ಸ್ವರ್ಗದಲ್ಲಿ ಮದುವೆ! ಹೀಗೊಂದು ಸರಳ ಅಂತರ್ಜಾತೀಯ ವಿವಾಹ

ಲಕ್ಷ್ಮೇಶ್ವರ,ಅ30-ಹೆಣ್ಣಿಗೊಂದು ಗಂಡು ಎನ್ನುವಂತೆ ಮತ್ತು ವಿವಾಹ ಬಂಧ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬುದಕ್ಕೆ ಸೋಮವಾರ ಪಟ್ಟಣದ ಕದರಗೇರಿ ಓಣಿಯ ಶಿವರುದ್ರಮ್ಮ ದೇವಸ್ಥಾನದಲ್ಲಿ ನಡೆದ ಅಂತರ್ಜಾತಿ ಸರಳ ವಿವಾಹವೇ ಸಾಕ್ಷಿ.

 
ಕದರಗೇರಿ ಓಣಿಯಲ್ಲಿನ ಅನೇಕ ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸುಮಂಗಲಾ ಊರ್ಪ ಮೆಹರಬಾನು ಖ್ವಾಜಾಹುಸೇನ್ ಅಕ್ಕಿ ಅವಳು ಶಿಗ್ಗಾಂವಿಯ ವೀರಪ್ಪ ಬಸಪ್ಪ ಕಳಸ ಅವರ ಕೈಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಡುವ ಶುಭಗಳಿಗೆಗೆ ಓಣಿಯ ಜನರು ಸಾಕ್ಷಿಯಾದರು.

 

 
ಸುಮಂಗಲಾ ಮೂಲತ: ಸವಣೂರು ಗ್ರಾಮದವಳಾಗಿದ್ದು ತಾಯಿ ಇಲ್ಲದ ಇವಳನ್ನು ತಂದೆ ಎಂಬ ಕಠೋರ ಹೃದಯಿ 15 ವರ್ಷಗಳ ಹಿಂದೆ ಲಕ್ಷ್ಮೇಶ್ವರದ ಬಸ್‍ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದನಂತೆ. ಆನಾಥಳಾದ  ಇವಳು ಹಲವಾರು ಕಷ್ಟ ನೋವುಗಳ ನಡುವೆ ಜೀವನೋಪಾಯಕ್ಕಾಗಿ ನಾಲ್ಕಾರು ಮನೆಯವರ ಕಸ, ಮುಸರಿ, ಬಟ್ಟೆ ತೊಳೆದು ಬದುಕು ಕಟ್ಟಿಕೊಂಡಿದ್ದಾಳೆ. ಕಳೆದ 5-6 ವರ್ಷದಿಂದ ಇಲ್ಲಿನ ಕದರಗೇರಿ ಓಣಿಯ ಜನರ ಸಹಾಯ ಸಹಕಾರದಿಂದ ಸಣ್ಣದೊಂದು ಬಾಡಿಗೆ ಮನೆಯಲ್ಲಿ ವಾಸವಾಗಿ ಅವರಿವರ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಾಳೆ. ಎಲ್ಲರ ಪ್ರೀತಿ,ವಿಶ್ವಾಸಕ್ಕೆ ಪಾತ್ರಳಾದ 27 ವರ್ಷದ ಸುಮಂಗಲಾ ಒಬ್ಬಂಟಿತನದ ಬದುಕಿಗೊಂದು ಆಸರೆಗಾಗಿ ಮದುವೆಯಯಾಗು ಎಂಬ ಹಿರಿಯರ ಸಲಹೆಗೆ ಸಹಮತ ಸೂಚಿಸಿದ್ದರ ಹಿನ್ನಲೆಯಲ್ಲಿ ಇವಳಿಗೊಂದು ಗಂಡು ಹುಡುಕುವ ವಿಚಾರವನ್ನು ಹರಿಬಿಟ್ಟಿದ್ದಾರೆ. ಓಣಿಯ ಹಿರಿಯರು ಸೇರಿಕೊಂಡು ಶಿಗ್ಗಾಂವಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ವೀರಣ್ಣನಿಗೆ ಈ ಕನ್ನೆಯನ್ನು ತೋರಿಸಲಾಗಿ ಹುಡುಗನ ಮನೆಯಲ್ಲಿ ಒಪ್ಪಿಕೊಂಡ ಬಳಿಕ ಓಣಿಯ ಹಿರಿಯರೇ ಎಲ್ಲವನ್ನೂ ಪರಾಮರ್ಶಿಸಿ ಮದುವೆಯನ್ನು ನಿಶ್ಚಯಿಸಿದ್ದಾರೆ.

 

 
ನಿಗದಿಯಂತೆ ಕದರಗೇರಿ ಓಣಿಯ ನಾಗರಿಕರೇ ಸುಮಂಗಲಾಳ ತಂದೆ ತಾಯಿ, ಬಂಧು ಬಳಗವಾಗಿ ನಿಂತು ಕನ್ಯಾದಾನ ಮಾಡಿಕೊಟ್ಟಿದ್ದಾರೆ. ಸೋಮವಾರ ಶಿವರುದ್ರಮ್ಮ ದೇವಿ ಸಾಕ್ಷಿಯಾಗಿ ವರ ವೀರಣ್ಣನ ಬಂಧು ಮತ್ತು ಆಪ್ತರು ಆಗಮಿಸಿ ಆಡಂಬರವಿಲ್ಲದ ಸರಳ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡರು. ಅನಾಥೆಯಾದ ನನಗೆ ಓಣಿಯ ಜನರೇ ತಂದೆ-ತಾಯಿ, ಅಣ್ಣ-ತಮ್ಮ, ಬಂಧು ಬಳಗವಾಗಿ ಸಂಪ್ರದಾಯದಂತೆ ಎಲ್ಲರೂ ನಿಂತು ತಮ್ಮ ಮನೆಯ ಮಗಳಂತೆ ವಿವಾಹ ಮಾಡಿ ತನ್ನ ಬದುಕಿಗೊಂದು ಆಸರೆ ಕಲ್ಪಿಸಿರುವುದು ನನ್ನ ಸೌಭಾಗ್ಯ. ನನಗೆ ಹೃದಯ ತುಂಬಿ ಬಂದಿದೆ. ಈ ಜನರ ಪ್ರೀತಿ, ವಿಶ್ವಾಸ, ಮಾನವೀಯತೆಗೆ ಋಣಿಯಾಗಿ ಬದುಕುತ್ತೇನೆ ಎಂದು ನವವಧು ಆನಂದ ಸುಮಂಗಲಾ ಊರ್ಪಮೆಹರಭಾನು ಭಾಷ್ಪ ಸುರಿಸಿದಳು. ತಾನೂ ಸಹ ಅತ್ಯಂತ ಆತ್ಮಸಂತೋಷದಿಂದ ಈ ವಿವಾಹಕ್ಕೆ ಒಪ್ಪಿದ್ದು ಮದುವೆ ನಂತರ ಸುಮಂಗಲಾಳನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ ಎಂದು ವರ ವೀರಣ್ಣ ಹೇಳಿದನು.

 

 
ಈ ಹಿಂದೆ ಕದರಗೇರಿ ಓಣಿಯಲ್ಲಿಯೇ ವಿಕಲಚೇತನರೀರ್ವರ ವಿವಾಹವನ್ನು ಸಹ ಅದ್ದೂರಿಯಾಗಿ ನಡೆಸಿಕೊಟ್ಟಿರುವದನ್ನು ಸಹ ಇಲ್ಲಿ ಸ್ಮರಿಸಬಹುದು. ಓಣಿಯ ಹಿರಿಯರಾದ ದುಂಡಪ್ಪ ಬಟ್ಟೂರ, ಆನಂದ ಲಿಂಗಶೆಟ್ಟಿ, ಶಿವಜೋಗೆಪ್ಪ ಚಂದರಗಿ, ಪುಟ್ಟರಾಜ, ಸೋಮಯ್ಯ ಕಲ್ಮಠ, ರಾಮಣ್ಣ ಹತ್ತಿ, ಫಕ್ಕೀರಪ್ಪ ಅಡರಕಟ್ಟಿ, ನಿಂಗಪ್ಪ ಹುರಕನವರ, ಗಂಗಪ್ಪ ಲಿಂಗಶೆಟ್ಟಿ, ಜಗದೀಶ ಲಿಂಗಶೆಟ್ಟಿ, ಹಿರೇಹರಕುಣಿಯ ಮಹಾದೇವಪ್ಪ ಕುನ್ನೂರು, ಓಣಯ ಮಹಿಳೆಯರು ಮತ್ತಿತರ ಹಿರಿಯರು ಮದುವೆಯಲ್ಲಿ ಹಾಜರಿದ್ದು ನೂತನ ವಧುವರರಿಗೆ ಶುಭಹಾರೈಸಿದರು. ಮದುವೆಗೆ ಬೂಂದಿ, ಅನ್ನ ಸಾರು ಮಾಡಿ ಎಲ್ಲರೂ ಸೇರಿ ಮದುವೆಯೋಟ ಸವಿದು ಸಂಜೆ ಓಣಿಯ ಮಗಳನ್ನು ವರನ ಮನೆಗೆ ಸಾಂಪ್ರದಾಯಿಕವಾಗಿ ಕಳುಹಿಸಿಕೊಟ್ಟರು.

 

 
ಸುಮಂಗಲಾ ಓಣಿಯ ಮಗಳಾಗಿ ಅವರಿವರ ಮನೆಯ ಕೆಲಸ ಮಾಡಿ ಎಲ್ಲರ ಪ್ರೀತಿ, ವಿಸ್ವಾಸ, ನಂಬಿಕೆಗೆ ಪಾತ್ರಳಾಗಿದ್ದಳು.  ಅವಳಿಗೊಂದು ಮದುವೆ ಮಾಡಿಸುವ ಜವಾಬ್ದಾರಿ ಹೊತ್ತುಕೊಂಡು ಎಲ್ಲರ ನಿರ್ಧಾರದಂತೆ ವರ ಹುಡುಕಿ ಮದುವೆ ಮಾಡಿರುವುದು ನಮಗೂ ಒಂದು ಪುಣ್ಯದ ಕಾರ್ಯ ಮಾಡಿದ ಸಂತೃಪ್ತಿ ತಂದಿದೆ. ಎಲ್ಲ ರೀತಿಯಿಂದಲೂ ಕಾನೂನು ಬದ್ಧ, ಸರ್ವಒಪ್ಪಿತವಾದ ಈ ಮದುವೆಯನ್ನು ಹಿಂದೂ ಮುಸ್ಲಿಂ ಸಮಾಜದ ಬಾಂಧವರ ಒಪ್ಪಿಗೆ ಮೆರೆಗೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಸಹ ಮಾಡಿಸಲಾಗಿದೆ. ನವವಧುವರರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹೇಳುತ್ತಾರೆ. ಓಣಿಯ ಹಿರಿಯರಾದ ಶಿವಜೋಗೆಪ್ಪ.

Leave a Comment