ಹಂಪಿ ಉತ್ಸವ-2017 ಗೋಡೆ ಬರಹ ಚಿತ್ರಕಲಾ ಉತ್ಸವಕ್ಕೆ-ಡಿಸಿ. ಚಾಲನೆ

ಹೊಸಪೇಟೆ.ಅ.21 ಹಂಪಿ ಉತ್ಸವದ ಅಂಗವಾಗಿ ನಗರದಲ್ಲಿಂದು ಆಯೋಜಿಸಲಾಗಿದ್ದ ಗೋಡೆ ಬರಹ ಚಿತ್ರಕಲಾ ಉತ್ಸವಕ್ಕೆ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಚಾಲನೆ ನೀಡಿದರು.

ಸ್ಥಳೀಯ ಕ್ರೀಡಾಂಗಣದಲ್ಲಿ ಹಂಪಿ ಉತ್ಸವದ ಅಂಗವಾಗಿ ಹಂಪಿ ಸ್ಮಾರಕಗಳ ಚಿತ್ರಣ ಹಾಗೂ ಸ್ವಚ್ಛತಾ ಜಾಗೃತಿಯ ಚಿತ್ರ ಬಿಡಿಸುವ ಚಿತ್ರಕಲಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಂಪಿ ಉತ್ಸವದ ಹಿನ್ನಲೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಆಯೋಜಿಸಲಾಗಿದೆ. ಇದು 7 ದಿನಗಳ ಕಾಲ ನಡೆಯಲಿದೆ. ಈ ಸ್ವಚ್ಛತಾ ಅಭಿಯಾನಕ್ಕೆ ನಗರದ ನಾಗರೀಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು ಸಹಕರಿಸಬೇಕು ಎಂದರು. ಈ ಹಿಂದೆ ಹಂಪಿ ಉತ್ಸವದ ಹಿನ್ನಲೆಯಲ್ಲಿ ಹಂಪಿಯ ಸ್ಮಾರಕಗಳ ಚಿತ್ರಣವನ್ನು ಬಳ್ಳಾರಿಯ ಗೋಡೆಗಳ ಮೇಲೆ ಬಿಡಿಸಲಾಗಿದೆ. ಅದೇ ರೀತಿ ನಗರದ ಗೋಡೆಗಳ ಮೇಲೆ ಸಹ ಹಂಪಿಯ ಸ್ಮಾರಕಗಳು ಹಾಗೂ ಸ್ವಚ್ಛತೆಯನ್ನು ಸಾರುವ ಚಿತ್ರಗಳನ್ನು ಬಿಡಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಆನಂದ್ ಸಿಂಗ್ ಮಾತನಾಡಿ, ನಗರದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲು ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಸಿದ್ದರಿದ್ದಾರೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲು ಆಗುತ್ತಿಲ್ಲ. ಡಸ್ಟ್ ಬಿನ್ ಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಧಿಕಾರಿಗಳು ಮುಂದಾಗಬೇಕು ಎಂದರು.

ಇದಕ್ಕೂ ಮೊದಲು ಹಂಪಿ ಸ್ಮಾರಕಗಳ ಹಾಗೂ ಸ್ವಚ್ಛತಾ ಕುರಿತು ಜಾಗೃತಿ ಮೂಡಿಸುವ ಜನಜಾಗೃತಿ ಜಾಥಾವನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಹಂಪಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಸ್.ಪ್ರವೀಣ್ ಸಿಂಗ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಉಪಾಧ್ಯಕ್ಷೆ ಕೆ.ಗಾದಿಲಿಂಗಪ್ಪ, ನಗರಸಭೆ ಅಧ್ಯಕ್ಷೆ ನಾಗಲಕ್ಷ್ಮಮ್ಮ, ಹೊಸಪೇಟೆ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಶ್ವಿನ್ ಕೊತಂಬರಿ, ಹುಡಾ ಅಧ್ಯಕ್ಷ ವಿ.ವೆಂಕಟೇಶ್ವರ ರೆಡ್ಡಿ, ಅಂಜುಮನ್ ಕಮಿಟಿ ಅಧ್ಯಕ್ಷ ಹೆಚ್.ಎನ್.ಎಫ್.ಮಹಮದ್ ಇಮಾಮ್ ನಿಯಾಜಿ, ತಹಶೀಲ್ದಾರ್ ಹೆಚ್.ವಿಶ್ವನಾಥ, ನಗರಸಭೆ ಪೌರಾಯುಕ್ತ ವಿ.ರಮೇಶ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮನ್ಸೂರ್ ಅಹಮದ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಶಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಟಿ.ವೆಂಕೋಬಪ್ಪ, ಕಮಲಾಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫಣಿರಾಜ್, ಹುಡಾ ಆಯುಕ್ತ ಗುರುಪ್ರಸಾದ, ನಗರಸಭೆ ಸದಸ್ಯರಾದ ಚಂದ್ರಕಾಂತ್ ಕಾಮತ್. ರಾಮಾಂಜಿನಿ, ಕುಲ್ಲಾಯಪ್ಪ, ರಾಮಕೃಷ್ಣ, ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಗೋಡೆ ಬರಹದ ಚಿತ್ರಕಲಾ ಉತ್ಸವದಲ್ಲಿ ಸ್ಥಳೀಯ ನೂರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.ನಿವೃತ್ತ ಶಿಕ್ಷಕ ಮ.ಬ.ಸೋಮಣ್ಣ ನಿರ್ವಹಿಸಿದರು.

Leave a Comment