ಹಕ್ಕಿಪಿಕ್ಕಿ ಜನರಿಗೆ ಜಮೀನು ಮಂಜೂರು

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಮಾ. ೨೦- ಹೇಮಾವತಿ ಜಲಾಶಯ ಯೋಜನೆಗೆ 98 ಗ್ರಾಮಗಳು ಮುಳುಗಡೆಯಾಗಿದ್ದು, ಇದುವರೆಗೂ 7427 ಮುಳುಗಡೆ ಸಂತ್ರಸ್ತರಿಗೆ 29,708 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನಸಭೆಯಲ್ಲಿಂದು ತಿಳಿಸಿದರು. ಸಕಲೇಶಪುರ ಶಾಸಕ ಜೆಡಿಎಸ್‌ನ ಹೆಚ್.ಕೆ. ಕುಮಾರಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಆಲೂರು ತಾಲ್ಲೂಕುಗಳಲ್ಲಿ ಹೇಮಾವತಿ ಯೋಜನೆಗಾಗಿ ಒಟ್ಟು 98 ಗ್ರಾಮಗಳು ಮುಳುಗಡೆಯಾಗಿವೆ ಎಂದರು.

ಮುಳುಗಡೆ ಸಂತ್ರಸ್ತರಿಗೆ ಸಕಲೇಶಪುರ ತಾಲ್ಲೂಕಿನಲ್ಲಿ 31,149 ಎಕರೆ ಹಾಗೂ ಆಲೂರು ತಾಲ್ಲೂಕಿನಲ್ಲಿ 19,199 ಎಕರೆ ಸೇರಿದಂತೆ ಒಟ್ಟು 50349 ಎಕರೆ ಸರ್ಕಾರಿ ಜಮೀನನ್ನು ಭೂಕಂದಾಯ ಕಾಯ್ದೆಯಡಿ ಕಾಯ್ದಿರಿಸಲಾಗಿದೆ. ಇದುವರೆವಿಗೆ 7427 ಜನ ಸಂತ್ರಸ್ತರಿಗೆ ಜಮೀನು ಮಂಜೂರು ಮಾಡಲಾಗಿದೆ ಎಂದರು.

ಉಳಿದವರಿಗೆ ಜಮೀನು ಮಂಜೂರು ಮಾಡುವಲ್ಲಿ ವಿಳಂಬವಾಗಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾರಣವಾಗಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ತಾವೇ ಖುದ್ದಾಗಿ ಆ ಭಾಗದ ಸಾರ್ವಜನಿಕರ ಸಭೆಯನ್ನು ನಡೆಸಿ ಪರಿಹಾರ ರೂಪಿಸಲಾಗುವುದು ಎಂದರು.

ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ತರಿಗೆ ಮೀಸಲಿಟ್ಟಿದ್ದ ಜಮೀನುಗಳಲ್ಲಿ ಕೆಲವರು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದರೆ ಸಂತ್ರಸ್ತರಲ್ಲದವರಿಗೆ ಭೂಮಿ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು.

ಅರ್ಹ ಫಲಾನುಭವಿಗಳಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಪರಿಹಾರವನ್ನು ನೀಡಲಾಗಿದೆ. ಇನ್ನೂ 2 ಸಾವಿರ ಅರ್ಜಿಗಳು ಬಾಕಿಯಿದ್ದು, ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಮನಗರ ತಾಲ್ಲೂಕು ಬಿಡದಿ ಹೋಬಳಿಯ ಬನ್ನಿಕುಪ್ಪೆ ಗ್ರಾಮದ 76 ಎಕರೆ ಜಮೀನನ್ನು 38 ಹಕ್ಕಿಪಿಕ್ಕಿ ಜನಾಂಗದ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದರು.

ಹಕ್ಕಿಪಿಕ್ಕಿ ಜನಾಂಗದವರಿಗೆ ಈಗಾಗಲೇ ಜಮೀನಿನ ಹಕ್ಕುಪತ್ರ ನೀಡಲಾಗಿದೆ. ಸಾಗುವಳಿ ಪತ್ರಗಳನ್ನು ಕೊಡಲು ತೊಂದರೆಯಿಲ್ಲ. ಇದಕ್ಕೆ ಅರಣ್ಯ ಇಲಾಖೆಯವರಿಂದ ಅಡ್ಡಿಯಿದ್ದರೆ ಅದನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ಅರಣ್ಯ ಇಲಾಖೆ ಅಧಿಕಾರಿಗಳ ತಲೆಯಲ್ಲಿ ನಮ್ಮದೇ ಸರ್ಕಾರ ಎಂಬ ಭಾವನೆ ತುಂಬಿಕೊಂಡಿದೆ. ನಾವು ಸರ್ಕಾರದ ಒಂದು ಭಾಗ ಎಂಬುದರ ಅರಿವಿಲ್ಲ. ಜಮೀನು ಮಂಜೂರಾತಿ ವಿಚಾರದಲ್ಲಿ ಅವರಿಗೆ ಸುಪ್ರೀಂ ಕೋರ್ಟ್ ತೀರ್ಪು ಮಾತ್ರ ಕಾಣುತ್ತದೆ. ಇದನ್ನು ಸದ್ಯದಲ್ಲೇ ಸರಿಪಡಿಸುತ್ತೇನೆ ಎಂದರು.

ಮಧ್ಯ ಪ್ರವೇಶಿಸಿದ ನಾಗಮಂಗಲ ಶಾಸಕ ಚಲುವರಾಯಸ್ವಾಮಿ, ಮುಖ್ಯಮಂತ್ರಿ ಹಾಗೂ ತಮ್ಮಿಂದ ಮಾತ್ರ ಅರಣ್ಯ ಅಧಿಕಾರಿಗಳ ಧೋರಣೆಯನ್ನು ಬದಲಿಸಬಹುದಾಗಿದೆ. ಈ ರೈತರಿಗೆ ಅಧಿಕಾರಿಗಳು ತುಂಬಾ ಹಿಂಸೆ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದ್ದಕ್ಕೆ ಸ್ಪಂದಿಸಿದ ಕಾಗೋಡು ತಿಮ್ಮಪ್ಪ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

 

Leave a Comment