ಹಚ್ಚಹಸಿರಿನ ವನ ರಾಶಿಗೆ ಮಂಜು ಚುಂಬನ : ಕಣ್ಮನ ಸೆಳೆಯುವ ಜಲಪಾತಗಳ ಬೋರ್ಗರೆತ

ದಟ್ಟಾರಣ್ಯದ ಮಧ್ಯದಲ್ಲೊಂದು ಜಲಪಾತ ಮೂಲಸೌಕರ್ಯ ಹಾಗೂ ಪ್ರವಾಸಿಗರಿಗೆ ಮಾಹಿತಿ ಇಲ್ಲದ ಕಾರಣ ನಿರ್ಲಕ್ಷ್ಯಕ್ಕೊಳಗಾಗಿದೆ. ಕೊಡಗು ಎಂದ ಕೂಡಲೇ ನೆನಪಾಗುವುದು ಹಚ್ಚ ಹಸಿರಿನ ವನರಾಶಿ. ಭೂಮಿಗೆ ಮುತ್ತಿಡುತ್ತಿರುವ ಮಂಜು ಸದಾ ನೀರಿನಿಂದ ಭೋರ್ಗರೆಯುವ ಜಲಪಾತಗಳು ಕಣ್ಮನ ಸೆಳೆಯುತ್ತಿದೆ.

ಜಲಪಾತ ಎಂದೊಡನೆ ಮಡಿಕೇರಿಯ ಅಬ್ಬಿಫಾಲ್ಸ್ ಹಾಗೂ ಸೋಮವಾರಪೇಟೆಯ ಮಲ್ಲಳ್ಳಿ ಫಾಲ್ಸ್ ನೆನಪಾಗುತ್ತದೆ. ಆದರೆ ಇದನ್ನು ಹೊರತುಪಡಿಸಿ ಕಾನನದ ಅಂಚಿನಲ್ಲಿರುವ ಜಲಪಾತವೊಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇದುವೇ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಣಚುಲು ಗ್ರಾಮದಲ್ಲಿರೋ ಒಣಚಲು ಜಲಪಾತ. ಆದರೆ ಪ್ರವಾಸೋದ್ಯಮದಿಂದ ದೂರ ಉಳಿದಿರುವ ಈ ಜಲಪಾತದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಜೊತೆಗೆ ಇಲ್ಲಿ ಮೂಲ ಸೌಕರ್ಯಗಳು ಕೂಡ ಇಲ್ಲದಿರುವುದು ಪ್ರವಾಸಿಗರಿಗೆ ಬೇಸರ ತರಿಸಿದೆ.

coorga

ಕೈ ಬೀಸಿ ಕರೆಯುತ್ತಿದೆ ಮಡಿಕೇರಿ ಮಂಜು :

ವರುಣ ದೇವನ ಆರ್ಭಟ ಸ್ವಲ್ಪ ಪ್ರಮಾಣದಲ್ಲಿ  ಕಡಿಮೆಯಾಗಿದ್ದು, ಕರ್ನಾಟಕದ ಕಾಶ್ಮೀರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಮಲೆನಾಡಿನ ವಾತಾವರಣವನ್ನು ಅನುಭವಿಸಬೇಕು ಎಂದು ಪ್ಲಾನ್ ಮಾಡುವರು ಮಡಿಕೇರಿ ಸುತ್ತಮುತ್ತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಇನ್ನು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಇಬ್ಬನಿಯ ಸಿಂಚನದಲ್ಲಿ ಮನಸೋಲುತ್ತಿದ್ದಾರೆ. ಟ್ರಾಫಿಕ್, ಧೂಳಿನ ನಡುವೆ ಇದ್ದವರು ಮನತಣಿಸುವ ತಂಪಾದ ಪರಿಸರಕ್ಕೆ ಮೂಕವಿಸ್ಮಿತರಾಗುತ್ತಿದ್ದಾರೆ.

ವೀಕೆಂಡ್‍ಗಳಲ್ಲಂತೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮಂಜಿನ ವೈಭವದಿಂದ ಭೂಲೋಕದಲ್ಲಿ ಸ್ವರ್ಗ ಸೃಷ್ಠಿಯಾದಂತೆ ಭಾಸವಾಗುತ್ತಿದೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ.

ಮಂಜಿನ ಕಣ್ಣಾಮುಚ್ಚಾಲೆ, ಮಳೆಯ ಅರ್ಭಟ, ಮೈಕೊರೆಯುವ ಚಳಿ, ಜೊತೆಗೆ ಅಬ್ಬರಿಸುವ ಗಾಳಿಗೆ ಕೂರ್ಗ್ ಸ್ಪೆಷಲ್ ಟೇಸ್ಟಿ ಕಾಫಿ ಹಿತ ಅನುಭವ ನೀಡುತ್ತಿದ್ದು ಟೂರಿಸ್ಟ್ ಗಳು ಇವೆಲ್ಲದಕ್ಕೆ ಮನಸೋಲ್ತಿದ್ದಾರೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ. ಗಿರಿಕಂದಕಗಳ ನಡುವೆ ಮಂಜಿನ ಥಕಧಿಮಿತ ನೋಡಲು 2 ಕಣ್ಣುಗಳು ಕೂಡ ಸಾಲುತ್ತಿಲ್ಲ. ಮಂಜಿನ ಸ್ಪರ್ಶ ಸವಿಯುತ್ತ ಎಂಜಾಯ್ ಮಾಡುವ ಪ್ರವಾಸಿಗರಿಗೆ ಕೊಡಗಿನಿಂದ ಹೋಗಲು ಮನಸೇ ಬರ್ತಿಲ್ಲ ಅಂತಾ ಹೇಳುತ್ತಿದ್ದಾರೆ.

ಈ ಜಲಪಾತ ಖಾಸಗಿ ಪ್ರದೇಶದಲ್ಲಿದೆ. ಹಾಗಾಗಿ ಈ ಜಲಪಾತಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವುದು ಇಲ್ಲ. ಸ್ಥಳೀಯರೊಂದಿಗೆ ಅಪರೂಪವಾಗಿ ಮಾತ್ರ ಕೆಲವು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಸಂಚಾರ ದುಸ್ತರ ಗಾಳಿ ಬೀಡುವಿನಿಂದ ಮುಂದೆ ಸಾಗುವ ಮಾರ್ಗದಲ್ಲಿ ಸಿಗುವ ಒಣಚಲು ಜಲಪಾತಕ್ಕೆ ತೆರಳಲು ಮೂಲ ಸೌಕರ್ಯಗಳಿಲ್ಲ. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಕಾಡಿನ ಮಧ್ಯೆ ಇರುವ ಮಾರ್ಗಗಳು ಸಂಪೂರ್ಣ ಕೆಸರುಮಯವಾಗಿದ್ದು, ಸಂಚಾರ ದುಸ್ತರವಾಗಿದೆ. ಈ ಪ್ರದೇಶ ಖಾಸಗಿ ವ್ಯಾಕ್ತಿಗೆ ಸೇರಿದುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬಂತಾಗಿದೆ.

ಅಬ್ಬಿಯನ್ನೇ ಹೋಲುತ್ತೆ ಒಣಚಲು:

ಎತ್ತರ ಪ್ರದೇಶದಿಂದ ಧುಮ್ಮಿಕ್ಕುವ ನೀರನ್ನು ಕಂಡೊಡನೆ ಅಬ್ಬಿಫಾಲ್ಸ್ ನ ಚೆಲುವು ಕಣ್ಣ ಮುಂದೆ ಬರುತ್ತದೆ. ಕ್ಷಣ ಕಾಲ ಅಬ್ಬಿಫಾಲ್ಸ್ ನ ಸೌಂದರ್ಯವನ್ನೇ ನೋಡುತ್ತಿದ್ದೇವೆ ಎಂದು ಅನಿಸಬಹುದು. ಆದರೆ ಇದು ಒಣಚಲು ಜಲಪಾತ. ಇದು ಸೌಂದರ್ಯದಲ್ಲಿ ಅಬ್ಬಿಫಾಲ್ಸ್ ಅನ್ನು ಕೊಂಚ ಮಟ್ಟಿಗೆ ಹೋಲುತ್ತದೆ. ಅಲ್ಲದೇ ಒಂದಲ್ಲ ಎರಡು ಜಲಪಾತ ಇದೆ. ಜಲಪಾತದ ಬಳಿ ತಲುಪುತ್ತಿದ್ದಂತೆಯೇ ನೀರಿನ ಸದ್ದು ಕಿವಿಗಪ್ಪಳಿಸುತ್ತದೆ. ಇದನ್ನೂ ಓದಿ: ನೂರಾರು ಅಡಿ ಎತ್ತರದಿಂದ ಬಳುಕೋ ಬಳ್ಳಿಯಂತೆ ಶ್ವೇತವರ್ಣೆಯಾಗಿ ಧುಮುಕುತ್ತಿದೆ ಜಲಕನ್ಯೆ ಮಲ್ಲಳ್ಳಿ ಜಲಪಾತ!

ತುಸು ಮುಂದೆ ಸಾಗಿದರೆ ನೀರಿನ ಸೌಂದರ್ಯ ಸವಿಯಲು ಸಾಧ್ಯ. ತುಸು ಸಮಯ ನೀರಿನಲ್ಲಿ ಕಳೆದು ಶ್ರಮ ವಹಿಸಿ ಬಂಡೆ ಹಾಗೂ ಕಲ್ಲಿನ ಮೂಲಕ ಮುಂದೆ ಸಾಗಿದರೆ ಮತ್ತೊಂದು ರಮಣೀಯ ಫಾಲ್ಸ್ ಕಣ್ಣ ಮುಂದೆ ಬರುತ್ತದೆ. ಮೇಲಿನಿಂದ ಹರಿಯುವ ನೀರಿನಿಂದಲೇ ಈ ಎರಡು ಜಲಪಾತಗಳು ಸೃಷ್ಟಿಯಾಗಿದ್ದು, ಇವುಗಳ ನಡುವೆ ಸಣ್ಣ ಪುಟ್ಟ ಝರಿಗಳು ಕಣ್ಮನ ಸೆಳೆಯುತ್ತದೆ.

ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಒಣಚಲುವಿನಲ್ಲಿ ಈ ನಯನ ಮನೋಹರ ಜಲಪಾತ ಇದೆ. ಮಡಿಕೇರಿಯಿಂದ ಗಾಳಿ ಬೀಡುವಿಗೆ 8 ಕಿ.ಮೀ. ಅಲ್ಲಿಂದ ಒಣಚಲುವಿಗೆ 12ಕ್ಕೂ ಹೆಚ್ಚು ಕಿ.ಮೀ. ಇದೆ. ಜಲಪಾತದಿಂದ ನೀರು ಹಾಲ್ನೊರೆಯಂತೆ ಕೆಳಗೆ ಹರಿಯುತ್ತಿದ್ದರೆ ಕೊಡಗಿನ ಯಾವ ಜಲಪಾತಗಳಿಗೂ ಒಣಚಲು ಕಡಿಮೆ ಇಲ್ಲ ಎಂದರೆ ಅತಿಶಯೋಕ್ತಿ ಅಲ್ಲ.

ಒಟ್ಟಿನಲ್ಲಿ ಒಣಚಲು ಜಲಪಾತ ಖಾಸಗಿ ಪ್ರದೇಶದಲ್ಲಿರೋದ್ರಿಂದಾಗಿ ಹೆಚ್ಚಾಗಿ ಪ್ರವಾಸಿಗರಿಗೆ ಈ ಪ್ರದೇಶದ ಬಗ್ಗೆ ತಿಳಿದಿಲ್ಲ. ಕೊಡಗಿಗೆ ಮಳೆಗಾಲದಲ್ಲಿ ಭೇಟಿ ನೀಡಿದ್ರೆ ನೀವೂ ಒಮ್ಮೆ ಈ ಜಲಪಾತವನ್ನು ಕಣ್ತುಂಬಿಕೊಳ್ಳಿ.

Leave a Comment