ಹಕ್ಕಬುಕ್ಕರು ವಾಲ್ಮೀಕಿ ಸಮಾಜದವರು: ಮೃತ್ಯುಂಜಯ

ತುಮಕೂರು, ಜ. ೧೧- ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ ಸಂಸ್ಥಾಪಕರಾದ ಹಕ್ಕ-ಬುಕ್ಕರು ವಾಲ್ಮೀಕಿ ಸಮಾಜದ ಮೂಲ ಪುರುಷರು. ಅವರನ್ನು ಕುರುಬ ಜನಾಂಗಕ್ಕೆ ಸೇರಿದವರೆಂದು ಕೆಲವರು ವಿವಾದ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ವಾಲ್ಮೀಕಿ ಸಮಾಜದ ಮುಖಂಡ, ಕರ್ನಾಟಕ ಮಹಷ್ಮೀ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿದೇಶಕ ಕೆ.ಎನ್.ಮೃತ್ಯುಂಜಯ ತಿಳಿಸಿದರು.

ಕರ್ನಾಟಕ ಮದಕರಿ ನಾಯಕ ಸೇನೆ ವತಿಯಿಂದ ದೇವರಾಯನದುರ್ಗದ ಲಕ್ಷ್ಮಿನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ನಿರ್ಮಿಸಿದ್ದ ಹಕ್ಕಬುಕ್ಕ ವೇದಿಕೆಯಲ್ಲಿ ಕರೆಯಲಾಗಿದ್ದ ವಾಲ್ಮೀಕಿ ಸಮಾಜದ ಶೇ. 7.5ರ ಮೀಸಲಾತಿ ಹೋರಾಟದ ಬಗ್ಗೆ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವರು ವೃಥಾ ವಿವಾದ ಸೃಷ್ಟಿಸಲಿಕ್ಕಾಗಿ ಸಮಾಜದಲ್ಲಿನ ಒಗ್ಗಟ್ಟನ್ನು ಮುರಿಯಲಿಕ್ಕಾಗಿ ಹಕ್ಕಬುಕ್ಕರನ್ನು ‘ಕುರುಬ’ ಸಮಾಜದವರೆಂದು ಬಿಂಬಿಸಲು ಹೊರಟಿದ್ದಾರೆ. ಇಂದು ರಾಜ್ಯ ಸರ್ಕಾರ ನಮಗೆ ಎಲ್ಲಾ ಕ್ಷೇತ್ರಗಳಲ್ಲೂ ಕೇವಲ ಶೇ.3 ರಷ್ಟು ಮೀಸಲಾತಿ ನೀಡಿದ್ದು, ಸದರಿ ಮೀಸಲಾತಿಯಲ್ಲಿ ರಾಜಗೊಂಡ, ಕಾಡು ಕುರುಬ, ಜೇನು ಕುರುಬರು ಸೇರುವುದರಿಂದ ವಾಲ್ಮೀಕಿ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಹಕ್ಕ-ಬುಕ್ಕರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದ ನಿವೃತ್ತ ಬಂಧಿಖಾನೆ ಅಧೀಕ್ಷಕ ವೀರೇಂದ್ರಸಿಂಹ, ಪ್ರಸ್ತುತ ಕೇಂದ್ರದಲ್ಲಿ ವಾಲ್ಮೀಕಿ ಜನಾಂಗಕ್ಕೆ ಶೇ. 7.5 ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ನೀಡುತ್ತಿರುವ ಶೇ. 3 ರಷ್ಟು ಮೀಸಲಾತಿಯಿಂದ ಜನಾಂಗಕ್ಕೆ ಕಿಂಚಿತ್ತೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಳಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ರೂಪಿಸಲಾಗುತ್ತಿದ್ದು, ಜನಾಂಗದ ಸಮಸ್ತರು ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ದೇವರಾಜು, ಹೆಚ್.ಜಿ. ರಾಮಾಂಜಿನಯ್ಯ, ಶಿವಮ್ಮ ನಾಗರಾಜು, ದಾಸಪ್ಪ, ಡಾ. ಸಂಜಯ್‍ನಾಯ್ಕ, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Comment