ಸ್ವಾತಂತ್ರ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಡಿಸಿ ಸೂಚನೆ

ತುಮಕೂರು, ಆ. ೪- 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಕುರಿತು ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.

ಇಲ್ಲಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ಮುಂಬರುವ ಆ. 15 ರಂದು ನಡೆಯುವ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಗೊಳಿಸಲು ಅಧಿಕಾರಿಗಳ ನೇತೃತ್ವದ 7 ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ, ಪೊಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯ ಪೆರೇಡ್ ಸಮಿತಿ, ಡಿಡಿಪಿಐ, ತುಮಕೂರು ಇವರ ಅಧ್ಯಕ್ಷತೆಯಲ್ಲಿ ಕವಾಯತು ಸಮಿತಿ, ಜಿ.ಪಂ.  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಕ್ರೀಡಾಂಗಣ ಸಮಿತಿ, ಟೂಡಾ ಆಯುಕ್ತರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಸಮಿತಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯನ್ನು ರಚಿಸಿ, ಈ ಸಮಿತಿಗಳ ಉಸ್ತುವಾರಿಯಲ್ಲಿ ಈ ರಾಷ್ಟ್ರೀಯ ಹಬ್ಬವನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಯಿತು.
ಕಳೆದ ಬಾರಿಗಿಂತ ಈ ಬಾರಿ ಸ್ವಾತಂತ್ರ್ಯೋತ್ಸವ ಪೆರೆಡ್‍ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹೆಚ್ಚು ತಾಲೀಮು ನಡೆಸಿ, ಉತ್ತಮ ಪ್ರದರ್ಶನ ನೀಡುವಂತೆ ನಿಗಾವಹಿಸಿ ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಪೊಲೀಸ್ ಎನ್‍ಸಿಸಿ ಸ್ಕೌಟ್ಸ್ ಅಂಡ್ ಗೈಡ್ಸ್ ಸೇರಿದಂತೆ ಪೆರೆಡ್‍ನಲ್ಲಿ 26 ತಂಡಗಳು ಕವಾಯಿತಿನಲ್ಲಿ ಭಾಗವಹಿಸಲಿವೆ ಎಂದರು.

ಸ್ವಾತಂತ್ರ್ಯ ದಿನಾಚರಣೆ ನಡೆಯುವ ನಗರದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಸುಣ್ಣಬಣ್ಣದಿಂದ ಸುಂದರಗೊಳಿಸಬೇಕು. ಕಾರ್ಯಕ್ರಮದ ಸಿದ್ಧತೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಸ್ವಾತಂತ್ರ್ಯ ಧ್ವಜವನ್ನು ನಿಯಮಾನುಸಾರ ಹಾಗೂ ಶಿಷ್ಟಾಚಾರದಂತೆ ಯಾವುದೇ ಅವಘಡಗಳಿಗೆ ಎಡೆ ಮಾಡದೆ ಧ್ವಜವನ್ನು (ಬಾವುಟ) ಕಟ್ಟುವ ಪರಿಣಿತಿಯನ್ನು ಹೊಂದಿರುವವರ ಮೇಲುಸ್ತುವಾರಿಯಲ್ಲಿ ಧ್ವಜಾರೋಹಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಇದರ ಮೇಲುಸ್ತುವಾರಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ವಹಿಸಿಕೊಂಡು ಅವರ ನಿಗಾದಲ್ಲಿ ಧ್ವಜವನ್ನು ಕಟ್ಟಲು ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು.

ಅಂದು ಸಂಜೆ 4.30 ಗಂಟೆಗೆ ಗ್ಲಾಸ್‍ಹೌಸ್‍ನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತ ಮತ್ತು ಕರ್ನಾಟಕದ ಪರಂಪರೆ ಹಾಗೂ ಸ್ವಾತಂತ್ರ್ಯದ ಚರಿತ್ರೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ ವಹಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಆ. 15 ರಂದು ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಬೇಕು ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸುವ ಸ್ವಾತಂತ್ರ್ಯ ದಿನಾಚರಣೆಯ ಬೆಳಗಿನ ಹಾಗೂ ಸಂಜೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಪ್ಪದೇ ಭಾಗವಹಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿದ್ದತಾ ಕಾರ್ಯಗಳನ್ನು ಮೂರು ದಿನಗಳ ಮುಂಚಿತವಾಗಿ ಆರಂಭಿಸಿ ಒಂದು ವಾರಗಳ ಕಾಲ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಕಛೇರಿಯಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಬೇಕು. ಸರ್ಕಾರಿ ಕಛೇರಿ ಹಾಗೂ ಕಚೇರಿ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾಗೋಪಿನಾಥ್, ಉಪವಿಭಾಗಾಧಿಕಾರಿ ಶಿವಕುಮಾರ್, ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Comment