ಸ್ವಚ್ಛ ಭಾರತ : ಫೈಬರ್ ಶೌಚಾಲಯ – ಆಕ್ಷೇಪ

ರಾಯಚೂರು.ಸೆ.11- ಸ್ವಚ್ಛ ಭಾರತ ಯೋಜನೆಯಡಿ ಮನೆಗೊಂದು ಶೌಚಾಲಯ ನಿರ್ಮಾಣ ಯೋಜನೆಯಡಿ ಫ್ಯಾಬ್ರಿಕೇಟೆಡ್ ಫೈಬರ್ ಶೌಚಾಲಯ ಅಳವಡಿಕೆ ಸ್ಥಳೀಯರ ಆಕ್ಷೇಪಣೆಗೆ ಕಾರಣವಾಗಿದೆ.
ಅ.2ಕ್ಕೆ ಎಲ್ಲಾ ವೈಯಕ್ತಿಕ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕೆಂದು ಸೂಚನೆಗಳಿವೆ. ಈಗಾಗಲೇ ಕೆಲವೆಡೆ ಇಟ್ಟಿಗೆ ಮತ್ತು ಸಿಮೆಂಟ್ ಸ್ಲ್ಯಾಬ್ ಮೂಲಕ ಶೌಚಾಲಯ ನಿರ್ಮಿಸಲಾಗಿದೆ. ಉದ್ದೇಶಿತ ಗುರಿ ತಲುಪಲು ಸಮಯ ಅವಕಾಶದ ಕೊರೆತೆ ಹಿನ್ನೆಲೆಯಲ್ಲಿ ಫ್ಯಾಬ್ರಿಕೇಟೆಡ್ ಫೈಬರ್ ಶೌಚಾಲಯ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಆದರೆ, ಈ ಶೌಚಾಲಯದ ಬಾಳಿಕೆಯ ಬಗ್ಗೆ ಅನೇಕ ಅನುಮಾನಗಳು ತಲೆಯೆತ್ತುವಂತೆ ಮಾಡಿದೆ.
ಜಿಲ್ಲೆಯಲ್ಲಿ 43ರವರೆಗೂ ಬಿಸಿಲಿನ ತಾಪಮಾನದ ಹಿನ್ನೆಲೆಯಲ್ಲಿ ಈ ತಾಪಮಾನವನ್ನು ತಡೆಯುವ ಸಾಮರ್ಥ್ಯ ಫ್ಯಾಬ್ರಿಕೇಟೆಡ್ ಫೈಬರ್ ಶೌಚಾಲಯಕ್ಕೆ ಜಿಲ್ಲಾ ಎನ್ನುವುದು ಆಕ್ಷೇಪದ ಪ್ರಮುಖ ಕಾರಣವಾಗಿದೆ. ವಾರ್ಡ್ 11ರ ರತ್ನಪ್ರಶಾಂತಿ ಅವರು ಆಕ್ಷೇಪವೆತ್ತಿದ್ದಾರೆ. ಕೇವಲ ಸ್ವಚ್ಛ ಭಾರತ ಗುರಿ ಸಾಧನೆ ಉದ್ದೇಶಕ್ಕೆ ಈ ರೀತಿ ಶೌಚಾಲಯ ಅಳವಡಿಕೆ ಸಾರ್ವಜನಿಕರಿಗೆ ಅನಕೂಲಕರವಾಗದೆ, ಕೇವಲ ಗುತ್ತೇದಾರರಿಗೆ ಅನುಕೂಲವಾಗಲಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ, ಫೈಬರ್ ಶೌಚಾಲಯ ನಿರ್ಮಾಣ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 15 ಸಾವಿರ ರೂ. ನಿಗದಿ ಪಡಿಸಲಾಗಿದೆ. ಆದರೆ, ಫೈಬರ್ ಶೌಚಾಲಯಕ್ಕೆ ಕೇವಲ 3 ರಿಂದ 5 ಸಾವಿರ ವೆಚ್ಚವಾಗಲಿದೆ. ಜಿಲ್ಲೆಯ ವಾತಾವರಣಕ್ಕೆ ಈ ಫೈಬರ್ ಶೌಚಾಲಯ ಸೂಕ್ತವಲ್ಲವೆನ್ನುವುದು ರತ್ನಪ್ರಶಾಂತಿ ಅವರ ಆಕ್ಷೇಪವಾಗಿದೆ.
ಈಗಾಗಲೇ ಸುಮಾರು 500 ರಿಂದ 600 ಫೈಬರ್ ಶೌಚಾಲಯ ಅಳವಡಿಕೆ ಕಾರ್ಯ ನಡೆದಿದೆ. ತಕ್ಷಣವೇ ಇದನ್ನು ಸ್ಥಗಿತಗೊಳಿಸದಿದ್ದರೆ, ಉದ್ದೇಶಿತ ಯೋಜನೆ ಕೇವಲ ತಾತ್ಕಾಲಿಕವಾಗಿ ಬಳಕೆಯಾಗದಂತಾಗುತ್ತಿದೆ ಎನ್ನುವುದು ಅವರ ಆರೋಪವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

Leave a Comment