ಸ್ವಾಮಿ ವಿವೇಕಾನಂದರ ಜೀವನವೇ ಒಂದು ಮಹಾಕೃತಿ : ಡಾ|| ಬಿ.ಮಹಂತೇಶ್

ಹಿರಿಯೂರು:ಜ.13- ಸ್ವಾಮಿ ವಿವೇಕಾನಂದರು ಭಾರತದ ದಾರ್ಶನಿಕರಲ್ಲಿ ಅಗ್ರಮಾನ್ಯರು ಹಾಗೂ ಮಹಾನ್ ಸಂತರು. ಮಹಾ ಭಕ್ತರೂ, ಸತ್ವವುಳ್ಳ ವಾಗ್ಮಿಯೂ, ಚಿಂತಕರೂ, ತತ್ವಜ್ಞಾನಿಯೂ, ವೀರ ಸನ್ಯಾಸಿಯೂ, ಸಮಾಜ ಸುಧಾರಕರೂ, ಅಪ್ರತಿಮ ದೇಶಾಭಿಮಾನಿಯೂ ಆಗಿದ್ದ ಸ್ವಾಮಿ ವಿವೇಕಾನಂದರ ಜೀವನವೇ ಒಂದು ಮಹಾಕೃತಿಯಾಗಿ ಯುವಕರಿಗೆ ಮತ್ತು ಯುವ ಜನರಿಗೆ ದಾರಿ ದೀಪವಾಗಿದೆ ಎಂದು ಹಿರಿಯೂರು ತೋಟಗಾರಿಕೆ ಕಾಲೇಜಿನ ವಿಶ್ರಾಂತ ಡೀನ್ ಹಾಗೂ ಕೃಷಿ ವಿಜ್ಞಾನಿ ಡಾ|| ಬಿ.ಮಹಂತೇಶ್ ಹೇಳಿದರು ತಾಲ್ಲೂಕಿನ ಹೇಮದಳ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಯುವ ಶಕ್ತಿಯೇ ದೇಶದ ಶಕ್ತಿ ಎಂಬ ಘೋಷಣೆ ಸಾರಿದ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಪ್ರತಿ ವರ್ಷ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ದಿನದಂದು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಮತ್ತು ಆದರ್ಶಗಳನ್ನು ಯುವಕರಿಗೆ ಹಾಗೂ ಯುವ ಜನರಿಗೆ ತಿಳಿಸುವ ಮೂಲಕ ಅವರಲ್ಲಿರುವ ಸುಪ್ತ ಶಕ್ತಿಯನ್ನು ಜಾಗೃತಿಗೊಳಿಸಿ ಭವ್ಯ ಭಾರತ ಕಟ್ಟಲು ಅಣ ಗೊಳಿಸಲಾಗುತ್ತದೆ ಎಂದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ದೇಶದ ಯುವ ಶಕ್ತಿಯಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಭವ್ಯ ಭಾರತವನ್ನು ನಿರ್ಮಿಸಲಿರುವ ಯುವಕರು ಹಾಗೂ ಯುವ ಜನರು ವಿವೇಕಾನಂದರ ತತ್ವಾದರ್ಶಗಳು, ಬೋಧನೆಗಳು ಮತ್ತು ವಿಚಾರಧಾರೆಗಳಿಂದ ಸ್ಪೂರ್ತಿ ಪಡೆಯಬೇಕು ಎಂದು ತಿಳಿಸಿದರು ಸಹ ಶಿಕ್ಷಕರಾದ ಟಿ.ನಾಗರಾಜ, , ಸಹ ಶಿಕ್ಷಕಿಯರಾದ ವಿ.ಪ್ರತಿಭಾ, ಹೆಚ್.ಯಶೋಧ, ಜಿ. ಸಿದ್ದಮ್ಮ, ದೈಹಿಕ ಶಿಕ್ಷಕಿ ಜಿ.ಎನ್.ಸುಮ, ವೃತ್ತಿ ಶಿಕ್ಷಕ ರಮೇಶ್, ಮಂಜುನಾಥ್ ಮತ್ತಿತರರು ಪಾಲ್ಗಂಡಿದ್ದರು. ಕು|| ಹೆಚ್.ಎಸ್.ಭೂಮಿಕ ಪ್ರಾರ್ಥಿಸಿದರು, ಜಿ.ಪ್ರಕಾಶ್ ಸ್ವಾಗತಿಸಿದರು, ನಾಗಭೂಷಣಾಚಾರಿ ವಂದಿಸಿದರು, ಟಿ.ನಾಗರಾಜ ಕಾರ್ಯಕ್ರಮ ನಿರೂಪಿಸಿದರು.

Leave a Comment