ಸ್ಲಂ ನಿವಾಸಿಗಳ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮಧುಗಿರಿ, ಆ. ೧೪- ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಕೊಳಚೆ ಪ್ರದೇಶದಲ್ಲಿ ವಾಸಿಸುವ ಕಡು ಬಡವರಿಗೆ 450 ಮನೆಗಳ ನಿರ್ಮಾಣಕ್ಕೆ ಶಾಸಕ ಕೆ.ಎನ್. ರಾಜಣ್ಣ  ಮಹರ್ಷಿ ವಾಲ್ಮೀಕಿ ನಗರ (ಮಂಡರಕಾಲೋನಿ)ದಲ್ಲಿ  ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ಕೆ.ಎನ್. ರಾಜಣ್ಣ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಪಟ್ಟಣದಲ್ಲಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ 450 ಗುಡಿಸಲುಗಳನ್ನು ತೆರವುಗೊಳಿಸಿ ಮನೆಗಳನ್ನು ಮಂಡಳಿ ವತಿಯಿಂದ 3 ಚದರದ ಮನೆ ನಿರ್ಮಿಸಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಥಳೀಯ ನಿವಾಸಿಗಳು ಮನೆ ಖಾಲಿ ಮಾಡಿಕೊಟ್ಟ 6 ತಿಂಗಳಲ್ಲಿ ನಿಮಗೆ ಮನೆ ಪೂರ್ಣ ಮಾಡಿಕೊಡುತ್ತಾರೆ ಮತ್ತು ಇಲ್ಲಿನ ನಿವಾಸಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಶಾಲೆಗೆ ಕಳುಹಿಸದೆ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸಿದರೆ ಅಂತಹ ತಂದೆ- ತಾಯಿಗಳ ವಿರುದ್ದ ಕ್ರಿಮಿನಲ್ ದಾವೆ ಹಾಕಿ ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಮ್ಮ ಜೀವನ ಮಟ್ಟ ಸುಧಾರಣೆಗೆ ವ್ಯಾಪಾರಕ್ಕೆ ಅನುಕೂಲವಾಗಲು ಡಿಸಿಸಿ ಬ್ಯಾಂಕ್‌ನಿಂದ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಮಾಡಿಸಲಾಗುವುದು. ತಾವು ಕೂಡ ಎಲ್ಲರಂತೆ ಉತ್ತಮ ಜೀವನ ನಡೆಸಲು ಬೇಕಾದ ಎಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ಅಗತ್ಯ ನೆರವು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಪುರಸಭಾಧ್ಯಕ್ಷೆ ಎಲ್. ರಾಧಾನಾರಾಯಣ್, ಉಪಾಧ್ಯಕ್ಷ ಎಂ.ಪಿ. ಗಣೇಶ್, ತಾ.ಪಂ. ಅಧ್ಯಕ್ಷೆ ಇಂದಿರಾ, ಎಪಿಎಂಸಿ ಅಧ್ಯಕ್ಷ ಪಿ.ಟಿ. ಗೋವಿಂದಯ್ಯ, ಸದಸ್ಯ ಎಂ.ಆರ್ ಜಗನ್ನಾಥ್, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಅಯೂಬ್, ಸದಸ್ಯರಾದ ಅಲಿಂ, ಸಾಧಿಕ್, ಎಂ.ಎಸ್. ಚಂದ್ರಶೇಖರ್, ಗೋಪಿನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದರ್, ಸಹಾಯಕ ಇಂಜಿನಿಯರ್ ಷಣ್ಮುಖಪ್ಪ, ಗುತ್ತಿಗೆದಾರರಾದ ಜಿ.ಎಂ.ರೆಡ್ಡಿ, ಸಿ.ರಾಮ್‍ರಾವ್, ಪುರಸಭೆ ಇಂಜಿನಿಯರ್ ಶ್ರೀರಂಗ ಮತ್ತಿತರರು ಉಪಸ್ಥಿತರಿದ್ದರು.

Leave a Comment