ಸ್ಮಶಾನದ ಜಾಗ ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಪಿರಿಯಾಪಟ್ಟಣ: ಅ.18- ಒತ್ತುವರಿಯಾಗಿರುವ ಸ್ಮಶಾನದ ಜಾಗವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಅಡಗೂರು ಗ್ರಾಮಸ್ಥರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಹಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಗೂರು ಗ್ರಾಮದ ಸರ್ವೆ ನಂಬರ್ 65 ರಲ್ಲಿ ಒಂದು ಎಕರೆ ಸ್ಮಶಾನದ ಜಾಗವಿದ್ದು ಅದನ್ನು ಗ್ರಾಮದ ಕೆಲವು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಳ್ಳುವ ಮೂಲಕ ಸ್ಮಶಾನಕ್ಕೆ ಜಾಗವಿಲ್ಲದಂತೆ ಮಾಡಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ. ಒತ್ತುವರಿಯಾಗಿರುವಹ ಜಾಗವನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಸಹ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಪ್ರತಿಭಟನಾಕಾರರ ದೂರು ಆಗಿದೆ. ಕಳೆದ ಹದಿನೈದು ದಿನಗಳಿಂದ ಭೂಮಾಪನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸರ್ವೆ ನಡೆಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಸಹ ಈವರೆಗೂ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುವ ಮೂಲಕ ಪ್ರಭಾವಿ ರಾಜಕಾರಣಿಗಳ ವಶೀಲಿಗೆ ಬಲಿಯಾಗಿದ್ದಾರೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಭೂಮಾಪನ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಸ್ಥಳಕ್ಕೆ ಆಗಮಿಸಿ ಸರ್ವೆ ಮಾಡಬೇಕು ಅಲ್ಲಿಯವರೆಗೂ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ತಾಲ್ಲೂಕು ಕಚೇರಿ ಮುಂಭಾಗ ಧರಣಿ ಕುಳಿತರು.
ಸುದ್ದಿ ತಿಳಿದ ಶಿರಸ್ತೇದಾರ್ ವಿನೋದ್ ಕುಮಾರ್ ಪ್ರತಿಭಟನಾಕಾರರ ಬಳಿಗೆ ಆಗಮಿಸಿ ಅವರ ಮನವೊಲಿಸಲು ಪ್ರಯತ್ನಿಸಿದರೂ ಸಹ ಪ್ರತಿಭಟನಾಕಾರರು ಅವರ ಮನವಿಗೆ ಸ್ಪಂದಿಸದೆ ಭೂಮಾಪನ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಸರ್ವೆ ಮಾಡಲು ಕಳಿಸುವಂತೆ ಒತ್ತಾಯಿಸಿದರು ಹಾಗೂ ಸರ್ವೆ ಮಾಡುವವರೆಗೂ ನಾವೆಲ್ಲರೂ ಇಲ್ಲಿಯೇ ಠಿಕಾಣಿ ಹೂಡುವ ಮೂಲಕ ಅಹೋರಾತ್ರಿ ಧರಣಿ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಸುರೇಶ್, ಗ್ರಾಮಸ್ಥರಾದ ಬಿ.ಎನ್.ಸ್ವಾಮಿಗೌಡ, ನಾರಾಯಣ, ಪವಿತ್ರ, ರಶ್ಮಿ, ಸೌಮ್ಯ, ಚಂದ್ರಕಲಾ, ಕೃಷ್ಣೇಗೌಡ, ಸ್ವಾಮಿಗೌಡ, ಮಂಜೇಗೌಡ, ಅಣ್ಣೇಗೌಡ, ಬಲರಾಮ,ರಾಜೇಶ, ಶಿವಣ್ಣ ಶೆಟ್ಟಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment