ಸ್ವಪಕ್ಷ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಶಾಸಕ ಎಸ್‍ ಆರ್ ಶ‍್ರೀನಿವಾಸ್ ತಿರುಗೇಟು

ತುಮಕೂರು, ಸೆ 12 – ಸಮಾಜ ಹಾಗೂ ಡಿ ಕೆ ಶಿವಕುಮಾರ್  ಬಗ್ಗೆ ಪ್ರೀತಿಯಿದ್ದವರು   ಒಕ್ಕಲಿಗರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಮೂಲಕ ಗುಬ್ಬಿ ಜೆಡಿಎಸ್ ಶಾಸಕ ಎಸ್‍ ಆರ್ ಶ‍್ರೀನಿವಾಸ್,  ಸ್ವಪಕ್ಷ ನಾಯಕ ಮಾಜಿ  ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಗೆ ತಿರುಗೇಟು ನೀಡಿದ್ದಾರೆ

ಯುಎನ್‍ಐ ಕನ್ನಡ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಅವರು, ಸಮಾಜ ಹಾಗೂ ಶಿವಕುಮಾರ್ ಅವರ ಮೇಲೆ ಪ್ರೀತಿ ಇದ್ದವರು ಪ್ರತಿಭಟನೆ ಹೋಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಪ್ರತಿಭಟನೆಗೆ ಬರಬೇಕು ಎಂಬುದೇನೂ ಇಲ್ಲ. ಶಿವಕುಮಾರ್ ನಮ್ಮ ಸಮುದಾಯದ ನಾಯಕ. ಸಮುದಾಯದ ನಾಯಕನಿಗೆ ಅನ್ಯಾಯವಾದಾಗ ಪ್ರತಿಭಟಿಸುವುದು ನಮ್ಮೆಲ್ಲರ ಕರ್ತವ್ಯ. ಇದಕ್ಕೆಲ್ಲ ಆಮಂತ್ರಣ ಕೊಟ್ಟು ಕರೆಯುವ ಅವಶ್ಯಕತೆಯಿಲ್ಲ ಎಂದು ವ್ಯಂಗ್ಯವಾಡಿದರು.

ಗ್ರಾಮೀಣ ಪ್ರದೇಶ ಸೇರಿದಂತೆ ಬಹುತೇಕ ಕಡೆ ಒಕ್ಕಲಿಗರಲ್ಲಿ ಪ್ರತಿಷ್ಠೆ ಜಾಸ್ತಿ. ಸಮುದಾಯಕ್ಕೆ ಅನ್ಯಾಯವಾದಾಗ ಸ್ವಪ್ರತಿಷ್ಠೆ ಬಿಟ್ಟು ಹೋರಾಡುವುದು ಮುಖ್ಯ ಎಂದರು.

ಎಸ್‍.ಆರ್.ಶ್ರೀನಿವಾಸ್, ಮೈತ್ರಿ ಸರ್ಕಾರದಲ್ಲಿ ದೂರವಾಣಿ ಕದ್ದಾಲಿಕೆ ನಡೆದಿರಲುಬಹುದು. ತಮ್ಮ ಫೋನ್ ಕೂಡ ಕದ್ದಾಲಿಕೆ ಮಾಡಲಾಗಿದೆ. ಫೋನ್ ಕದ್ದಾಲಿಕೆ ಆಗುತ್ತಿರುವುದು ನಿಜ. ಈ ಬಗ್ಗೆ ಗೊತ್ತಾದಾಗ ಫೋನ್ ಬದಲಿಸಿದೆ. ತಾವು ಮೈತ್ರಿ ಸರ್ಕಾರದ ಭಾಗವಾಗಿದ್ದರೂ ಸಹ ನನ್ನ ಮೇಲೆ ಅನುಮಾನ ಪಡಲಾಗಿತ್ತು ಎಂದು ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಮತ್ತೊಮ್ಮೆ ಗದಾಪ್ರಹಾರ ನಡೆಸಿದರು.

ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಒಕ್ಕಲಿಗರು ನಡೆಸಿದ ಪ್ರತಿಭಟನೆಗೆ ತಮಗೆ  ಆಹ್ವಾನ ಇರಲಿಲ್ಲ. ಹೀಗಾಗಿ ಪ್ರತಿಭಟನೆಗೆ ಹೋಗಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿಕೆ  ನೀಡಿದ್ದರು.

ಕೆಲವು ದಿನಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರ ಬೆಂಬಲಕ್ಕೆ  ನಿಂತಿರುವ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಕೆಲ ಜೆಡಿಎಸ್ ಶಾಸಕರು ಕಾಂಗ್ರೆಸ್  ಸೇರ್ಪಡೆಗೊಳ್ಳುವ ವಿಚಾರ ಕುರಿತು ಚರ್ಚಿಸುವ ಸಂಬಂಧ ಮಲೇಷಿಯಾಕ್ಕೆ ತೆರಳಿದ್ದರು.

Leave a Comment