ಹಂಪಿ: ಶರನ್ನವರಾತ್ರಿ ಉತ್ಸವಕ್ಕೆ ತೆರೆ

ಹೊಸಪೇಟೆ.ಅ.1 ಶರನ್ನವರಾತ್ರಿ ಅಂಗವಾಗಿ ಐತಿಹಾಸಿಕ ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ 9 ದಿನಗಳ ಕಾಲ ಜರುಗಿದ ನವರಾತ್ರಿ ಉತ್ಸವಕ್ಕೆ ಶನಿವಾರ ತೆರೆ ಬಿದ್ದಿತು.

ಹಂಪಿಯ ಶ್ರೀವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಶಂಕರ ಭಾರತಿ ಸ್ವಾಮಿಗಳ ಸಾನಿಧ್ಯದಲ್ಲಿ, ಐತಿಹಾಸಿಕ ಹಂಪಿಯ ಶ್ರೀವಿರೂಪಾಕ್ಷೇಶ್ವರ ಹಾಗೂ ಪಂಪಾಂಭಿಕೆ ದೇವಿಗೆ ನವರಾತ್ರಿ ಅಂಗವಾಗಿ ವಿಶೇಷ ಅಲಂಕಾರ, ಅಭಿಷೇಕ, ಕುಂಕುಮ ಆರ್ಚನೆ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳು 9 ದಿನಗಳ ಕಾಲ ಜರುಗಿದವು.

ನವರಾತ್ರಿ ಉತ್ಸವದ ಕೊನೆಯ ದಿನವಾದ ಶನಿವಾರ ಚಂಡಿಕಾ ಹೋಮ ನೆರವೇರಿಸಲಾಯಿತು. ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿ ಭುವನೇಶ್ವರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪಕ್ಕದಲ್ಲಿ ವಿಜಯನಗರ ಅರಸರ ಖಡ್ಗಗಳನ್ನು ಇರಿಸಿ, 5 ತಾಸುಗಳ ಕಾಲ ಚಂಡಿಕಾ ಹೋಮವನ್ನು ನಡೆಸಲಾಯಿತು. ನಂತರ ವಿದ್ಯಾರಣ್ಯ ಶಂಕರ ಭಾರತಿ ಸ್ವಾಮಿಗಳ ನೇತೃತ್ವದಲ್ಲಿ ಸಮೀಪದ ಬನ್ನಿ ವೃಕ್ಷದ ಬಳಿಗೆ ಮೆರವಣಿಗೆಯಲ್ಲಿ ತೆರಳಿ ವೃಕ್ಷಕ್ಕೆ ವಿದ್ಯಾರಣ್ಯ ಶಂಕರ ಭಾರತಿ ಸ್ವಾಮಿಗಳು ವಿಶೇಷ ಪೂಜೆ ಸಲ್ಲಿಸಿದರು.

ವಿಜಯನಗರ ಅರಸರ ಕಾಲದ ಖಡ್ಗಗಳಿಂದ ಶಮಿ ವೃಕ್ಷದ ಎಲೆಗಳನ್ನು ತುಂಡರಿಸಿ, ನೆರದ ಭಕ್ತರಿಗೆ ವಿತರಿಸಲಾಯಿತು. ನಂತರ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭ ಕೋರಿದರು.

Leave a Comment