`ಸ್ವಚ್ಛ ಭಾರತ’ ಕೈಜೋಡಿಸಲು ಸಚಿವರಿಗೆ ಮೋದಿ ಸೂಚನೆ

ನವದೆಹಲಿ, ಸೆ. ೧೩- ಸ್ವಚ್ಛ ಭಾರತ್ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗುವಂತೆ ಪ್ರಧಾನಿ ಮೋದಿ ತನ್ನ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಸೂಚಿಸಿದ್ದಾರೆ.
ನಿನ್ನೆ ತಮ್ಮ ಅಧ್ಯಕ್ಷತೆಯಲ್ಲಿ ನಡೆಸಿದ ಸಚಿವ ಸಂಪುಟದ ಸಭೆಯಲ್ಲಿ ಈ ಕುರಿತಂತೆ ಸಚಿವ ಸಹೋದ್ಯೋಗಿಗಳೊಂದಿಗೆ ಚರ್ಚಿಸಿದ ಪ್ರಧಾನಿ ಮೋದಿ, ಇದೇ ತಿಂಗಳು 15 ರಿಂದ ಆರಂಭವಾಗುವ ಸ್ವಚ್ಛತೆ ಪಾಕ್ಷಿಕ ಕಾರ್ಯಕ್ರಮದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದಿದ್ದಾರೆ.
ಸ್ವಚ್ಛತಾ ಸಪ್ತಾಹ ಸೆ. 15 ರಿಂದ ಅಕ್ಟೋಬರ್ 2ರವರೆಗೆ ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ.
ಪ್ರಧಾನಿ ಮೋದಿ ಅವರು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ್ ಅಭಿಯಾನವನ್ನು ಅಕ್ಟೋಬರ್ 2, 2014 ರಲ್ಲಿ ಪ್ರಾರಂಭಿಸಿದರು.
ದೆಹಲಿಯ ರಾಜ್‌ಘಾಟ್‌ನಲ್ಲಿ ಆರಂಭವಾದ ಈ ಸ್ವಚ್ಛತಾ ಅಭಿಯಾನ ದೇಶದಾದ್ಯಂತ ಚಾಲನೆಗೆ ಬಂದಿದೆ. ಬೀದಿಗಳು, ರಸ್ತೆಗಳು, ಮೂಲ ಸೌಕರ್ಯ ಸ್ಥಳಗಳನ್ನು ಸ್ವಚ್ಛವಾಗಿರಿಸುವುದು ಇದರ ಮುಖ್ಯಗುರಿ. ಈ ಗುರಿ ಸಾಧನೆಯನ್ನು ಸಾಕಾರಗೊಳಿಸಲು ಕಾರ್ಯಕ್ರಮ ಜಾರಿಯನ್ನು ಗ್ರಾಮೀಣ ಭಾಗ ಮತ್ತು ಪಟ್ಟಣ ಪ್ರದೇಶದಲ್ಲಿ ಜಾರಿಗೆ ತರಲಾಗಿದ್ದು, ಗ್ರಾಮೀಣ ಭಾಗದ ಸ್ವಚ್ಛತಾ ಕಾರ್ಯವನ್ನು ಕುಡಿಯುವ ನೀರು ಸಚಿವಾಲಯದ ಅಡಿಯಲ್ಲಿ ಮತ್ತು ಪಟ್ಟಣ ಪ್ರದೇಶದ ಸ್ವಚ್ಛತಾ ಕಾರ್ಯವನ್ನು ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಜಾರಿಗೆ ತರಲಾಗಿದೆ.
ಗುರಿ
ಅಕ್ಟೋಬರ್ 2, 2019ರ ವೇಳೆಗೆ ಬಯಲು ಶೌಚಾಲಯ ಮುಕ್ತ ಭಾರತವನ್ನಾಗಿಸುವುದು ಮತ್ತು ಒಟ್ಟು 1.04 ಕೋಟಿ ಕುಟುಂಬಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವುದು ಈ ಯೋಜನೆಯ ಮುಖ್ಯಗುರಿ. ಈಗಾಗಲೇ ಈ ಗುರಿಯನ್ನು ಹಲವು ರಾಜ್ಯಗಳು ತಲುಪುವುದರಲ್ಲಿವೆ. ಕೇರಳ ರಾಜ್ಯ, ನವೆಂಬರ್ 1, 2016 ರಲ್ಲಿ ಈ ಕುರಿತಂತೆ ಘೋಷಣೆ ಮಾಡಿ, ಕೇರಳ ಭಾರತದಲ್ಲೇ ಬಯಲು ಶೌಚಾಲಯ ಮುಕ್ತ ಮೂರನೇ ರಾಜ್ಯ ಎಂದಿತ್ತು.

Leave a Comment