ಸ್ವಚ್ಛ ಭಾರತ ಹೇಳೋದೊಂದು ಮಾಡೋದೊಂದು

ಬಳ್ಳಾರಿ, ಸೆ.6: ಸ್ವಚ್ಛಭಾರತ, ಸ್ವಚ್ಛ ಬಳ್ಳಾರಿ, ಸ್ವಚ್ಛ ನಗರ ಎಂದು ಫಲಕ ಹಿಡಿದು ಘೋಷಣೆಗಳನ್ನು ಕೂಗುತ್ತ, ಕಾಲೇಜಿನ ವಿದ್ಯಾರ್ಥಿಗಳು ಒಂದು ಕಡೆ ಸಾಗಿದರೆ ಅದೇ ಕಾಲೇಜಿನಲ್ಲಿ ಉತ್ಪತ್ತಿಯಾದ ಕಸವನ್ನು ಬೇಕಾಬಿಟ್ಟಿ ಎಸೆದು ಅಸ್ವಚ್ಛತೆಯನ್ನು ನಗರದ ಸರಳಾದೇವಿ ಕಾಲೇಜಿನಿಂದ ಕಾಣಬಹುದು.

ಅಸ್ವಚ್ಛತೆಯೇ ನಮ್ಮ ಅನಾರೋಗ್ಯಕ್ಕೆ ಮೂಲಕಾರಣ ಆಗಿದೆ. ಸ್ವಚ್ಛತೆ ಇದ್ದರೆ ಸ್ವಾಸ್ಥ್ಯ ಭಾರತವನ್ನು ಕಾಣಬಹುದೆಂದು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛಭಾರತ ಯೋಜನೆ ಜಾರಿಗೆ ತಂದರು. ಅದಕ್ಕಾಗಿ ಪ್ರತ್ಯೇಕ ತೆರಿಗೆ ವಿಧಿಸಿ ಅದರಿಂದ ಬಂದ ಕೋಟ್ಯಾಂತರ ರೂಪಾಯಿ ಹಣವನ್ನು ಸ್ವಚ್ಛತೆಗಾಗಿ ಶೌಚಾಲಯಗಳ ನಿರ್ಮಾಣ, ಕಸ ವಿಲೇವಾರಿ ಮೊದಲಾದ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ.

ಸ್ವಚ್ಛಭಾರತ ಯೋಜನೆ ಜಾರಿಗೆ ಬಂದಾಗ ಜನರಲ್ಲಿ ಜಾಗೃತಿ ಮೂಡಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ತಾವು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಮಾದ್ಯಮಗಳಲ್ಲಿ ಪ್ರಚಾರ ಪಡೆದರು, ಉಪನ್ಯಾಸವನ್ನು ನೀಡಿದರು.
ಅಂತಹವರೇ ಇಂದು ತಮ್ಮ ಕಾಲೇಜಿನಲ್ಲಿ ಸಂಗ್ರಹವಾದ ಪೇಪರ್, ಊಟದ ತಟ್ಟೆ, ಪ್ಲಾಸ್ಟಿಕ್ ಬಾಟಲಿ, ಕಪ್ ಮೊದಲಾದವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡದೆ ಕಾಲೇಜಿನ ಪಕ್ಕದ ಮೈದಾನದಲ್ಲಿ ಕಾಲೇಜಿನ ಸಿಬ್ಬಂದಿಯೇ ತಂದು ಸುರಿಯುತ್ತಿದೆ. ಹೀಗೆ ಸುರಿದ ಕಸ ಹರಡುತ್ತಿದ್ದು ದನಕರುಗಳು, ಹಂದಿಗಳು ಬಂದು ಇದನ್ನು ತಿನ್ನುತ್ತಿರುವುದಲ್ಲದೆ ಅವುಗಳ ವಾಸಸ್ಥಾನವಾಗಿದೆ.

ಜೊತೆಗೆ ಇಲ್ಲಿ ಈಗ ಎಗ್ಜಿಬಿಷನ್ ಸಹ ಬಂದಿರುವುದರಿಂದ ಅವರು ಸಹ ಕಸವನ್ನೆಲ್ಲಾ ಇಲ್ಲಿಯೇ ಹಾಕಿದಂತಿದ್ದು ಮತ್ತಷ್ಟು ಕಸದ ರಾಶಿಯೇ ಸೃಷ್ಠಿಯಾಗಿದೆ. ಹೀಗೆ ಕಸವನ್ನು ತಂದು ಇಲ್ಲಿ ಸುರಿಯುತ್ತಿರುವ ಬಗ್ಗೆ ಕಾಲೇಜಿನ ಪ್ರಾಂಶುಪಾಲರನ್ನು ಪ್ರಶ್ನಿಸಿದರೆ, ನಮ್ಮ ಕಾಲೇಜಿನಲ್ಲಿ ಆವರಣದಲ್ಲಿ ಇಟ್ಟುಕೊಳ್ಳಲು ಆಗದ ಕಾರಣ ಅಲ್ಲಿ ಸುರಿಯುತ್ತಿದೆ. ಪಾಲಿಕೆಯವರು ವಾರಕ್ಕೊಮ್ಮೆ ಬಂದು ತೆಗೆದುಕೊಂಡು ಹೋಗುತ್ತಾರೆ ಎನ್ನುತ್ತಾರೆ.

ಹಾಗಾದರೆ ಇಲ್ಲಿ ಕಳೆದ ಹಲವು ದಿನಗಳಿಂದ ಹಾಗೇ ಬಿದ್ದಿರುವ ಬಗ್ಗೆ ಕೇಳಿದರೆ ಪಾಲಿಕೆಗೆ ಫೋನ್ ಮಾಡಿ ತೆಗೆಯಲು ಹೇಳುವುದಾಗಿ ಹೇಳುತ್ತಾರೆ.
ಸುಪ್ರೀಂ ಕೋರ್ಟಿನ ಆದೇಶದಲ್ಲಿ ಕಸ ಸೃಷ್ಠಿ ಮಾಡುವ ಮನೆ, ಮಳಿಗೆ, ಕಛೇರಿಗಳು ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
ಸ್ಥಳೀಯ ಸಂಸ್ಥೆಗಳು ಕಸವನ್ನು ನಿಗದಿತವಾಗಿ ಸಂಗ್ರಹಿಸಬೇಕು. ಎಲ್ಲಂದರಲ್ಲಿ ಕಸ ಹಾಕುವವರಿಗೆ ದಂಡ ಹಾಕಲು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದೆ. ಆದರೂ ಈ ಕಾಲೇಜಿನವರು ಹೀಗೆ ಬೀಸಾಡುವುದು ಎಷ್ಟರ ಮಟ್ಟಿಗೆ ಸರಿಯೇ ಎಂಬ ಪ್ರಶ್ನೆ ಕಾಡುತ್ತದೆ.

ಈ ರೀತಿ ಅಸ್ವಚ್ಛತೆಗೆ ಈ ಕಾಲೇಜ್ ಅಷ್ಟೇ ಅಲ್ಲ ತಾಲೂಕು ಕಛೇರಿಯ ಆವರಣದಲ್ಲಿರುವ ಕಾಡಾ ಕಛೇರಿ ಹತ್ತಿರವೂ ಇದೇ ರೀತಿ ಕಸದ ರಾಶಿಯನ್ನು ಕಾಣಬಹುದಾಗಿದೆ. ಸ್ವಚ್ಛತೆ ಸ್ವಚ್ಛತೆ ಎನ್ನುವ ಸರ್ಕಾರಿ ಸಂಸ್ಥೆಗಳೇ ಹೀಗೆ ಅಸ್ವಚ್ಛತೆಯನ್ನು ಸೃಷ್ಠಿ ಮಾಡುವುದಾದರೆ, ಇನ್ನು ಜನ ಸಾಮಾನ್ಯರ ಪಾಡೇನು ಎಂಬ ಮಾತು ಸಹಜವಾಗಿ ಉದ್ಭವವಾಗುತ್ತಿದೆ.

Leave a Comment