ಸ್ಫೋಟ 11 ಕಾರ್ಮಿಕರ ಸಾವು : ಕರ್ನೂಲ್ ಬಳಿಯ ಆಲೂರು ಮಂಡಲದಲ್ಲಿ ಘೋರ ದುರಂತ

ಕರ್ನೂಲ್, ಆ. ೪- ಕಲ್ಲುಗಣಿಯಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟಗೊಂಡು 11 ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಕರ್ನೂಲ್ ಜಿಲ್ಲೆಯ ಆಲೂರು ಮಂಡಲ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದೆ.

ಕಲ್ಲುಗಣಿ ಸ್ಫೋಟಿಸಲು ಬಳಸುವ ಜಿಲೆಟಿನ್ ಸ್ಫೋಟಗೊಂಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ರಭಸಕ್ಕೆ ದೇಹಗಳು ಛಿದ್ರ ಛಿದ್ರವಾಗಿದ್ದು ಮೃತರ ಗುರುತು ಪೊಲೀಸರಿಗೆ ಸಾಧ್ಯವಾಗಿಲ್ಲ.

ಸ್ಫೋಟ ಸಂಭವಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡು ಆತಂಕದ ವಾತಾವರಣ ನಿರ್ಮಾಣವಾಯಿತು. ಮೂರು ಟ್ರಾಕ್ಟರ್‌ಗಳು ಮತ್ತು ಶೆಡ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ಕರ್ನೂಲ್ ಎಸ್‌ಪಿ ತಿಳಿಸಿದ್ದಾರೆ. ಈ ಘೋರ ದುರಂತದಲ್ಲಿ ಮೃತಪಟ್ಟವರೆಲ್ಲರೂ ಒರಿಸ್ಸಾ ಮೂಲದ ಕೂಲಿ ಕಾರ್ಮಿಕರು ತಿಳಿದು ಬಂದಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿಬೆಂಕಿಯನ್ನು ನಂದಿಸುವಲ್ಲಿ ಸಫಲವಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದುರ್ಘಟನೆಗೆ ಕಾರಣರಾದವರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ 30 ಮಂದಿ ಕಾರ್ಮಿಕರು ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಸ್ಫೋಟದ ರಭಸಕ್ಕೆ ಮೃತಪಟ್ಟವರ ದೇಹಗಳು ಛಿದ್ರವಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಫೋಟದ ತೀವ್ರತೆಗೆ ಕಲ್ಲುಕ್ವಾರಿ ಸುತ್ತಮುತ್ತಲ 10 ಕಿ.ಮೀ ವ್ಯಾಪ್ತಿಯಲ್ಲಿರುವ ಮನೆಗಳಲ್ಲೂ ಕಂಪನದ ಅನುಭವವಾಗಿದೆ. ಇದರಿಂದಾಗಿ ನಿವಾಸಿಗಳು ಭಯಭೀತರಾಗಿದ್ದಾರೆ. ಮೂಲಗಳ ಪ್ರಕಾರ ಅಕ್ರಮವಾಗಿ ಕಲ್ಲುಗಣಿಗಾರಿಕೆಯನ್ನು ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.

ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಮೃತರ ಕುಟುಂಬ ಸದಸ್ಯರಿಗೆ 5 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ. ಸ್ಫೋಟದ ತೀವ್ರತೆಗೆ ಕೆಲವು ಕಾರ್ಮಿಕರ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಹಲವು ಕಾರ್ಮಿಕರಿಗೆ ಶೇ. 70ರಷ್ಟು ಸುಟ್ಟ ಗಾಯಗಳಾಗಿವೆ. ಅವರನ್ನು ಆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತ ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಕೈಗೊಂಡರು. ಘಟನೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಗಾಯಾಳುಗಳಿಗೆ ಅಗತ್ಯಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡೆಯುವಂತೆಯೂ ಉಪಮುಖ್ಯಮಂತ್ರಿ ಹಾಗೂ ಗಣಿ ಸಚಿವರಿಗೆ ಸೂಚಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಸಚಿವ ಹಾಗೂ ತೆಲುಗುದೇಶಂ ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮನಾಗಿ ನಿಗಾ ವಹಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

Leave a Comment