ಹಂಪಿ ಉತ್ಸವವನ್ನು ಅಂತರಾಷ್ಟ್ರೀಯ ಉತ್ಸವವಾಗಿ ಆಚರಿಸುವ ಮಹಾದಾಸೆಯನ್ನು ಎಂ.ಪಿ.ಪಿ. ಹೊಂದಿದ್ದರು

ಹೊಸಪೇಟೆ.ಅ.24 ವಿಶ್ವ ಪ್ರಸಿದ್ಧ ಹಂಪಿ ಉತ್ಸವವನ್ನು ಅಂತರಾಷ್ಟ್ರೀಯ ಉತ್ಸವ ಆಚರಿಸುವ ಹಾಗೂ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಪರ್ಯಾಯವಾಗಿ ಕರ್ನಾಟಕದ ಜನೋತ್ಸವವನ್ನಾಗಿ ಆಚರಿಸುವ ಮಹಾದಾಸೆಯನ್ನು ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಹೊಂದಿದ್ದರು ಎಂದು ಸಾಹಿತಿ ಎಂ.ಎಂ.ಶಿವಪ್ರಕಾಶ್ ಹೇಳಿದರು.

ಸ್ಥಳೀಯ ಗೃಹರಕ್ಷಕ ದಳದ ಕಛೇರಿಯಲ್ಲಿ ಭಾನುವಾರ ರಂಗ ಪ್ರಕಾಶ, ಗೃಹರಕ್ಷಕ ದಳ, ಚೇತನ ಸಾಹಿತ್ಯ ಸಂಸ್ಥೆ, ಪ್ರಿಯದರ್ಶಿನಿ ಮಹಿಳಾ ಸಂಘ ಬುದ್ಧ ಬಸವ ಅಂಬೇಡ್ಕರ್ ಜನಪರ ವೇದಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ದಿ.ಎಂ.ಪಿ.ಪ್ರಕಾಶರ ದೃಷ್ಟಿಯಲ್ಲಿ “ಹಂಪಿ ಉತ್ಸವ” ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆ ಮಾಡಿ ಮಾತನಾಡಿದ ಅವರು, ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀಮಂತರು ಹಾಗೂ ಆಮಂತ್ರಿತರು, ಗಣ್ಯರಿಗಷ್ಟೇ ಸೀಮಿತವಾಗಿತ್ತು. ಇದರಿಂದ ಜನಸಾಮಾನ್ಯರು ದೂರ ಉಳಿಯುಂತಾಗಿತ್ತು. ಇದನ್ನು ಮನಗಂಡ ಎಂ.ಪಿ.ಪ್ರಕಾಶ್, ಹಂಪಿ ಉತ್ಸವವನ್ನು ಅದಕ್ಕೆ ಪರ್ಯಾಯವಾಗಿ, ಆಯೋಜನೆ ಮಾಡಲು ಮುಂದಾದರು.

ಹಂಪಿ ಉತ್ಸವದಲ್ಲಿ ಎಲ್ಲಾ ರೀತಿಯ ಕಲಾವಿದರು ಭಾಗವಹಿಸಬೇಕು. ಜನ ಸಾಮಾನ್ಯರು ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಜನೋತ್ಸವವಾಗಲು ಹಗಲಿರಳು ಶ್ರಮಿಸಿದರು.

ಹಂಪಿ ಉತ್ಸವಕ್ಕೆ ಅಂತರಾಷ್ಟ್ರೀಯ ಮೆರಗು ತರುವುದರೊಂದಿಗೆ ಸ್ಥಳಿಯ ವಿವಿಧ ಕಲೆ ಜನಪದ, ನೃತ್ಯ, ಸಾಹಿತ್ಯ, ಪುಸ್ತಕ ಪ್ರದರ್ಶನ, ಗ್ರಾಮೀಣ ಕ್ರೀಡೆಗಳು, ಹಾಗೂ ನಾಡಿನ ಸಾಂಸ್ಕೃತಿಕ ಜನಮೇಳವನ್ನಾಗಿಸುವ ಅಧಮ್ಯ ಆಸೆಯನ್ನು ಅವರು ಹೊಂದಿದ್ದರು, 1986 ರಿಂದ ಹಂಪಿಯಲ್ಲಿ ಆರಂಭಗೊಂಡ ಹಂಪಿ ಉತ್ಸವವು ನಂತರದ ದಿನಗಳಲ್ಲಿ ಪ್ರತಿ ವರ್ಷ ನವೆಂಬರ್ 3 ರಿಂದ 5ರ ತನಕ ನಾಡ ಜನೋತ್ಸವವನ್ನಾಗಿ ಆಚರಿಸಲು ಕಾರಣೀಭೂತರಾದರು ಎಂದರು.

ಬುದ್ದ ಬಸವ, ಅಂಬೇಡ್ಕರ್, ಜನಪರ ವೇದಿಕೆಯ ಸಂಚಾಲಕ ನಿಂಬಗಲ್ ರಾಮಕೃಷ್ಣ ಮಾತನಾಡಿ, ವಿಜಯನಗರದ ಮರೆತು ಹೋದ ಸಾಮ್ರಾಜ್ಯ ವಿಶ್ವಮಟ್ಟದಲ್ಲಿ ಮತ್ತೆ ಬೆಳಕಿಗೆ ಬರಲು ಕಾರಣರಾದ ದಿ.ಎಂ.ಪಿ.ಪ್ರಕಾಶ್, ಇಂದಿಗೂ ಈ ಭಾಗದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಹಂಪಿ ಉತ್ಸವದ ಜೊತೆಗೆ ಬನವಾಸಿ ಕದಂಬೋತ್ಸವ, ಪಟ್ಟದ ಕಲ್ಲು ಉತ್ಸವ, ನವರಸ ಪುರ ಉತ್ಸವ, ಕಿತ್ತೂರು ಉತ್ಸವ ಇನ್ನು ಮುಂತಾದ ಜನಸಾಮಾನ್ಯರ ಬದುಕನ್ನು ಶ್ರೀಮಂತಗೊಳಿಸುವ ಹಲವಾರು ಉತ್ಸವಗಳ ಆರಂಭಕ್ಕೆ ಪ್ರೇರಕ ಸಾಕ್ಷಿಯಾಗಿದ್ದರು. ಮತ್ತು ಕರ್ನಾಟಕವನ್ನು ದೇಶದ ಸಾಂಸ್ಕೃತಿಕ ರಾಯಭಾರಿಯಾಗಿಸಲು ಹಗಲಿರುಳು ಅವರು ಶ್ರಮಿಸಿದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯದರ್ಶಿನಿ ಮಹಿಳಾ ಸಂಘದ ಅಧ್ಯಕ್ಷೆ ಡಾ.ಎಸ್.ಡಿ.ಸುಲೋಚನಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಸಮಾದೇಶಾಧಿಕಾರಿ ಎಸ್.ಎಂ.ಗಿರೀಶ್, ಪ್ಲಟೂನ ಕಮಾಂಡರ್ ವಿ.ಪರಶುರಾಮ, ಪ್ರಭು, ಹೆಚ್.ಎಂ.ಜಂಬುನಾಥ, ಮದುರಚೆನ್ನಶಾಸ್ತ್ರಿ, ಯತ್ನಳ್ಳಿ ಮಲ್ಲಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಅಂಜಲಿ ಸ್ವಾಗತಿಸಿದರು, ರಂಗ ಪ್ರಕಾಶನದ ಟಿ.ಎಂ.ನಾಗಭೂಷಣ, ಪ್ರಸ್ತಾವಿಕವಾಗಿ ಮಾತನಾಡಿದರು. ಸೋದಾ ವಿರುಪಾಕ್ಷಗೌಡ ವಂದಿಸಿದರು.

Leave a Comment