ಹಕ್ಕುಪತ್ರ ನೀಡಲು ಆಗ್ರಹ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಆ. ೧- ಮಲ್ಲೇಶ್ವರಂ ವಿಧಾನಸಭಾ ವ್ಯಾಪ್ತಿಯ ಮತ್ತೀಕೆರೆ ವಾರ್ಡ್ ನಂಬರ್ 36ರ ಎಂ.ಆರ್. ಜಯರಾಮ್ ಕಾಲೋನಿಯ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ವಾರ್ಡ್ 36ರ ಜಯರಾಮ್ ಕಾಲೋನಿಯಲ್ಲಿ ಕಳೆದ 60 ವರ್ಷಗಳಿಂದಲೂ ಪರಿಶಿಷ್ಟಜಾತಿಗೆ ಸೇರಿದ ನಾವು ವಾಸಮಾಡುತ್ತಿದ್ದೇವೆ. ಜೀವನ ನಿರ್ವಹಣೆಗಾಗಿ ಕೂಲಿಕೆಲಸ ಅವಲಂಬಿಸಿದ್ದೇವೆ. ಈ ಜಾಗ ಹೊರತು ಪಡಿಸಿದರೆ ನಮಗೆ ಬೇರೆ ನಿವೇಶನವಾಗಲಿ, ವಸತಿ ಸೌಲಭ್ಯವಾಗಲಿ ಇಲ್ಲ ಎಂದು ನಿವಾಸಿಗಳ ಮುಖಂಡ ಜೆ.ವಿ. ಪ್ರಭು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1993ರ ಅಕ್ಟೋಬರ್ 29ರಂದು ಕೊಳಚೆ ನಿರ್ಮೂಲನಾ ಮಂಡಳಿ ಈ ಕಾಲೋನಿಗೆ ಪರಿಚಯ ಪತ್ರ ನೀಡಿದೆ. 2005ರಲ್ಲಿ ಸ್ವಾಧೀನ ಪ್ರಮಾಣಪತ್ರ ನೀಡಲಾಗಿದೆ. 1984ರ ಮೇ 31ರಂದು ಕೊಳಚೆ ನಿರ್ಮೂಲನಾ ಮಂಡಳಿ ಕೊಳಚೆ ಪ್ರದೇಶವೆಂದು ಘೋಷಣೆ ಮಾಡಿವೆ. ನಂತರ ಇಲ್ಲಿನ ನಿವಾಸಿಗಳಿಗೆ ವಿದ್ಯುತ್, ನೀರು, ಒಳಚರಂಡಿ, ಸಾಲಸೌಲಭ್ಯಗಳನ್ನು ಮಂಡಳಿಯಿಂದ ಒದಗಿಸಲಾಗಿದೆ ಎಂದರು.
1997ರ ಮೇ 19ರಂದು ಈ ಪ್ರದೇಶ ನಿವಾಸಿಗಳಿಂದ ನಿರ್ವಾಹಣಾ ಶುಲ್ಕವನ್ನು ಸಹ ಪಾವತಿಸಿಕೊಳ್ಳಲಾಗುತ್ತಿದೆ. ಇನ್ನುಳಿದಂತೆ ಈ ಮನೆಗಳ ನಿವಾಸಗಳ ಮೇಲೆ ಆಧಾರ್‌ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ಸಹ ಪಡೆದುಕೊಂಡಿದ್ದೇವೆ ಎಂದ ಅವರು, ಕೂಡಲೇ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಿ ಮನೆಯ ಮೇಲಿನ ನಮ್ಮ ಹಕ್ಕನ್ನು ಖಾತ್ರಿಪಡಿಸಬೇಕು ಎಂದು ಮನವಿ ಮಾಡಿದರು.
ಈ ಸಂಬಂಧ ನಗರಾಭಿವೃದ್ಧಿ ಸಚಿವರಿಗೂ ಜು. 26ರಂದು ಮನವಿ ಸಲ್ಲಿಸಲಾಗಿದೆ ಎಂದರು.

Leave a Comment