತ್ಯೆ

ಆರೋಪಿ ನ್ಯಾ. ವಶಕ್ಕೆ
ಸುಳ್ಯ, ಸೆ.೧೪- ಕಳೆದ ತಿಂಗಳು ನಡೆದ ಪಂಬೆತ್ತಾಡಿ ನಿವಾಸಿ ಸುಬ್ರಹ್ಮಣ್ಯ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸುಳ್ಯ ತಾಲೂಕಿನ ಕೊಡೆಯಾಲ ಗ್ರಾಮದ ಕಲ್ಪಡ ನಿವಾಸಿ ಆಶಿತ್(೧೯) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಅಡಿಕೆ ಸುಲಿಯುತ್ತಿದ್ದ. ಕೊಲೆಯಾದ ಸುಬ್ರಹ್ಮಣ್ಯ ಭಟ್(೫೮) ಒಬ್ಬಂಟಿಗರಾಗಿ ಕೃಷಿ ಮೂಲದಿಂದ ಬಂದ ಆದಾಯದಲ್ಲಿನ ಹಣದಲ್ಲಿ ವ್ಯವಹಾರ ಮಾಡುತ್ತಾ ಪಂಬೆತ್ತಾಡಿ ಗ್ರಾಮದಲ್ಲಿನ ತನ್ನ ನಿವಾಸದಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಕಳೆದ ಸೆ.೭ರಂದು ರಾಮಚಂದ್ರ ಕಲ್ಚಾರು ಎಂಬುವವರು ಸುಬ್ರಹ್ಮಣ್ಯ ಭಟ್ ಸೋದರರಿಗೆ ದೂರವಾಣಿ ಕರೆ ಮಾಡಿ ನಿಮ್ಮ ಸಹೋದರ ಸುಮಾರು ೧೦ ದಿನಗಳಿಂದ ಕಾಣುತ್ತಿಲ್ಲವೆಂದು ತಿಳಿಸಿದರು. ನಂತರ ಮನೆಯ ಬಳಿ ಹೋಗಿ ನೋಡುವಂತೆ ತಿಳಿಸಿದ್ದು ನಂತರ ಅವರು ಮನೆಯ ಪರಿಸರಕ್ಕೆ ಹೋದಾಗ ದುರ್ವಾಸನೆ ಬರುತ್ತಿದ್ದು ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ನೋಡುವಾಗ ಸುಬ್ರಹ್ಮಣ್ಯರನ್ನು ಕೊಲೆಮಾಡಿ ರೂಮಿನೊಳಗೆ ಹಾಕಿದ್ದು, ಹೆಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಳ್ಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.
ಕೊಲೆ ಕೃತ್ಯ ನಡೆದ ಸ್ವಲ್ಪ ದಿನದ ಹಿಂದೆ ಸುಬ್ರಹ್ಮಣ್ಯ ಭಟ್ ಮನೆಗೆ ಅಡಿಕೆ ಸುಳಿಯಲು ಆಶಿತ್, ವಸಂತ ಮತ್ತು ದೀಕ್ಷಿತ್ ಎಂಬವರು ಹೋಗಿದ್ದು,ಇದರಲ್ಲಿ ಸುಬ್ರಹ್ಮಣ್ಯ ಭಟ್‌ರೊಂದಿಗೆ ಆಶಿತ್ ಉತ್ತಮ ರೀತಿಯಲ್ಲಿ ಮಾತನಾಡಿ ವಿಶ್ವಾಸ ಗಳಿಸಿದ್ದ. ನಂತರ ಇದೇ ವಿಶ್ವಾಸದಿಂದ ಮೃತರು ಮನೆಯಲ್ಲಿ ಅಡಿಕೆ ತುಂಬಾ ಇದ್ದು ಅಡಿಕೆಯನ್ನು ಎಲ್ಲಿಯಾದರೂ ಮಾರಿ ಹಣ ನೀಡುವಂತೆ ತಿಳಿಸಿರುತ್ತಾರೆ ಎಂದು ಪೋಲೀಸರ ತನಿಖೆ ಸಂದರ್ಭ ತಿಳಿದು ಬಂದಿರುತ್ತದೆ. ಭಟ್ ಒಬ್ಬಂಟಿಯಾಗಿದ್ದು ಮನೆಯಲ್ಲಿ ಅಡಿಕೆ ಇದ್ದುದನ್ನು ಗಮನಿಸಿದ ಆರೋಪಿ ಆಶಿತ್ ಆ.೨೭ರ ರಾತ್ರಿ ಒಬ್ಬನೇ ಹೋಗಿ ಅಡಿಕೆ ಮಾರಾಟ ಮಾಡುವ ವಿಚಾರದ ಬಗ್ಗೆ ಮಾತನಾಡಿದ್ದು ಈ ವೇಳೆ ಅಡಿಕೆ ಸಂಗ್ರಹಿಸುವಾಗ ಹಿಂದಿನಿಂದ ಮರದ ತುಂಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ರೂಮಿಗೆ ಮೃತದೇಹವನ್ನು ಎಳೆದುಕೊಂಡು ಹೋಗಿ ಹಾಕಿ ಬೀಗ ಹಾಕಿ ನಂತರ ಮನೆಯ ಮುಂದಿನ ಬಾಗಿಲನ್ನು ಒಳಗಿನಿಂದ ಮುಚ್ಚಿ ಹಿಂದಿನ ಬಾಗಿಲಿಗೆ ಬೀಗ ಹಾಕಿ ಕೀಯನ್ನು ಅಲ್ಲೇ ಮನೆಯ ಹಿಂಬಾಗದಲ್ಲಿ ಇಟ್ಟು ವಾಪಸ್ ಬಂದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಮರುದಿನ ತನ್ನ ಸ್ನೇಹಿತರಾದ ವಸಂತ್, ದೀಕ್ಷಿತ್‌ರಲ್ಲಿ ಭಟ್ಟರು ಅಡಿಕೆ ಮಾರಿ ಹಣ ವಾಪಸ್ ನೀಡಲು ನನಗೆ ಒಪ್ಪಿಸಿದ್ದಾರೆ ಎಂದು ತಿಳಿಸಿ ಪುತ್ತೂರಿಗೆ ಹೋಗಿರುತ್ತಾರೆ ಎಂದು ಸುಳ್ಳು ಹೇಳಿ ಪೋನಿನಲ್ಲಿ ಭಟ್ಟರ ಜೊತೆ ಮಾತನಾಡುವಂತೆ ನಟಿಸಿ ಅವರನ್ನು ನಂಬಿಸಿ ಅಡಿಕೆ ಖರೀದಿ ಮಾಡಲು ಒಬ್ಬ ವ್ಯಾಪಾರಿಯನ್ನು ಖಾತ್ರಿ ಮಾಡಿ, ಅವರ ಮೂಲಕ ಪಿಕಪ್ ವಾಹನವನ್ನು ತೆಗೆದುಕೊಂಡು ಹೋಗಿ ಮೃತನ ಮನೆಯಲ್ಲಿ ಕೊಲೆ ಮಾಡಿರುವ ಬಗ್ಗೆ ಸ್ನೇಹಿತರಿಗೆ, ಅಡಿಕೆ ಖರೀದಿ ಮಾಡುವವರಿಗೆ, ಪಿಕಪ್ ಚಾಲಕನಿಗೆ ತಿಳಿಯದಂತೆ ಎಚ್ಚರಿಕೆ ವಹಿಸಿ ೧೨ ಕ್ವಿಂಟಾಲ್ ಅಡಿಕೆಯನ್ನು ತೆಗೆದುಕೊಂಡು ಹೋಗಿ ಮಾರಿದ್ದ ಎನ್ನಲಾಗಿದೆ. ಖಚಿತ ವರ್ತಮಾನದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Comment