‘ಹಕ್ಕುಪತ್ರಗಳಿಗೆ ಆಗ್ರಹಿಸಿ ಓರ್ವಾಯಿ ಕ್ರಾಸ್ ನಿವಾಸಿಗಳಿಂದ ಧರಣಿ ಸತ್ಯಾಗ್ರಹ

ಬಳ್ಳಾರಿ, ಜೂ.19: ಬಳ್ಳಾರಿ ತಾಲ್ಲೂಕಿನ ಕುರುಗೋಡು ಹೋಬಳಿಯ, ಎಮ್ಮಿಗನೂರು ಗ್ರಾಮ ಪಂಚಾಯ್ತಿಯ ಓರ್ವಾಯಿ ಕ್ರಾಸ್ ನಲ್ಲಿ ಕಳೆದ ಎರಡು-ಮೂರು ದಶಕಗಳಿಂದಲೂ ವಾಸಿಸುತ್ತಿರುವ ಬಡಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡುವಂತೆ ಆಗ್ರಹಪಡಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಾಗರೀಕ ಹೋರಾಟ ಸಮಿತಿಯ ಸದಸ್ಯರು ಮತ್ತು ನಿವಾಸಿಗಳು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

ಓರ್ವಾಯಿ ಕ್ರಾಸ್ ನಲ್ಲಿ ಬರುವ ಸರ್ವೆ ನಂ. 474/3 ಮತ್ತು 474/4 ವಿಸ್ತೀರ್ಣ 1-94 ಸೆಂಟ್ಸ್ ಭೂಮಿಯಲ್ಲಿ ಸುಮಾರು 25-30 ವರ್ಷಗಳಿಂದಲೂ 53 ಕುಟುಂಬಗಳು ಗುಡಿಸಲುಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಆದೇಶದ ಅನ್ವಯ 2014ರ ಜೂನ್ 13ರಂದು ಕಲಂ 94ಸಿ, ಅಕ್ರಮ-ಸಕ್ರಮಕ್ಕಾಗಿ 53 ಕುಟುಂಬಗಳು ಅರ್ಜಿ ಸಲ್ಲಿಸಿದ್ದಾರೆ. ಹಾಗೂ ಎಮ್ಮಿಗನೂರು ಗ್ರಾಮ ಪಂಚಾಯ್ತಿ ವತಿಯಿಂದ 2012-13ರ ಸಾಲಿನಲ್ಲಿ ಬಸವ ವಸತಿ ಯೋಜನೆಯ ಅಡಿಯಲ್ಲಿ, ಇಲ್ಲಿನ ನಾಲ್ಕು ಜನ ನಿವಾಸಿಗಳಿಗೆ ಆಶ್ರಯ ಮನೆಗಳನ್ನು ಮಂಜೂರು ಮಾಡಲಾಗಿದೆ. ಈ ಮನೆಗಳಿಗೆ ನಲ್ಲಿ, ವಿದ್ಯುತ್ ಸಂಪರ್ಕ ಕೂಡಾ ಕಲ್ಪಿಸಲಾಗಿದೆ. ಅಲ್ಲದೇ ಇಲ್ಲಿನ ನಿವಾಸಿಗಳಿಗೆ ಪಡಿತರ ಚೀಟಿ, ಮತದಾರರ ಚೀಟಿ, ಆಧಾರ್ ಕಾರ್ಡುಗಳನ್ನು ಕೂಡಾ ನೀಡಲಾಗಿದ್ದು ಅವರಿಗೆ ಹಕ್ಕುಪತ್ರಗಳನ್ನು ನೀಡುವಂತೆ ಒತ್ತಾಯಿಸಲಾಗಿದೆ.

ಬಳ್ಳಾರಿ ಜಿಲ್ಲಾಧಿಕಾರಿ ಸೇರಿದಂತೆ, ಜಿಲ್ಲಾ ಪಂಚಾಯ್ತಿ ಸಿಇಓ, ಬಳ್ಳಾರಿ ಎಸಿ, ತಹಶೀಲ್ದಾರ್, ಕುರುಗೋಡು ತಹಶೀಲ್ದಾರರು ಮತ್ತಿತರರಿಗೆ ಕೂಡಾ ಅಕ್ರಮ-ಸಕ್ರಮ ಯೋಜನೆಯ ಅಡಿಯಲ್ಲಿ ಮನೆಕಟ್ಟಿಕೊಂಡಿರುವ (ಗುಡಿಸಲು) ವಾಸಿಗಳಿಗೆ ಕಲಂ 94 ಸಿ ಅಡಿ ಹಕ್ಕುಪತ್ರಗಳನ್ನು ನೀಡುವಂತೆ ಮನವಿ ಮಾಡಲಾಗಿದೆ.

ರಾಜ್ಯದ ಮುಖ್ಯಮಂತ್ರಿ ಕಂದಾಯ, ಗ್ರಾಮೀಣಾಭಿವೃದ್ಧಿ, ವಸತಿ ಸಚಿವರಿಗೆ, ಬಳ್ಳಾರಿ ಜಿಲ್ಲಾ ಮಂತ್ರಿಗಳಿಗೆ ಹಾಗೂ ವಿಧಾನ ಮಂಡಲದ ಉಭಯ ಸದನಗಳ ವಿರೋಧ ಪಕ್ಷಗಳ ನಾಯಕರಿಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಸಹ ಮನವಿ ಪತ್ರಗಳನ್ನು ಕಳುಹಿಸಿಕೊಡಲಾಗಿದೆ. ಅಕ್ರಮ-ಸಕ್ರಮ ಯೋಜನೆಯಡಿ ಮನೆಗಳಿಗೆ ಹಕ್ಕುಪತ್ರಗಳನ್ನು ಒದಗಿಸುವಂತೆ ವಿನಂತಿಸಿಕೊಂಡಿದ್ದೇವೆ. ಕಂಪ್ಲಿ ಶಾಸಕರಿಗೆ ಮನವಿ ಸಲ್ಲಿಸಿದಾಗ ಅವರೂ ಕೂಡಾ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದರೂ ಅಧಿಕಾರಿಗಳು ಬೇಡಿಕೆ ಈಡೇರಿಸಿಲ್ಲ, ಸ್ಪಂದಿಸಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಿಳಿಸಿದೆ.

ಈಗ್ಗೆ ಮೂರು ವರ್ಷಗಳಿಂದಲೂ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಮನವಿ ಪತ್ರಗಳನ್ನು ಅನೇಕ ಬಾರಿ ಸಲ್ಲಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿರುವುದಿಲ್ಲ. ಆದುದರಿಂದ ರಾಜ್ಯ ಸರ್ಕಾರದ ಹಾಗೂ ಜಿಲ್ಲಾ ಅಧಿಕಾರಿಗಳ ಗಮನ ಸೆಳೆಯಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಕೆಪಿಆರ್ಎಸ್ ಹಾಗೂ ನಾಗರೀಕ ಹೋರಾಟ ಸಮಿತಿ ಸ್ಪಷ್ಟಪಡಿಸಿದೆ.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ ಹಾಗೂ ಗಾಳಿ ಬಸವರಾಜ್ ನೇತೃತ್ವದಲ್ಲಿ ನಡೆದಿರುವ ಅನಿದಿಷ್ಟ ಹೋರಾಟ, ಧರಣಿಯಲ್ಲಿ ತಾಲ್ಲೂಕು ಸಮಿತಿ ಧುರೀಣರುಗಳಾದ ಎನ್.ಸೋಮಪ್ಪ, ಎ.ಮಂಜುನಾಥ್, ಎನ್.ಹುಲೆಪ್ಪ, ಕೆ.ಶಿವಕುಮಾರ್, ಎನ್.ಆಂಜನೇಯ ಹಾಗೂ ನಾಗರೀಕ ಹೋರಾಟ ಸಮಿತಿಯ ಬುಡೇನ್ ಸಾಬ್, ವೆಂಕಟರೆಡ್ಡಿ, ಲಕ್ಷ್ಮಿನಾರಾಯಣ, ಕೃಷ್ಣಂರಾಜು, ನಾರಾಯಣಸ್ವಾಮಿ, ಪ್ರಹ್ಲಾದ್, ವಿ.ಮಾರೆಪ್ಪ, ದಾಸರ ಜಡೆಪ್ಪ, ಶ್ರೀನಿವಾಸರೆಡ್ಡಿ, ಕಾಳಪ್ಪ, ಗೊಲ್ಲರ ಜಡೆಪ್ಪ, ರಾಮಾಂಜಿನಿ, ಡಾಬಾ ವೀರೇಶಿ, ಬಾಲಕೃಷ್ಣರಾಜು, ಶಿವಪ್ಪ ಹಾಗೂ ಮಹಿಳೆಯರೂ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದಾರೆ.

 

Leave a Comment