ಸ್ಲಾಬ್ ಮುರಿದು ಕೆಳಗೆ ಬಿದ್ದ ಕ್ರೈನ್ ಆಪರೇಟರ್ ಸಾವು

ಬೆಂಗಳೂರು,ಆ.೨೯-ಯಲಹಂಕದ ರೈಲ್ವೆ ಗಾಲಿ ಅಚ್ಚು ಕಾರ್ಖಾನೆಯಲ್ಲಿ ಸ್ಲಾಬ್ ಮುರಿದು ಕ್ರೈನ್ ಆಪರೇಟರ್ ೬೦ ಅಡಿ ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮತ್ತಿಕೆರೆಯ ಮುತ್ಯಾಲ ನಗರದ ವೈ.ರವಿಶಂಕರ್ ರಾವ್ ಮೃತಪಟ್ಟವರು. ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ರವಿಶಂಕರ್ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ನಿನ್ನೆ ಕಾರ್ಖಾನೆಯಲ್ಲಿ ಕ್ರೈನ್ ಆಪರೇಟ್ ಮಾಡುವಾಗ ಸ್ಲಾಬ್ ಕಟ್ ಆಗಿ ಅನಾಹುತ ಸಂಭವಿಸಿದೆ. ಸುಮಾರು ೬೦ ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ರವಿಶಂಕರ್ ಕೊನೆಯುಸಿರೆಳೆದಿದ್ದಾರೆ ಎಂದು ಯಲಹಂಕ ಉಪನಗರ ಪೊಲೀಸರು ತಿಳಿಸಿದ್ದಾರೆ. ಮ್ಯಾನೇಜ್ ಮೆಂಟ್ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿ ನೌಕರರು ಕಾರ್ಖಾನೆಯ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದು ಹಿರಿಯ ಅಧಿಕಾರಿಗಳು ಧಾವಿಸಿ ಪ್ರತಿಭಟನಾ ನಿರತರ ಮನವೊಲಿಸಿದ್ದಾರೆ.,

Leave a Comment