‘ಸ್ವಕ್ಷೇತ್ರದಲ್ಲೇ ರಾಜಕೀಯ ನಡೆಸುತ್ತಿರುವ ಖಾದರ್’

ಬಂಟ್ವಾಳ, ಆ.೨೨- ತುಂಬೆ ಗ್ರಾಮಪಂಚಾಯತ್ ಭೇಟಿಯನ್ನು ರಾಜಕೀಯ ಕಾರಣಕ್ಕೆ ದಿಢೀರ್ ರದ್ದುಗೊಳಿಸಿದ ರಾಜ್ಯದ ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣ ಬೈರೇ ಗೌಡ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ವರ್ತನೆ ಖಂಡನೀಯವಾಗಿದ್ದು, ಇದು ತುಂಬೆ ಗ್ರಾಮಸ್ಥರಿಗೆ ಮಾಡಿದ ಅವಮಾನ ಎಂದು ತುಂಬೆ ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಬಿ.ತುಂಬೆ ಆರೋಪಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ನಿನ್ನೆ ಸಂಜೆ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವದ್ವಯರು ಮಂಗಳವಾರದಂದು ತುಂಬೆ ಗ್ರಾಮಕ್ಕೆ ಭೇಟಿ ನೀಡುವ ಕಾರ್ಯಕ್ರಮದ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುತ್ತೋಲೆ ನೀಡಿದ್ದರು. ಅದರಂತೆ ಗ್ರಾಮಪಂಚಾಯತ್‌ನ ಆಡಳಿತ ಹಾಗೂ ಸಿಬ್ಬಂದಿವರ್ಗ ಪೂರ್ವ ತಯಾರಿಯೊಂದಿಗೆ ಸಚಿವದ್ವಯರನ್ನು ಸ್ವಾಗತಿಸಲು, ಪಕ್ಷಬೇಧ ಮರೆತು ಸಜ್ಜಾಗಿದ್ದೆವು. ಅಲ್ಲದೆ ಈ ಕುರಿತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರ ಜೊತೆ ನಿರಂತರ ಸಂಪರ್ಕದಲ್ಲಿದ್ದೆವು. ಆದರೆ ಕೊನೇ ಗಳಿಗೆಯಲ್ಲಿ ತುಂಬೆ ಗ್ರಾಮಪಂಚಾಯತ್ ಭೇಟಿಯನ್ನು ಸಚಿವದ್ವಯರು ರದ್ದುಪಡಿಸಿರುವುದು ನಮಗೆ ಬೇಸರ ತಂದಿದೆ ಎಂದರು.
ತಾಲೂಕಿನ ತಾಲೂಕು ಪಂಚಾಯತ್ ಸುತ್ತೋಲೆಯಂತೆ ತಾಲೂಕಿನ ಮಾಣಿ, ನೆಟ್ಲ ಮುಡ್ನೂರು, ಗೋಳ್ತಮಜಲು, ಕಳ್ಳಿಗೆ ಹಾಗೂ ತುಂಬೆ ಗ್ರಾಮಪಂಚಾಯತ್ ಗೆ ಭೇಟಿ ನೀಡಬೇಕಿತ್ತು. ಆದರೆ ತುಂಬೆ ಹೊರತು ಪಡಿಸಿ ಎಲ್ಲಾ ಪಂಚಾಯತ್‌ಗಳಿಗೆ ಸಚಿವರು ಭೇಟಿ ನೀಡಿದ್ದಾರೆ ಎಂದ ಅವರು, ಕೇವಲ ರಾಜಕೀಯ ಉದ್ದೇಶಕ್ಕೆ ಮತ್ತು ತುಂಬೆ ಪಂಚಾಯತ್ ಬಿಜೆಪಿ ಆಡಳಿತದ ಪಂಚಾಯತ್ ಎಂಬ ಕಾರಣಕ್ಕೆ ಸಚಿವರ ಭೇಟಿ ನೀಡದೆ ರಾಜಕೀಯ ತಾರತಮ್ಯ ಮಾಡಿದ್ದಾರೆ ಎಂದವರು ಟೀಕಿಸಿದರು.
ತುಂಬೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಂಗಳೂರು ಮನಪಾಕ್ಕೆ ಕುಡಿಯುವ ನೀರು ಒಯ್ಯುವ ಸ್ಥಾವರ ಇದ್ದರೂ ಈ ಗ್ರಾಮಕ್ಕೆ ನೀರಿನ ಸರಬರಾಜು ಯಾವುದೇ ಸಂಪರ್ಕ ದೊರೆತಿಲ್ಲ. ಬೇಸಿಗೆಯಲ್ಲಿ ಉಪ್ಪು ನೀರು ಕುಡಿಯುವಂತಹ ಸಮಸ್ಯೆ ಎದುರಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫರಾಗಿದ್ದಾರೆ. ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ ತುಂಬೆಯಲ್ಲಿ ಬಿಜೆಪಿ ಆಡಳಿತವಿದೆ ಎಂಬ ಕಾರಣಕ್ಕೆ ನೀರಿನ ಸಂಪರ್ಕ ನೀಡದಂತೆ ಉಸ್ತುವಾರಿ ಸಚಿವ ಯು.ಟಿ. ಖಾದರ್ ತನ್ನ ಸ್ವಕ್ಷೇತ್ರದಲ್ಲಿ ತಾರತಮ್ಯ ತೋರುತ್ತಿದ್ದಾರೆ ಎಂದು ಪ್ರವೀಣ್ ಬಿ. ಹೇಳಿದರು.
ತುಂಬೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ವಳವೂರು ಮಾತನಾಡಿ, ಕಳ್ಳಿಗೆ ಗ್ರಾ.ಪಂ. ನಿಂದ ನೇರವಾಗಿ ಮಾಜಿ ಸಚಿವ ರಮಾನಾಥ ರೈ ಯವರ ಮನೆಗೆ ತೆರಳಿದ ಬಳಿಕ, ನಮ್ಮ ಗ್ರಾ.ಪಂ. ಭೇಟಿ ದಿಡೀರ್ ರದ್ದುಗೊಂಡಿದ್ದು ಸಚಿವರ ಈ ನಡವಳಿಕೆ ಆಕ್ಷೇಪಾರ್ಹ ಎಂದರು.
ಕೇವಲ ರಾಜಕೀಯ ಉದ್ದೇಶಕ್ಕೆ, ಬಿಜೆಪಿ ಗ್ರಾ.ಪಂ. ಎಂಬ ಒಂದೇ ಕಾರಣಕ್ಕೆ ಇಂತಹ ರಾಜಕೀಯ ತಾರತಮ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಗ್ರಾಮಕ್ಕೆ ಭೇಟಿ ಕೊಡಬೇಕಾದ ಸಚಿವರನ್ನೇ ತಡೆಯುವ ಮೂಲಕ ರಮಾನಾಥ ರೈ ಅವರು ಪ್ರಗತಿ ವಿರೋಧಿ ಚಿಂತನೆಗಳನ್ನು ವಿಧಾನ ಸಭಾ ಚುನಾವಣೆಯಲ್ಲಿ ಸೋತ ಬಳಿಕವೂ ಮುಂದುವರಿಸಿದ್ದಾರೆ ಎಂದು ಟೀಕಿಸಿದರು.
ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಲತಾ ಜಿ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Comment