ಸ್ವಚ್ಛವಾಯಿತು ಹಳೆಯಂಗಡಿ!

ಸಂಜೆವಾಣಿ ವರದಿ ಫಲಶ್ರುತಿ
ಹಳೆಯಂಗಡಿ, ನ.೧೪- ಮನೆ-ಮನೆಗಳಿಂದ ಸಂಗ್ರಹಿಸಲ್ಪಟ್ಟ ತ್ಯಾಜ್ಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಸ್ಥಳೀಯರ ನಾಗರಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಹಳೆಯಂಗಡಿ ಗ್ರಾಮ ಪಂಚಾಯತ್‌ಗೆ ಇದೀಗ ಬುದ್ಧಿ ಬಂದಂತಿದ್ದು, ಈ ಬಗ್ಗೆ ಸಂಜೆವಾಣಿಯ ಸಚಿತ್ರ ವರದಿ ಫಲಶ್ರುತಿ ಕಂಡಿದೆ. ರಸ್ತೆ ಬದಿಯಲ್ಲೇ ಎಲ್ಲೆಂದರಲ್ಲಿ ಬಿದ್ದುಕೊಂಡು ನಾರುತ್ತಿದ್ದ ತ್ಯಾಜ್ಯಕ್ಕೆ ನಿನ್ನೆ ಪಂಚಾಯತ್ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದು, ನಾಗರಿಕರು ನಿಟ್ಟುಸಿರು ಬಿಟ್ಟಂತಾಗಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ-ಮನೆಗಳಿಂದ ಸಂಗ್ರಹಿಸಲ್ಪಟ್ಟ ತ್ಯಾಜ್ಯಕ್ಕೆ ಸೂಕ್ತ ಜಾಗ ಕಲ್ಪಿಸಬೇಕಾದ್ದು ಪಂಚಾಯತ್‌ಗಳ ಕರ್ತವ್ಯ. ಜನವಸತಿ ಇಲ್ಲದ ಪ್ರದೇಶಗಳಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕಾದ ಹಳೆಯಂಗಡಿ ಪಂಚಾಯತ್ ಮಾತ್ರ ರಾ.ಹೆ. ೬೬ರ ಇಕ್ಕೆಲದಲ್ಲಿ ಸುರಿಯುತ್ತಿತ್ತು. ಪ್ರತಿನಿತ್ಯ ತ್ಯಾಜ್ಯ ಸುರಿಯುತ್ತಿರುವ ಕಾರಣ ತ್ಯಾಜ್ಯ ರಾಶಿ ದಿನೇ ದಿನೇ ಬೆಳೆಯುತ್ತಿದ್ದು ಜನರು ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ತ್ಯಾಜ್ಯಕ್ಕೆ ರಾಷ್ಟ್ರೀಯ ಹಸಿರು ಪೀಠದ ಆದೇಶದ ವಿರುದ್ಧವಾಗಿ ಬೆಂಕಿ ಕೊಡಲಾಗುತ್ತಿತ್ತು. ಇದರಿಂದ ಸ್ಥಳೀಯ ನಾಗರಿಕರು ಕಸದ ವಾಸನೆಯ ಜೊತೆಗೆ ಹೊಗೆಯಿಂದ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದರು. ಕಳೆದೊಂದು ವರ್ಷದಿಂದ ಇದೇ ಪರಿಸ್ಥಿತಿ ಮುಂದುವರೆದ್ದ ಹಿನ್ನೆಲೆಯಲ್ಲಿ ಯಾರೂ ಕೂಡ ರಸ್ತೆಯಲ್ಲಿ ಸಂಚರಿಸದಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆ ಬಗ್ಗೆ ಸಂಜೆವಾಣಿ ಪತ್ರಿಕೆ ನವೆಂಬರ್ ೯ರಂದು ಸಚಿತ್ರ ವರದಿ ಪ್ರಕಟಿಸಿತ್ತು. ಇದೀಗ ವರದಿಗೆ ಸ್ಪಂದಿಸಿರುವ ಪಂಚಾಯತ್ ಜನಪ್ರತಿನಿಧಿಗಳು ತ್ಯಾಜ್ಯ ಸಮಸ್ಯೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ. ಒಟ್ಟಿನಲ್ಲಿ ಸಂಜೆವಾಣಿ ಪತ್ರಿಕೆಯ ವರದಿಗೆ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿದಿದೆ.

Leave a Comment