ಸ್ವಚ್ಛತಾ ಕರ್ಮಿಗಳು, ಪತ್ರಿಕಾ ವಿತರಕರಿಗೆ ಸನ್ಮಾನ

ಪಿರಿಯಾಪಟ್ಟಣ: ಮೇ.31- ಚಿತ್ರನಟ ಡಾ.ವಿ.ರವಿಚಂದ್ರನ್ ಅವರ ಅಭಿಮಾನಿ ಸಂಘ ಕೇವಲ ಚಿತ್ರರಂಗಕ್ಕೆ ಸೀಮಿತವಾಗದೆ ಸಮಾಜಮುಖೀ ಕೆಲಸಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದು ಪಟ್ಟಣದ ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್ ಮುಖ್ಯಸ್ಥ ಡಾ.ಪ್ರಕಾಶ್ ಬಾಬುರಾವ್ ತಿಳಿಸಿದರು.
ಪಿರಿಯಾಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಮೈಸೂರು ಜಿಲ್ಲಾ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಕ್ರೇಜಿಸ್ಟಾರ್ ಡಾ.ವಿ.ರವಿಚಂದ್ರನ್ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಬಸ್ ನಿಲ್ದಾಣದ ಸ್ವಚ್ಛತಾ ಕರ್ಮಿಗಳು ಹಾಗೂ ಕೆಲ ಪತ್ರಿಕಾ ವಿತರಕರನ್ನು ಸಂಘದ ವತಿಯಿಂದ ಸನ್ಮಾನಿಸಿ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು, ಕನ್ನಡ ಚಿತ್ರರಂಗವನ್ನು ಭಾರತ ಚಿತ್ರರಂಗದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಡಾ.ವಿ.ರವಿಚಂದ್ರನ್ ಅವರ ತಂದೆ ಎನ್.ವೀರಸ್ವಾಮಿ ಅವರಿಗೆ ಸೇರುತ್ತದೆ, ತಂದೆಯಂತೆಯೇ ಅವರ ಮಗ ಸಹ ಚಿತ್ರರಂಗದಲ್ಲಿ ವಿಶೇಷ ತಾಂತ್ರಿಕ ಗುಣಗಳನ್ನು ಅಳವಡಿಸಿಕೊಂಡು ಪ್ರಸಿದ್ಧಿಯಾಗಿರುವುದು ಶ್ಲಾಘನೀಯ, ಎಲ್ಲರೂ ಸಮುದಾಯದ ಅಂತರ ಕಾಯ್ದುಕೊಂಡು ಕಡ್ಡಾಯ ಮಾಸ್ಕ್ ಧರಿಸಿ ಕೋರೋನಾ ಸೋಂಕಿನಿಂದ ದೂರವಿರುವಂತೆ ಕೋರಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್. ಆರ್ ಕಾಂತರಾಜು ಮಾತನಾಡಿ ಚಿತ್ರ ನಟರ ಅಭಿಮಾನಿಗಳು ದುಂದು ವೆಚ್ಚದ ಮೂಲಕ ಕಟೌಟ್ಗಳಿಗೆ ಕ್ಷೀರಾಭಿಷೇಕ ಹೂವಿನ ಅಲಂಕಾರ ಮಾಡುತ್ತಿದ್ದರೆ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಹಾಗೂ ಪದಾಧಿಕಾರಿಗಳು ಕೊರೊನಾ ವಾರಿಯರ್ಸ್ ಗಳಲ್ಲಿ ಒಬ್ಬರಾದ ಸ್ವಚ್ಛತಾ ಕರ್ಮಿಗಳು ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನಿಸಿ ದಿನಸಿ ಕಿಟ್ ವಿತರಿಸಿರುವುದು ಶ್ಲಾಘನೀಯ ಎಂದರು.
ಸಂಘದ ಜಿಲ್ಲಾಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಮಾತನಾಡಿ ಚಿತ್ರನಟ ಡಾ.ವಿ.ರವಿಚಂದ್ರನ್ ಅವರ ಅಭಿಮಾನಿ ಸಂಘಗಳಲ್ಲಿ ಪ್ರಪ್ರಥಮವಾಗಿ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘ ಪ್ರಾರಂಭವಾಗಿ ಸತತ 27 ವರ್ಷಗಳಲ್ಲಿಯೂ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡು ಅವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಿದೆ, ಈ ಬಾರಿಯೂ ರಾಜ್ಯಾಧ್ಯಕ್ಷರಾದ ಜೆ.ಕೆ ಮೋಹನ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಬಿ.ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಡಾ.ವಿ.ರವಿಚಂದ್ರನ್ ಅವರ ಸಲಹೆಯಂತೆ ಅದ್ಧೂರಿ ಆಚರಣೆಗೆ ನಿರ್ಬಂಧ ಹೇರಿ ಸರಳವಾಗಿ ಆಚರಿಸುವುದರ ಮೂಲಕ ಕೊರೊನಾ ಜಾಗೃತಿ ಮೂಡಿಸಿ ವಾರಿಯರ್ಸ್ ಗಳಿಗೆ ಗೌರವಿಸಲಾಗುತ್ತಿದೆ ಎಂದರು.
ಇದೇ ವೇಳೆ ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಸಿಹಿ ಹಂಚಲಾಯಿತು.
ಈ ಸಂದರ್ಭ ಸಾರಿಗೆ ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್, ಸಂಚಾರ ನಿಯಂತ್ರಕರಾದ ರಮೇಶ್ ಗೌಡ, ಚೆಲುವಯ್ಯ, ಚಾಲಕ, ನಿರ್ವಾಹಕ, ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ವೀರೇಶ್, ವಕೀಲೆ ಬೇಬಿ ಮಂಜುಳಾ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎನ್ ದೇವೇಗೌಡ, ಪತ್ರಕರ್ತರಾದ ಇಂತಿಯಾಜ್ ಅಹಮದ್, ಕೆ.ಪಿ ವೆಂಕಟೇಶ್, ಕೆ.ಪಿ ಪವನ್ ಕುಮಾರ್, ಪಿ.ಡಿ ಪ್ರಸನ್ನ, ಹಾಜರಿದ್ದರು.

Share

Leave a Comment