ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪರ ಗುಣಗಾನ

ಬೆಂಗಳೂರು, ಸೆ.೩- ಹುತಾತ್ಮ ಮೈಲಾರ ಮಹಾದೇವಪ್ಪ ಅವರು ದೇಶದ ಬಗ್ಗೆ ಅಪ್ರತಿಮ ಭಕ್ತಿ ಹೊಂದಿದ್ದರು. ಅವರ ತ್ಯಾಗ, ಬಲಿದಾನ ನಮಗೆ ಮಾರ್ಗದರ್ಶನವಾಗಿದೆ ಎಂದು ಕೇಂದ್ರದ ಸಂಪರ್ಕ ಸಂವಹನ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ಮನೋಜ್ ಸಿನ್ಹಾ ಹೇಳಿದರು.

ನಗರದಲ್ಲಿಂದು ಕುಮಾರಕೃಪಾದ ಗಾಂಧಿ ಭವನದಲ್ಲಿ ಕೇಂದ್ರದ ಸಂವಹನ ಇಲಾಖೆ, ಗಾಂಧಿ ಸ್ಮಾರಕ ನಿಧಿ ಸಹಯೋಗದೊಂದಿಗೆ ಆಯೋಜಿಸಿದ್ದ, ಹುತಾತ್ಮ ಮೈಲಾರ ಮಹಾದೇವಪ್ಪ ಅವರ ಸ್ಮಾರಣಾರ್ಥ, ಅಂಚೆ ಚೀಟಿ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗಾಂಧೀಜಿಯವರು ಕೈಗೊಂಡ ದಂಡಿಯಾತ್ರೆಯಲ್ಲಿ ೭೧ ಜನ ಭಾಗವಹಿಸಿದ್ದು, ಅದರಲ್ಲಿ ಮುಂಬೈ ಕರ್ನಾಟಕದ ಅಖಂಡ ಧಾರವಾಡ ಜಿಲ್ಲೆಯಿಂದ ಮಹಾದೇವಪ್ಪ ಮೈಲಾರ ಪಾಲ್ಗೊಂಡು ಬಹುದೊಡ್ಡ ಸಾಧನೆ ಮಾಡಿದರು ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಸಂಸಾರ ತೊರೆದು ಬ್ರಿಟಿಷರ ಗುಂಡೇಟಿಗೆ ಎದೆಯೊಡ್ಡಿ ಅದೆಷ್ಟೊ ಮಂದಿ ಹುತಾತ್ಮರಾಗಿದ್ದಾರೆ. ಆದರೆ, ಗಾಂಧೀಜಿ ಹೊರತು ಪಡಿಸಿದರೆ ಮಹಾದೇವಪ್ಪ ಅವರ ಕುಟುಂಬ ಮಾತ್ರ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿತ್ತು.
ಮಹಾದೇವಪ್ಪ ಅವರು ಗಾಂಧೀಜಿ ನೇತೃತ್ವದ ಉಪ್ಪಿನ ಸತ್ಯಾಗ್ರಹದಲ್ಲಿ ಕನ್ನಡ ನಾಡನ್ನು ಪ್ರತಿನಿಧಿಸಿದ್ದರು. ಅಂಥ ವ್ಯಕ್ತಿಯನ್ನು ಹಾಗೂ ಅವರ ವಿಚಾರಧಾರೆಗಳನ್ನು ನಾವುಗಳು ಎಂದಿಗೂ ಮರೆಯಬಾರದು ಎಂದ ಅವರು, ಅನೇಕ ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರಕ್ಕೆ ಹೋರಾಡಿದ ಕೆಲವರು ಜೈಲು ಸೇರಿದ್ದು, ಇನ್ನು ಕೆಲವರು ಬ್ರಿಟಿಷ್ ಸರ್ಕಾರದ ಗುಂಡಿಗೆ ಬಲಿಯಾಗಿದ್ದಾರೆ ಎಂದು ನೆನಪು ಮಾಡಿಕೊಂಡರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಮೈಲಾರ ಅವರು ಸ್ವಯಂ ಸ್ಫೂರ್ತಿಯಿಂದ ದೀಪಕ್ಕೆರಗಿದ ಹಾರುಹುಳದಂತೆ ಪ್ರಾಣನೀಗಿದ ಪುಣ್ಯ ಪುರುಷ. ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದಿಂದ ಗಾಂಧೀಯುಗದಲ್ಲಿ ಬಲಿದಾನ ಮಾಡಿದ ವೀರಯೋಧರಲ್ಲಿ ಅಗ್ರಗಣ್ಯರು ಎಂದು ನುಡಿದರು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿ ಏಳು ತಿಂಗಳಿಗೂ ದೀರ್ಘಕಾಲ ಅವರು ಮಾಡಿದ ಸಾಹಸ, ಪಟ್ಟ ಕಷ್ಟ, ತೋರಿದ ಧಾಡಸಿತನ ಅಸಾಧಾರಣ. ‘ಮಾಡು ಇಲ್ಲವೆ ಮಡಿ’ ಎಂಬ ಗಾಂಧೀಜಿಯ ಕರೆಯಂತೆ ಮಾಡಿ ಮಡಿದ ಧೀರ, ಎದೆಗಾರ. ದೇಶಕ್ಕಾಗಿ ತ್ಯಾಗ ಮಾಡಬೇಕಾದಾಗ ಪ್ರಾಣವನ್ನೇ ತ್ಯಾಗಮಾಡಿದವರು ಎಂದು ಬಣ್ಣಿಸಿದರು.

ಗಾಂಧೀಜಿ ೧೯೩೦ರಲ್ಲಿ ಹೂಡಿದ ಉಪ್ಪಿನ ಸತ್ಯಾಗ್ರಹದ ವೇಳೆಗೆ ದಾಂಡಿಗೆ ನಡೆದ ದೀರ್ಘ ಕಾಲು ನಡಿಗೆಯ ಯಾತ್ರೆಯಲ್ಲಿ ಪಾಲ್ಗೊಂಡ ೭೮ ಸತ್ಯಾಗ್ರಹಿಗಳಲ್ಲಿ ಮಹಾದೇವಪ್ಪ ಕರ್ನಾಟಕದ ಏಕಮಾತ್ರ ಪ್ರತಿನಿಧಿ. ಆಶ್ರಮದ ದಾಖಲೆಯಲ್ಲಿ ಮೈಲಾರ ಮಾರ್ತಾಂಡ ಎಂದು ಇವರ ಹೆಸರಿದೆ.

ಆಗ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಹಾದೇವಪ್ಪ ಇತರರ ಜತೆ ಬಂಧಿತರಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದರು ಎಂದ ಅವರು, ಮೈಲಾರ ನೆನಪಿನಲ್ಲಿ ಅಂಚೆ ಚೀಟಿ ಹೊರ ತಂದಿರುವುದು ಸಂತಸ ತಂದಿದೆ ಎಂದರು.

ಪ್ರದರ್ಶನ:೧೯೩೦ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಜರುಗಿದ ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಮೈಲಾರ ಮಹಾದೇವಪ್ಪ ಅವರು ಭಾಗವಹಿಸಿದ್ದ ಭಾವಚಿತ್ರ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸಂಸದ ಶಿವಕುಮಾರ್ ಸಿ.ಉದಾಸಿ, ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೋ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವುಡೇ ಪಿ.ಕೃಷ್ಣ, ಮೈಲಾರ ಮಹಾದೇವಪ್ಪ ಅವರ ಪುತ್ರಿ ಕಸ್ತೂರಿ ದೇವಿ ಸಿದ್ದಲಿಂಗಯ್ಯ ಸೇರಿದಂತೆ ಪ್ರಮುಖರಿದ್ದರು.
ಬಾಕ್ಸ್…..

ಸಂತ ಶಿಶುನಾಳ ಶರೀಫ್ ಅವರ ನೆನಪಿನಲ್ಲಿ ಅಂಚೆ ಚೀಟಿ ಹೊರ ತರುವ ಉದ್ದೇಶದಿಂದ ಕೇಂದ್ರಕ್ಕೆ ಮನವಿ ನೀಡಲಾಗಿದ್ದು, ಈ ಸಂಬಂಧ ಮನೋಜ್ ಸಿನ್ಹಾ ಸಹಕಾರ ನೀಡುವಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮನವಿ ಮಾಡಿದರು.

Leave a Comment