ಸ್ವಾಭಿಮಾನದಿಂದ ಕನ್ನಡ ನುಡಿಯನ್ನಾಡಬೇಕು:ಡಾ. ಜಿನದತ್ತ ಹಡಗಲಿ

ಕುಂದಗೋಳ,ಜ13:   ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳು ವಿಷಯ ವಿಶೇಷ ಭಾಷೆ ಎಂಬುದನ್ನು ಜೈನ ಕವಿ ಆದಿಕವಿ ಪಂಪ
ಹೇಳಿದಂತೆ ನಮ್ಮ ನಾಡು ದಕ್ಷಿಣಕ್ಕೆ ಕಾವೇರಿ ಹಾಗೂ ಉತ್ತರಕ್ಕೆ ಗೋದಾವರಿ ವರೆಗೆ ಹಬ್ಬಿತ್ತೆಂಬುದನ್ನು ನಾವು ಅರಿತು ಇಂದು ಕನ್ನಡ ನಾಡಿಗಾಗಿ ದುಡಿಯಬೇಕು, ಸ್ವಾಭಿಮಾನದಿಂದ ಕನ್ನಡ ನುಡಿಯನ್ನಾಡಬೇಕು ಎಂದು ಸಮ್ಮೇಳನಾಧ್ಯಕ್ಷ ಡಾ. ಜಿನದತ್ತ ಹಡಗಲಿ ಅವರು ಮಾರ್ಮಿಕವಾಗಿ ನುಡಿದರು.
ಅವರು ತಾಲೂಕಿನ ಪಶುಪತಿಹಾಳ ಗ್ರಾಮದ ಶ್ರೀ ಬಾಬಲಲೀಲಾ ಮಹಾಂತ ಶಿವಯೋಗಿಗಳ ಮಠದಾವರಣದಲ್ಲಿ ಶುಕ್ರವಾರ ನಡೆದ ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತ ಕನ್ನಡ ಮೊಟ್ಟ ಮೊದಲಿನ ಶಾಸನವಾದ ಹಲ್ಮಿಡಿ ಶಾಸನವು ಕ್ರಿ.ಶ 450 ರಲ್ಲಿಯೇ ಕನ್ನಡತ್ವವನ್ನು ಎತ್ತಿ ಹೇಳುತ್ತದೆ. ಈ ನಾಡಿಗೆ ಕನ್ನಡವನ್ನೆತ್ತಿ ಆಡಿಸಿದ ಮೊದಲ ದೊರೆ ದುರ್ವಿನಿತ ಹಾಗೂ ನೃಪತುಂಗನ ಉಲ್ಲೇಖ ಸಾರುವ ಕ್ರಿ.ಶ 9ನೇ ಶತಮಾನದಲ್ಲಿ ರಚಿತವಾದ ಜೈನ ಧರ್ಮಿಯ ವಿಜಯನ ಕವಿರಾಜ ಮರ್ಗ ಕನ್ನಡದ ಉಪಲಬ್ಧ ಮೊದಲ ಅಲಂಕಾರ ಗ್ರಂಥವನ್ನು ನೆನೆಯದೆ ಆಗದು. ಕ್ರಿ.ಶ 700ರ ಅವಧಿಯಲ್ಲಿಯೇ ಜೈನ ಮುನಿಗಳ ಹಾಗೂ ಕಂತಿಯರ ವೈರಾಗ್ಯ ಮತ್ತು ತಪದ ಮಹಿಮೆಯನ್ನು ಸಾರುವ 35ಕ್ಕೂ ಅಧಿಕ ಶಾಸನಗಳು ಶ್ರವಣಬೆಳ್ಗೊಳದಲ್ಲಿ ಸಿಕ್ಕಿವೆ. ಪತಿಯೇ ಪರದೈವವೆಂಬ ನೀತಿ ಸಾರುವ ಕನ್ನಡ ಜಾನಪದವು ಗರತಿ ಎಂಬ ಹೆಣ್ಣನ್ನು ತೋರಿಸಿಕೊಡುತ್ತದೆ ಎಂದು ಹೇಳಿದರಲ್ಲದೆ ಕುಂದಗೋಳ ತಾಲೂಕು ಪ್ರದೇಶವು ಸುಮಾರು ಒಂದೂವರೆ ಸಾವಿರ ವರ್ಷಗಳ ಸುಧೀರ್ಘ ಇತಿಹಾಸವಿದ್ದು, ಇದಕ್ಕೆ ಪೂರಕವಾದಂತೆ ಕುಂದಗೋಳ ಶಂಭುಲಿಂಗೇಶ್ವರ ದೇವಾಲಯದ ಸ್ವಯಂಭೂ ದೇವರು ಪೂಜೆಗೊಳಪಟ್ಟಿದ್ದಾನೆ. ಈ ನೆಲದಲ್ಲಿನ ವಿಶೇಷತೆಗಳು ಸಾಕಷ್ಟಿದ್ದು, ಇಲ್ಲಿನ ಮಣ್ಣು ಹೊನ್ನಾಗಿದ್ದು, ಇಲ್ಲಿ ಬೆಳೆಯುವ ಬೆಳೆಗಳು ದೇಶ-ವಿಧೇಶದಲ್ಲಿ ಸುಪ್ರಸಿದ್ಧವಾಗಿವೆ. ಅಲ್ಲದೆ ಸಂಗೀತ ಕ್ಷೇತ್ರದಲ್ಲಿ ಸವಾಯಿ ಗಂಧರ್ವರು, ಲಿಂಗರಾಜ ಭುವಾ, ಡಾ. ಬಸವರಾಜ ರಾಜಗುರು, ಪಂ.ಪಂಚಾಕ್ಷರಿ ಸ್ವಾಮಿಗಳು ಸೇರಿದಂತೆ ಅನೇಕರಿಗೆ ಸಂಗೀತ ಪುಣ್ಯ ಭೂಮಿಎಂದಿನೆಸಿದೆ. ರಂಗಭೂಮಿಯಲ್ಲಿ ಗುಡಗೇರಿ ಎನ್.ಬಸವರಾಜ, ಯಲಿವಾಳ ಸಿದ್ದಯ್ಯನವರು, ನಾಟಕ ರಂಗದ ದೃವತಾರೆ ಬೂದಿಹಾಲ ಬಸವನಗೌಡ್ರು, ಶಿರೂರಿನ ಚನ್ನಯ್ಯಸ್ವಾಮಿ ಹಾಗೂ ಬಸವರಾಜ ಬೆಂಗೇರಿ, ಆನಂದಪ್ಪ ಹಡಗಲಿ, ಫಕ್ಕೀರಪ್ಪ ಭಜಂತ್ರಿ ಸೇರಿದಂತೆ ಅನೇಕರನ್ನು ಕೊಡುಗೆಯನ್ನಾಗಿ ನೀಡಿದೆ ಎಂದು ನೆನಪಿಸಿಕೊಂಡ ಜಿನದತ್ತ ಅವರು ಚಿತ್ರಕಲೆಯಲ್ಲಿ ವಿ.ಜಿ.ಹರೇಗೌಡ್ರ, ಎಚ್.ಎಸ್.ಭಂಡಿವಾಡ, ಈದೀಗ ಮಹಾಂತೇಶ ಕುಂದಗೋಳ, ಚರಂತಿ ಹಿರೇಮಠ ಸೇರಿದಂತೆ ಅನೇಕರು ಹೆಸರು ಮಾಡಿದ್ದಾರೆ ಎಂದು ಸರ್ವರನ್ನೂ ನೆನೆದರು.
ಸಮ್ಮೇಳನ ಉದ್ಘಾಟಿಸಿದ ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಅವರು ಆಶೀರ್ವಚನ ನೀಡುತ್ತ ಮುಸಿಂ ಬಾಂಧವರು ತಮ್ಮ ಮನೆಮನಗಳಲ್ಲಿ ಹಾಗೂ ತಮ್ಮ ವ್ಯವಹಾರಿಕ ಸ್ಥಳಗಳು ಸೇರಿದಂತೆ ಅನೇಕ ತಮ್ಮ ಜೀವನದ ಬದುಕಿನಲ್ಲಿ ತಮ್ಮ ಭಾಷೆಯನ್ನು ಬಿಟ್ಟು ಅನ್ಯ ಭಾಷೆಯನ್ನು ಮಾತನಾಡುವದು ಬಹಳಷ್ಟು ವಿರಳವಾದಂತೆ ಎಲ್ಲರೂ ಕನ್ನಡ ನಾಡಿನಲ್ಲಿ ಹುಟ್ಟಿದ ನಾವು ನಮ್ಮ ಭಾಷೆಯನ್ನು ಸರಿಯಾಗಿ ಬಳಸಿಕೊಳ್ಳದೆ ಇಂಗ್ಲಿಷ ವ್ಯಾಮೋಹದಿಂದ ಬಳಲುತ್ತಿದ್ದು, ಕೇವಲ ಅನ್ಯ ಭಾಷೆಯ ಕ್ಷಯದಲ್ಲಿ ಕೊರಗುತ್ತ ನಮ್ಮ ಕನ್ನಡತನವನ್ನು ಮರೆಯುತ್ತಿದ್ದು, ಕೇವಲ ಒಂದು ದಿನದ ಮಟ್ಟಿಗೆ ಇಂಥಹ ಕಾರ್ಯಕ್ರಮವನ್ನು ಆಯೋಜಿಸಿ ನಂತರದ ದಿನಗಳಲ್ಲಿ ಮತ್ತೆ ಅನ್ಯ ಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿರುವದು ಸರಿಯಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೋ: ಕೆ.ಎಸ್.ಕೌಜಲಗಿ ಅವರು ಮಾತನಾಡುತ್ತ ಸಾಹಿತಿಗಳು, ಚಿಂತಕರು, ಕಲಾವಿದರು, ಸಂಗೀತ ದಿಗ್ಗಜರು ಹಾಗೂ ಕ್ರೀಡಾಪಟುಗಳು ಅಲ್ಲದೆ ಭಾವೈಕ್ಯತೆ ಸಾರಿದ ಸಾಧು-ಸಂತ ಪುರುಷರು-ಮಹಾತ್ಮರು, ಶರಣರ ಶ್ರೀಮಂತಿಕೆ ತಾಲೂಕೆಂಬ ಹೆಗ್ಗಳಿಕೆಗೆ ಪಾತ್ರವಾದ ಈ ಕುಂದಗೋಳ ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮವಾಗಿರುವ ಜೊತೆಗೆ ಸ್ವಯಂ ಪ್ರೇರಿತವಾಗಿಯೇ ಈ ಪಶುಪತಿಹಾಳ ಗ್ರಾಮಸ್ಥರು ಸೇರಿಕೊಂಡು ಹಬ್ಬದ ರೀತಿಯಲ್ಲಿ ಈ ಕನ್ನಡ ಸಮ್ಮೇಳನವನ್ನು ನಡೆಸುತ್ತಿರುವದೂ ಕೂಡಾ ಜಿಲ್ಲೆಯಲ್ಲಿ ಪ್ರಥಮ ಎಂದು ಶ್ಲಾಘಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೋ: ಶಂಕರಗೌಡ ಸಾತ್ಮಾರ, ಡಾ. ಎ.ಸಿ.ವಾಲಿ, ಮಾಜಿ ಶಾಸಕ ಎಂ.ಎಸ್.ಅಕ್ಕಿ ಸಮ್ಮೇಳನ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ತಾಲೂಕಾ ಕಪ ಗೌರವಾಧ್ಯಕ್ಷ ಎ.ಬಿ.ಉಪ್ಪಿನ ಮಾತನಾಡಿದರು. ವೇದಿಕೆಯಲ್ಲಿ ಸಾಹಿತಿ ಈಶ್ವರಪ್ಪ ಜಾವೂರ, ಜಿ.ಪಂ ಸದಸ್ಯ ಭರಮಪ್ಪ ಮುಗಳಿ, ತಾ.ಪಂ ಸದಸ್ಯ ಶಿವಿಂಗಪ್ಪ ವಡಕಣ್ಣವರ, ಪತ್ರಕರ್ತ ಸಂಘಾಧ್ಯಕ್ಷ ಮಂಜುನಾಥ ಶಿವಕ್ಕನವರ, ಶಸಾಪ ಅಧ್ಯಕ್ಷ ಜಿ.ಡಿ.ಘೋರ್ಪಡೆ, ಕಸಾಪ ನಿ.ಪೂ ಅಧ್ಯಕ್ಷ ಸಿ.ಬಿ.ಪಾಟೀಲ, ನಾಗನಗೌಡ ಪಾಟೀಲ, ರಾಚಯ್ಯ ಹಿರೇಮಠ, ಪ್ರಹ್ಲಾದಗೌಡ ಪಾಟೀಲ, ಶಿವಾನಂದ ವಡಕಣ್ಣವರ, ಜಿ.ಎಫ್.ನಾಯ್ಕರ, ಶಿವನಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.
ಕಸಾಪ ಗೌರವ ಕಾರ್ಯದರ್ಶಿ ಬಿ.ಎಲ್.ಪಾಟೀಲ ಹಾಗೂ ಪ್ರೋ: ರಮೇಶ ಅತ್ತಿಗೇರಿ ನಿರೂಪಿಸಿದರು. ಕಸಾಪ ಅಧ್ಯಕ್ಷ ಎಸ್.ಎನ್.ಅರಳಿಕಟ್ಟಿ ಸ್ವಾಗತಿಸಿದರು. ಎಂ.ಟಿ.ಅಕ್ಕಿ ವಂದಿಸಿದರು.

Leave a Comment