ಹಂಪಿ ಉತ್ಸವ ಹಿನ್ನಲೆ-ಭರದಿಂದ ಸಾಗಿರುವ ಸ್ವಚ್ಛತಾ ಕಾರ್ಯ

ಹೊಸಪೇಟೆ.ಅ.24 ಇದೇ ನ.3,4 ಹಾಗೂ 5 ರಂದು ಜರುಗಲಿರುವ ಹಂಪಿ ಉತ್ಸವ ಹಿನ್ನಲೆಯಲ್ಲಿ ಹಂಪಿ ಪ್ರದೇಶ ಸೇರಿದಂತೆ ರಸ್ತೆಗಳ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

3 ದಿನಗಳ ಕಾಲ ಜರುಗಲಿರುವ ಹಂಪಿ ಉತ್ಸವಕ್ಕೆ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿದ್ದು. ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಮುಖ್ಯ ಬೀದಿ, ಉತ್ಸವದ ಮುಖ್ಯ ವೇದಿಕೆಯ ಸ್ಥಳ, ಮುಖ್ಯ ವೇದಿಕೆಗೆ ಅತಿಥಿ, ಗಣ್ಯರು ಆಗಮಿಸುವ ರಸ್ತೆ, ಹೊಸಪೇಟೆಯಿಂದ ಹಂಪಿಗೆ ಕಡ್ಡಿರಾಂಪುರ ಮಾರ್ಗವಾಗಿ ತೆರಳುವ ರಸ್ತೆ, ಕಮಲಾಪುರ-ಹಂಪಿ ನಡುವಿನ ರಸ್ತೆ ಹಾಗೂ ಕಮಲಾಪುರದಿಂದ ವಿಜಯವಿಠ್ಠಲ ದೇವಸ್ಥಾನಕ್ಕೆ ತೆರಳುವ ರಸ್ತೆಗಳನ್ನು ದುರಸ್ತಿಗೊಳಿಸಲಾಗುತ್ತಿದೆ.

ಇದರ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿನ ಗಿಡ ಗಂಟಿಗಳನ್ನು ಕಡಿದು ಸ್ವಚ್ಛ ಮಾಡಲಾಗುತ್ತಿದೆ. ರಸ್ತೆ ಬದಿಯ ಕಲ್ಲು ಕಂಬಗಳು, ಮರ-ಗಿಡಗಳು ಹಾಗೂ ವಿದ್ಯುತ್ ಕಂಬಗಳಿಗೆ ತಡೆ ಗೋಡೆಗಳಿಗೆ ಸುಣ್ಣ-ಬಣ್ಣಗಳಿಂದ ಸಿಂಗಾರಗೊಳಿಸಲಾಗುತ್ತಿದೆ.

ಒಟ್ಟಿನಲ್ಲಿ 3 ದಿನಗಳ ಕಾಲ ಜರುಗಲಿರುವ ಹಂಪಿ ಉತ್ಸವದ ಯಶಸ್ವಿಗಾಗಿ ಜಿಲ್ಲಾಡಳಿತ ಸಕಲ ರೀತಿಯ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಸ್ವಚ್ಛತಾ ಹಾಗೂ ರಸ್ತೆಗಳ ಗುಂಡಿ ಮುಚ್ಚುವ ಮತ್ತು ಸುಣ್ಣ-ಬಣ್ಣ ಬಳಿಯುವ ಕಾರ್ಯದಲ್ಲಿ ನೂರಾರು ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ.

Leave a Comment