ಸ್ವಾತಂತ್ರ್ಯೋತ್ಸವಕ್ಕೆ ಬಿಗಿ ಭದ್ರತೆ

ಬೆಂಗಳೂರು, ಆ. ೧೩- ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಗಾಗಿ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದು, ಧ್ವಜಾರೋಹಣದ ವೇಳೆ ಪುಷ್ಪ ವೃಷ್ಟಿಗಾಗಿ ವಾಯುಪಡೆಯ ಹೆಲಿಕಾಪ್ಟರ್  ಸಜ್ಜುಗೊಳಿಸಲಾಗಿದೆ.

ಪಥ ಸಂಚಲನದಲ್ಲಿ ಗೋವಾ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ. ಸೇವಾದಳ, ವಿವಿಧ ಶಾಲೆ ಮಕ್ಕಳನ್ನೊಳಗೊಂಡಂತೆ, ಬ್ಯಾಂಡ್‌ನ 34 ತುಕಡಿಗಳಲ್ಲಿ 1,130 ಜನ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 2 ಸಾವಿರ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತರಿಗೆ ಮುಖ್ಯಮಂತ್ರಿಗಳು ಬಹುಮಾನ ವಿತರಿಸಲಿದ್ದಾರೆ.

ನಾಡಗೀತೆ, ರೈತಗೀತೆ, ಯೋಗ, ದೇಶಭಕ್ತ ಮೈಲಾರ ಮಹದೇವ, ಜೈಹಿಂದ್ ಜೈಭಾರತ್, ಜಿಮ್ಯಾಸ್ಟಿಕ್, 39 ಸದಸ್ಯರಿಂದ ಮೋಟಾರ್ ಸೈಕಲ್ ಪ್ರದರ್ಶನ ನಡೆಯಲಿದೆ.

ವಿಶೇಷ ವರ್ಗದವರಿಗೆ ಆಹ್ವಾನ

ಈ ಬಾರಿ ವಿಶೇಷ ವರ್ಗದವರನ್ನು ಸ್ವಾತಂತ್ರ್ಯೋತ್ಸವ ವೀಕ್ಷಣೆಗೆ ಆಹ್ವಾನಿಸಲಾಗಿದೆ. ಲೈಂಗಿಕ ಅಲ್ಪಸಂಖ್ಯಾತರು, ಹೆಚ್.ಐ.ವಿ. ಪೀಡಿತರು, ಅನಾಥ ಮಕ್ಕಳು, ವಯೋ ವೃದ್ಧರು, ಬುದ್ಧಿಮಾಂದ್ಯರು, ಅಂಗವಿಕಲರು ಹಾಗೂ ವಿವಿಧ ಜಿಲ್ಲೆಗಳಿಂದ ಕೃಷಿಯಲ್ಲಿ ಸಾಧನೆಗೈದ ರೈತಾಪಿ ವರ್ಗದವರನ್ನು ಆಹ್ವಾನಿಸಲಾಗಿದೆ.

ಸೂಕ್ತ ಬಂದೊಬಸ್ತ್

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೈದಾನದ ಭದ್ರತೆ ಮತ್ತು ಸುರಕ್ಷತೆಗೆ 50 ಸಿಸಿ ಕ್ಯಾಮರಾಗಳು, ನಾಲ್ಕು ಪ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರಿ ನಿಯಂತ್ರಣ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ನಗರದ ಎಲ್ಲಾ ವಿಭಾಗಗಳಿಂದ 9 ಡಿಸಿಪಿ, 16 ಎಸಿಪಿ, 46 ಪಿಐ, 102 ಪಿಎಸ್‌ಐ, 77 ಎ‌ಎಸ್‌ಐ, 540 ಮುಖ್ಯಪೇದೆಗಳು, 75 ಮಹಿಳಾ ಸಿಬ್ಬಂದಿ, 114 ಸಾದಾ ಉಡುಪಿನ ಅಧಿಕಾರಿ ಮತ್ತು ಸಿಬ್ಬಂದಿ, ಕ್ಯಾಮರಾ ನಿರ್ವಹಣೆಗಾಗಿ 56 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಸಂಚಾರಿ ನಿರ್ವಹಣೆಗಾಗಿ 2 ಡಿಸಿಪಿ, 7 ಎಸಿಪಿ, 24 ಪೊಲೀಸ್ ಸಬ್ ‌ಇನ್ಸ್‌ಪೆಕ್ಟರ್, 38 ಆರಕ್ಷಕ ನಿರೀಕ್ಷಕರು, 61 ಎ‌ಎಸ್‌ಐ, 263 ಮುಖ್ಯಪೇದೆ ಹಾಗೂ ಪೇದೆಗಳು ಸೇರಿದಂತೆ, 1,500 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

9 ಕೆಎಸ್‌ಆರ್‌ಪಿ, 5 ಪಿಎ‌ಆರ್ ತುಕಡಿ, 3 ಅಗ್ನಿಶಾಮಕ ವಾಹನ, 2 ಆಂಬ್ಯುಲೆನ್ಸ್, 2 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಬಿ ಸ್ಮಾರ್ಟ್, 1 ಆರ್.ಐ.ವಿ, 1 ಗರುಡಾ ಫೋರ್ಸ್ ಅನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮೈದಾನಕ್ಕೆ ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರ, ಬಣ್ಣದ ದ್ರಾವಣ, ವಿಡಿಯೊ ಮತ್ತು ಸ್ಟಿಲ್ ಕ್ಯಾಮರಾ, ನೀರಿನ ಬಾಟಲ್, ಶಸ್ತ್ರಾಸ್ತ್ರಗಳು, ಕಪ್ಪು ಕರವಸ್ತ್ರ, ಹರಿತವಾದ ವಸ್ತುಗಳು, ಮದ್ಯದ ಬಾಟಲಿಗಳು, ಬಾವುಟ, ಪಟಾಕಿ ಸ್ಫೋಟಕಗಳನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಕಸ್ಮಿಕ ವಿಪತ್ತು ಸಂಭವಿಸಿದರೆ, ತಕ್ಷಣ ಪ್ರತಿಕ್ರಿಯಿಸಲು ಅಗತ್ಯ ಸಂಖ್ಯೆಯ ಆಂಬ್ಯುಲೆನ್ಸ್‌ಗಳು, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಲಾಗಿದೆ. ಇನ್ನುಳಿದಂತೆ ಚಿಕಿತ್ಸೆಗಾಗಿ ನಗರದ ಹಲವು ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎಂ. ವಿಜಯ್ ಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಚಾರಿ ವ್ಯವಸ್ಥೆ ಬದಲು

ಹಳದಿ ಪಾಸ್ ಹೊಂದಿರುವವರು ಕಬ್ಬನ್ ರಸ್ತೆಯಲ್ಲಿ ಸಂಚರಿಸಿ, ಪ್ರವೇಶ ದ್ವಾರ 1ರ ಮೂಲಕ ಪ್ರವೇಶಿಸಬಹುದಾಗಿದೆ. ಬಿಳಿ ಕಾರ್ ಪಾಸ್‌ಗಳನ್ನು ಹೊಂದಿರುವ ಗಣ್ಯರು, ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ರಕ್ಷಣಾ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಕಬ್ಬನ್ ರಸ್ತೆಯಲ್ಲಿ ಸಂಚರಿಸಿ ಮೈದಾನದ ಪ್ರವೇಶ ದ್ವಾರ 2ರ ಮೂಲಕ ಒಳಪ್ರವೇಶಿಸಬಹುದಾಗಿದೆ.

ಪಿಂಕ್ ಪಾಸ್‌ಗಳನ್ನು ಹೊಂದಿರುವವರು ತಮ್ಮ ವಾಹನಗಳನ್ನು ಮೈನ್ ಗಾರ್ಡ್ ಕ್ರಾಸ್ ರಸ್ತೆ, ಸಫೀನಾ ಪ್ಲಾಜಾ ಮುಂಭಾಗ, ಕಾಮರಾಜ ರಸ್ತೆ ಆರ್.ವಿ. ಪಬ್ಲಿಕ್ ಶಾಲೆ ಮುಂಭಾಗ ಮತ್ತು ಆರ್.ಎಸ್.ಎಸ್. ಗೇಟ್ ಮುಂಭಾಗ ವಾಹನಗಳನ್ನು ನಿಲುಗ‌ಡೆ ಮಾಡಿ ಪ್ರವೇಶ ದ್ವಾರ 3ರ ಮೂಲಕ ಪ್ರವೇಶಿಸಬಹುದು.

ಆಂಬ್ಯುಲೆನ್, ಅಗ್ನಿಶಾಮಕ, ನೀರಿನ ಟ್ಯಾಂಕರ್, ಕೆ.ಎಸ್.ಆರ್.ಪಿ, ಸಿ.ಆರ್.ಟಿ, ಬಿಬಿಎಂಪಿ, ಇತರ ವಾಹನಗಳು, ಪ್ರವೇಶ ದ್ವಾರ 1ರ ಮೂಲಕ ಪ್ರವೇಶಿಸಿ ದಕ್ಷಿಣದ ಕಡೆಗೆ ವಾಹನ ನಿಲುಗಡೆ ಮಾಡಬಹುದಾಗಿದೆ.

Leave a Comment